Advertisement

ಉಭಯ ಜಿಲ್ಲೆಗಳಲ್ಲಿ  32 ಸಾವಿರ ಮಂದಿಗೆ ಮನೆಯೇ ಇಲ್ಲ  !

12:30 AM Feb 22, 2019 | |

ಮಂಗಳೂರು: ಸರ್ವರಿಗೂ ಸೂರು ಒದಗಿಸುವುದು ನಮ್ಮ ಗುರಿ ಎಂದು ಸರಕಾರಗಳು ಹೇಳುತ್ತಿದ್ದರೂ ರಾಜ್ಯದಲ್ಲಿ 17.91ಲಕ್ಷ ಕುಟುಂಬಗಳು ವಸತಿ ರಹಿತ ಹಾಗೂ 6.47 ಲಕ್ಷ ನಿವೇಶನ ರಹಿತ ಕುಟುಂಬಗಳಿವೆ! 

Advertisement

ಕೇಂದ್ರ ಸರಕಾರದ ಮಾರ್ಗಸೂಚಿಯ ಪ್ರಕಾರ, ವಸತಿ ರಹಿತರ ಹಾಗೂ ನಿವೇಶನ ರಹಿತರನ್ನು ಗುರುತಿಸಲು ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಸೂಚಿಸಲಾಗಿತ್ತು. ಗ್ರಾ.ಪಂ. ವ್ಯಾಪ್ತಿಯಲ್ಲಿ ವಸತಿ ರಹಿತರು, ನಿವೇಶನ ರಹಿತರು ಪಂಚಾಯತ್‌ ಮೂಲಕ ಅರ್ಜಿ ಸಲ್ಲಿಸಿದ್ದರು. ಇದರ ಆಧಾರದಲ್ಲಿ ಇದೀಗ ನಿಗಮವು ವಸತಿ ರಹಿತರು/ನಿವೇಶನ ರಹಿತರ ಪಟ್ಟಿ ಸಿದ್ಧಗೊಳಿಸುತ್ತಿದೆ. ಸದ್ಯ 24 ಲಕ್ಷದಷ್ಟು ಅರ್ಜಿಗಳು ಬಂದಿದ್ದು, ಫೆ. 28ರ ವರೆಗೆ ಅರ್ಜಿ ಸಲ್ಲಿಸಬಹುದಾ ಗಿರುವುದರಿಂದ ಸಂಖ್ಯೆ ಹೆಚ್ಚುವ ಸಂಭವವಿದೆ.
ರಾಜ್ಯಾದ್ಯಂತ ಸಲ್ಲಿಕೆಯಾದ ಅರ್ಜಿಗಳನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಾಗುತ್ತದೆ. ಅರ್ಜಿದಾರರ ವಾಸ್ತವ ಸ್ಥಿತಿ ಹಾಗೂ ಅಗತ್ಯಗಳ ಬಗ್ಗೆ ಸರ್ವೆ ನಡೆಯು ತ್ತದೆ. ಬಳಿಕ ಅರ್ಹರ ಅಂತಿಮ ಪಟ್ಟಿ ಸಿದ್ಧವಾಗಲಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ವಸತಿ/ನಿವೇಶನದ ಯಾವುದೇ ಯೋಜನೆಗಳು ಈ ಪಟ್ಟಿಯ ಫಲಾನುಭವಿಗಳ ಆಧಾರದಲ್ಲೇ ಆಯ್ಕೆ ನಡೆಯಲಿದೆ.
 
ಪ್ರಧಾನ ಮಂತ್ರಿ ಆವಾಸ್‌ ಯೋಜನೆ (ಗ್ರಾ) ಅಡಿ ಸಾಮಾಜಿಕ ಆರ್ಥಿಕ ಜಾತಿ ಜನಗಣತಿ 2011ರ ಪಟ್ಟಿಗೆ ಕೇಂದ್ರ ಸರಕಾರದ ಮಾರ್ಗಸೂಚಿಯ ಪ್ರಕಾರ, ವಸತಿ ರಹಿತರ ಹಾಗೂ ನಿವೇಶನ ರಹಿತರನ್ನು ಗುರುತಿಸಿ 2018ರ ನ. 30ರೊಳಗೆ ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮದ ವೆಬ್‌ಸೈಟ್‌ನಲ್ಲಿ ನಮೂದಿಸಲು ತಿಳಿಸಲಾಗಿತ್ತು. ಆದರೆ, ಈ ಪಟ್ಟಿಯಲ್ಲಿ ಅರ್ಹರ ಹೆಸರು ಕೈಬಿಟ್ಟು ಹೋಗದಂತೆ ಹಾಗೂ ಅನರ್ಹರು ಸೇರ್ಪಡೆಯಾಗದಿರುವ ಬಗ್ಗೆ ಮತ್ತೂಮ್ಮೆ ಪರಿಶೀಲಿಸಲು ಫೆ. 28ರ ವರೆಗೆ ಅವಕಾಶ ನೀಡಲಾಗಿದೆ. ಈ ಅವಧಿಯೊಳಗೆ ಗ್ರಾಮ ಮಟ್ಟದಲ್ಲಿ ಪರಿಶೀಲನೆ ನಡೆಯಬೇಕಿದೆ. ಒಂದುವೇಳೆ ಅರ್ಹರು ಕೈಬಿಟ್ಟು ಹೋದಲ್ಲಿ ಸಂಬಂಧಪಟ್ಟ ಗ್ರಾ.ಪಂ.ನ ಪಿಡಿಒಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ನಿಗಮವು ಎಲ್ಲಾ ಜಿ.ಪಂ. ಗಳ ಮೂಲಕ ಗ್ರಾ.ಪಂ.ಗಳಿಗೆ ಸೂಚನೆ ನೀಡಿದೆ.
 
ಕರಾವಳಿಯಲ್ಲಿ 31927 ವಸತಿ ರಹಿತರು 
ದ.ಕ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ದಾಖಲಾಗಿರುವ ಅರ್ಜಿಗಳ ಪ್ರಕಾರ, 17,234 ವಸತಿ ರಹಿತರು ಹಾಗೂ 27,384 ನಿವೇಶನ ರಹಿತರಿದ್ದಾರೆ. ಉಡುಪಿಯಲ್ಲಿ 14,693 ವಸತಿ ರಹಿತರು ಹಾಗೂ 32,028 ನಿವೇಶನ ರಹಿತರಿದ್ದಾರೆ. ಎರಡೂ ಜಿಲ್ಲೆಯಲ್ಲಿ ಒಟ್ಟು 31,927 ವಸತಿ ರಹಿತರು ಇದ್ದಾರೆ. ಇದು ಸದ್ಯಕ್ಕೆ ನಿಗಮದಲ್ಲಿ ನಮೂದಾದ ಅರ್ಜಿಗಳಾಗಿದ್ದು, ಇನ್ನು ಸೇರ್ಪಡೆ ಹಾಗೂ ಅನರ್ಹರ ಹೆಸರನ್ನು ಕೈಬಿಡಬೇಕಿದೆ. ಆ ಬಳಿಕ ಅಂತಿಮ ಪಟ್ಟಿ ಸಿದ್ಧವಾಗಲಿದೆ. 

ಪ್ರಸ್ತುತ ಹೆಚ್ಚು ಅರ್ಜಿ 
ಸಲ್ಲಿಕೆಯಾಗಿರುವ ಜಿಲ್ಲೆಗಳು

ಜಿಲ್ಲೆ     ವಸತಿ ರಹಿತ ಕುಟುಂಬ 
ಬೆಳಗಾವಿ     2,02,984 
ಕಲಬುರ್ಗಿ     1,56,030 
ರಾಯಚೂರು     1,07,254 
ವಿಜಯಪುರ     93,751 
ಮಂಡ್ಯ     90,837

ಜಿಲ್ಲೆ    ನಿವೇಶನರಹಿತ ಕುಟುಂಬ
ಬೆಂಗಳೂರು ನಗರ     40368 
ಮೈಸೂರು     40850 
ಮಂಡ್ಯ     38551 
ಚಾಮರಾಜನಗರ     37612 
ಚಿಕ್ಕಮಗಳೂರು     32656

– ದಿನೇಶ್‌ ಇರಾ

Advertisement
Advertisement

Udayavani is now on Telegram. Click here to join our channel and stay updated with the latest news.

Next