ಹೊಸನಗರ: ರಾಣಿಬೆನ್ನೂರು – ಬೈಂದೂರು ರಾಷ್ಟ್ರೀಯ ಹೆದ್ದಾರಿಯಾಗಿ 3 ವರ್ಷದ ಹಿಂದೆ ಪರಿವರ್ತಿತಗೊಂಡಿದೆ. ಹೆದ್ದಾರಿಯ ಮೊದಲನೆ ಹಂತದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರಕ್ಕೆ ರೂ.325 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದ್ದು ಶೀಘ್ರದಲ್ಲಿ ಟೆಂಡರ್ ಕೂಡ ಕರೆಯುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ತಾಲೂಕಿನ ನಗರ ಶ್ರೀ ಪಂಚಮುಖೀ ಆಂಜನೇಯ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬೈಂದೂರು, ಕೊಲ್ಲೂರು, ನಿಟ್ಟೂರು, ನಗರ, ಹೊಸನಗರ ಬಟ್ಟೆಮಲ್ಲಪ್ಪ ಸೇರಿದಂತೆ ಬಹುತೇಕ ಊರುಗಳ ಅಭಿವೃದ್ಧಿಗೆ ರಾಷ್ಟ್ರೀಯ ಹೆದ್ದಾರಿ ಸಹಕಾರಿಯಾಗಲಿದೆ ಎಂದರು.
ಸೇತುವೆ ಹಣ ಮಂಜೂರು: ಸಿಗಂದೂರಿನ ಐತಿಹಾಸಿಕ ಸೇತುವೆ ಜೊತೆಗೆ ಬೆಕ್ಕೋಡಿ ಸೇತುವೆ ನಿರ್ಮಾಣಕ್ಕೂ ಕೂಡ 120 ಕೋಟಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಅಲ್ಲದೆ ಮಡೋಡಿ, ಚಿಕ್ಕಪೇಟೆ, ಮತ್ತಿಮನೆ, ಕಾರಣಗಿರಿ, ಅರೋಡಿ ಸೇರಿದಂತೆ 7 ಸೇತುವೆಗಳ ನಿರ್ಮಾಣಕ್ಕು ಕೂಡ ಆದ್ಯತೆ ನೀಡಲಾಗಿದೆ ಎಂದರು. ಪಿಎಂಜಿಎಸ್‌ವೈ ಯೋಜನೆಯಡಿ 14 ಕೋಟಿ ಹಣವನ್ನು ಕೇಂದ್ರದಿಂದ ಜಿಲ್ಲೆಗೆ ತರಲಾಗಿದೆ ಎಂದರು.
ಬಿದನೂರು ಕೋಟೆ ಅಭಿವೃದ್ಧಿಗೆ ಒಂದು ಕೋಟಿ: ಐತಿಹಾಸಿಕ ಬಿದನೂರು ಕೋಟೆ ಅಭಿವೃದ್ಧಿಗೆ ಒಂದು ವರ್ಷದ ಹಿಂದೆಯೇ ಒಂದು ಕೋಟಿ ಹಣವನ್ನು ಇಡಲಾಗಿದೆ.ಅಭಿವೃದ್ಧಿಯ ಬಗ್ಗೆ ಸ್ಥಳೀಯರ ಬೇಡಿಕೆ ಮತ್ತು ಮಾಹಿತಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಮಾಚೇನಹಳ್ಳಿ 100 ಎಕರೆ ಪ್ರದೇಶದಲ್ಲಿ
ಆಹಾರ ಮತ್ತು ಸಾಂಬಾರ ಬೆಳೆ ಪಾರ್ಕ್: ಮೆಣಸು, ಅರಶಿಣ, ಶುಂಠಿ, ಏಲಕ್ಕಿ ಹೀಗೆ ರೈತರು ಉಪಬೆಳೆಗಳನ್ನು ಬೆಳೆಯುತ್ತಿದ್ದು ಅವುಗಳಿಗೆ ಬೆಲೆ ದೊರಕಿಸಿಕೊಡುವ ಹಿನ್ನೆಲೆಯಲ್ಲಿ ಶಿವಮೊಗ್ಗ ಮಾಚೇನಹಳ್ಳಿ ಮದ್ಯದ 100 ಎಕರೆ ಪ್ರದೇಶದಲ್ಲಿ ಆಹಾರ ಮತ್ತು ಸಾಂಬಾರ ಬೆಳೆ ಪಾರ್ಕ್‌ನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಕೇರಳಕ್ಕೆ ಹೋಗುತ್ತಿದ್ದ ಅನುದಾನವನ್ನು ರಾಜ್ಯಕ್ಕೆ ತಂದು ಶಿವಮೊಗ್ಗ ಜಿಲ್ಲೆಯಲ್ಲಿ ಅಭಿವೃದ್ಧಿ ಪಡಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದರು. ಇನ್ನು ಕೊಡಚಾದ್ರಿ ಕೊಲ್ಲೂರು ಕೇಬಲ್ ಯೋಜನೆ ಯಶಸ್ವಿಯಾಗಿ ಸಾಕಾರಗೊಂಡಲ್ಲಿ ತಾಲೂಕಿನಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಚಿತ್ರಣವೇಬದಲಾಗುತ್ತದೆ. ಮಾತ್ರವಲ್ಲ ಊರಿನ ಅಭಿವೃದ್ಧಿ ಕೂಡ ಪರಿಣಾಮಕಾರಿ ಆಗಲಿದೆ ಎಂದರು. ಪಕ್ಷ ಮತ್ತು ಜನ ನನ್ನ ಯೋಗ್ಯತೆ ಮೀರಿ ಜವಾಬ್ದಾರಿ ನೀಡಿದ್ದಾರೆ. ಸಚಿವ ಸ್ಥಾನದ ಬಗ್ಗೆ ಸಂಘಟನೆ ಮತ್ತು ಹೈಕಮಾಂಡ್ ಏನುತೀರ್ಮಾನ ಕೈಗೊಳ್ಳುತ್ತದೆ ಅದೇ ಅಂತಿಮ ಎಂದರು.
ನಗರ ಹೋಬಳಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಎನ್. ವೈ. ಸುರೇಶ್, ಜಿಪಂ ಸದಸ್ಯ ಸುರೇಶ್ ಸ್ವಾಮಿರಾವ್, ಮ್ಯಾಮ್ಕೋಸ್ ಸದಸ್ಯ ಕೆ.ವಿ. ಕೃಷ್ಣಮೂರ್ತಿ, ತಾಪಂ ಸದಸ್ಯ ಕೆ.ವಿ. ಸುಬ್ರಹ್ಮಣ್ಯ, ಅಶ್ವಿನಿ ರಾಜೇಶ್, ಪ್ರಮುಖರಾದ ಎ.ವಿ. ಮಲ್ಲಿಕಾರ್ಜುನ್, ಬಂಕ್ರೀಬೀಡು ಮಂಜುನಾಥ್ ಇದ್ದರು.