ಹಾವೇರಿ: ಅತಿವೃಷ್ಟಿ ಹಾಗೂ ನೆರೆಯಿಂದ ರಾಜ್ಯದಲ್ಲಿ ಅಂದಾಜು 32 ಸಾವಿರ ಕೋಟಿ ರೂ.ಗಳಷ್ಟು ನಷ್ಟವಾಗಿದೆ. ಕೇಂದ್ರ ಅಧ್ಯಯನ ತಂಡ ಹಾನಿ ವೀಕ್ಷಿಸಿದ್ದು, ನಾಳೆ ಕೇಂದ್ರಕ್ಕೆ ವರದಿ ಸಲ್ಲಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ರಾಜ್ಯದಲ್ಲಿ ಉಂಟಾಗಿದ್ದ ಸತತ ಬರಗಾಲ ನಿರ್ವಹಣೆ ಚಿಂತನೆಯಲ್ಲಿರುವಾಗಲೇ ಅತಿವೃಷ್ಟಿ ಎದುರಾಗಿದೆ. ಪ್ರವಾಹದಿಂದ ಅಪಾರ ಹಾನಿಯಾಗಿದೆ. ಈ ಕುರಿತು ಪ್ರಧಾನಮಂತ್ರಿಯವರನ್ನು ಭೇಟಿಯಾಗಿ ಪರಿಸ್ಥಿತಿ ವಿವರಿಸಿದ್ದೇನೆ. ಅತಿವೃಷ್ಟಿ ಪರಿಹಾರ ಕೈಗೊಳ್ಳಬಹುದು, ಯಾವುದೇ ತೊಂದರೆ ಇಲ್ಲ. ಆದರೆ ಬರ ಎದುರಿಸುವುದು ಕಷ್ಟ ಎಂದು ಅವರು ಹೇಳಿದ್ದರು. ಮಳೆಯಿಂದ ರಾಜ್ಯದ ಎಲ್ಲ ಜಲಾಶಯಗಳು ತುಂಬಿವೆ. ಜನರು ಬರದ ಸಮಸ್ಯೆಯಿಂದ ಪಾರಾಗಿದ್ದಾರೆ ಎಂದರು.
ಎಷ್ಟೇ ಕಷ್ಟವಾದರೂ ಸಂತ್ರಸ್ತರಿಗೆ ಪರಿಹಾರ ನೀಡುವುದು ನಮ್ಮ ಆದ್ಯತೆಯಾಗಿದೆ. ವಿವಿಧ ಯೋಜನೆಗಳಲ್ಲಿ ಬೇರೆಯವರಿಗೆ ಮನೆ ಕೊಡುವುದನ್ನು ನಿಲ್ಲಿಸಿ. ಸಂತ್ರಸ್ತ ಕುಟುಂಬಗಳಿಗೆ ಆದ್ಯತೆ ನೀಡಲಾಗುವುದು. ಇತರ ಅಭಿವೃದ್ಧಿ ಕೆಲಸಗಳಿಗಿಂತ ಪರಿಹಾರ, ಪುನರ್ ವಸತಿ ಕಾರ್ಯಕ್ಕೆ ಆದ್ಯತೆ ನೀಡಲಾಗುವುದು. ತುರ್ತಾಗಿ ಸಂತ್ರಸ್ತರಿಗೆ 10ಸಾವಿರ ರೂ. ಪರಿಹಾರ ನೀಡುವ ಕಾರ್ಯ ಶೇ.93ರಷ್ಟು ಪೂರ್ಣಗೊಂಡಿದೆ. ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕಿದೆ. ಸಂತ್ರಸ್ತರಿಗೆ ಮನೆ ನಿರ್ಮಾಣ ಹಾಗೂ ಬೆಳೆಹಾನಿ ಪರಿಹಾರ, ಮೂಲ ಸೌಕರ್ಯಗಳ ಪುನರ್ ಸ್ಥಾಪನೆಗೆ ಅನುದಾನ ಒದಗಿಸಲಾಗುವುದು ಎಂದರು.
ಈಗಾಗಲೇ ಜಿಲ್ಲೆಗೆ 20 ಕೋಟಿ ರೂ. ಹೆಚ್ಚುವರಿ ಅನುದಾನ ಒದಗಿಸಲಾಗಿದೆ. ಪರಿಹಾರ ಮತ್ತು ಪುನರ್ ವಸತಿಗೆ ಅನುದಾನ ಕೊರೆತ ಇಲ್ಲ. ಎಷ್ಟು ಅನುದಾನ ಬೇಕೋ ಅಷ್ಟು ನೀಡಲಾಗುವುದು. ಅಧಿಕಾರಿಗಳು ಸಂತ್ರಸ್ತರ ಮತ್ತು ರೈತರ ಮಧ್ಯ ಉತ್ತಮ ಸಂಬಂಧ ಇಟ್ಟುಕೊಂಡು ಮಾನವೀಯ ದೃಷ್ಟಿಯಿಂದ ಕೆಲಸ ಮಾಡಬೇಕು ಎಂದರಲ್ಲದೇ ಶಾಲಾ ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಶಾಲೆಗಳ ಕಟ್ಟಡ ದುರಸ್ತಿ, ಪುನರ್ ನಿರ್ಮಾಣ ಕಾರ್ಯ ಕೈಗೊಳ್ಳಬೇಕು ಎಂದರು.
Advertisement
ಜಿಪಂ ಸಭಾಂಗಣದಲ್ಲಿ ಶನಿವಾರ ಸಂಜೆ ಜಿಲ್ಲೆಯ ನೆರೆ ಹಾಗೂ ಅತಿವೃಷ್ಟಿ ಹಾನಿ ಕುರಿತು ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಬಿಡುಗಡೆ ಮಾಡುವುದು ತಡವಾದರೂ ನೆರೆ ಪರಿಹಾರ ಕಾರ್ಯಕ್ಕೆ ಯಾವುದೇ ತೊಂದರೆ ಯಾಗದಂತೆ ಅನುದಾನ ಒದಗಿಸಲಾಗುವುದು ಎಂದರು.
Related Articles
Advertisement
ನೆರೆಯಿಂದ ಪದೆ ಪದೇ ಸಮಸ್ಯೆ ಎದುರಿಸುತ್ತಿರುವ 19 ಗ್ರಾಮಗಳನ್ನು ಶಾಶ್ವತವಾಗಿ ಸ್ಥಳಾಂತರಿಸಬೇಕಿದೆ. ವರದಾ ನದಿ ದಡದ 19 ಗ್ರಾಮಗಳಲ್ಲಿ ತಡೆಗೋಡೆ ನಿರ್ಮಿಸಬೇಕಿದೆ. ಮನೆ ನಿರ್ಮಾಣ, ದುರಸ್ತಿ, ಬೆಳೆಹಾನಿ ಹಾಗೂ ಮೂಲ ಸೌಕರ್ಯಗಳಿಗೆ ಅಗತ್ಯ ಅನುದಾನ ಒದಗಿಸಬೇಕೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದರು.
ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಜಿಲ್ಲೆಯ ಅತಿವೃಷ್ಟಿ ಹಾಗೂ ನೆರೆ ಹಾನಿ ವಿವರಿಸಿದರು. ಕಂದಾಯ ಸಚಿವ ಆರ್. ಅಶೋಕ, ಶಾಸಕರಾದ ಸಿ.ಎಂ.ಉದಾಸಿ. ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಜಿ ಪಂ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ, ಉಪಾಧ್ಯಕ್ಷೆ ಗಿರಿಜವ್ವ ಬ್ಯಾಲದಹಳ್ಳಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ| ವಿಶಾಲ್ ಇತರರು ಇದ್ದರು.
• ಕೇಂದ್ರ ಅಧ್ಯಯನ ತಂಡದಿಂದ ಹಾನಿ ವೀಕ್ಷಣೆ
• ನಾಳೆ ಕೇಂದ್ರಕ್ಕೆ ವರದಿ
ಬೊಮ್ಮಾಯಿಗೆ ಉಸ್ತುವಾರಿ ಸಚಿವರು ಎಂದ ಸಿಎಂ:
ಸಿಎಂ ಯಡಿಯೂರಪ್ಪ ಸಭೆ ಆರಂಭದಲ್ಲಿ ಸಚಿವ ಬಸವರಾಜ ಬೊಮ್ಮಾಯಿಯವರನ್ನು ‘ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ’ ಎಂದು ಸಂಬೋಧಿಸಿದರು. ಇನ್ನೂ ಅಧಿಕೃತವಾಗಿ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಆಗದೆ ಇರುವುದರಿಂದ ಮುಖ್ಯಮಂತ್ರಿಯವರು ಈ ರೀತಿ ಹೇಳಿರುವುದು ಜಿಲ್ಲಾ ಉಸ್ತುವಾರಿ ಸಚಿವರು ಯಾರಾಗುತ್ತಾರೆಂಬ ಕುತೂಹಲ ಇನ್ನಷ್ಟು ಹೆಚ್ಚಿಸಿತು.