Advertisement

ಗ್ರೆನೇಡ್‌ ದಾಳಿಗೆ ವ್ಯಕ್ತಿ ಬಲಿ

12:30 AM Mar 08, 2019 | Team Udayavani |

ಜಮ್ಮು/ವಿಶ್ವಸಂಸ್ಥೆ:  ಇಲ್ಲಿನ ಜನನಿಬಿಡ ಬಸ್‌ಸ್ಟಾಂಡ್‌ ಮೇಲೆ ಗುರುವಾರ ಬೆಳಗ್ಗೆ  11:50ರ ಸುಮಾರಿಗೆ ಉಗ್ರರು ನಡೆಸಿದ ಗ್ರೆನೇಡ್‌ ದಾಳಿಗೆ ಉತ್ತರಾಖಾಂಡ ಮೂಲದ ಯುವಕ ಬಲಿಯಾಗಿದ್ದು, 32 ಜನರು ಗಾಯಗೊಂಡಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ದಾಳಿಕೋರನೆಂದು ಹೇಳಲಾದ ಯಾಸಿರ್‌ ಜಾವೇದ್‌ ಬಟ್‌ ಎಂಬಾತನನ್ನು ಬಂಧಿಸಲಾಗಿದ್ದು, ಈತ ನಿಷೇಧಿತ ಹಿಜ್ಬುಲ್‌ ಮುಜಾಹಿದ್ದೀನ್‌ ಸಂಘಟನೆಯ ಆಣತಿಯ ಮೇರೆಗೆ ಈ ದಾಳಿ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಉತ್ತರಾಖಾಂಡದ ಹರಿದ್ವಾರ ನಿವಾಸಿಯಾದ ಶರಿಕ್‌ ಎಂದು ಗುರುತಿಸಲಾಗಿದೆ. ಗ್ರೆನೇಡ್‌ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಗಾಯಗೊಂಡ 32 ಜನರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಇವರಲ್ಲಿ ಇಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ನೀಡಿರುವ ಜಮ್ಮುವಿನ ಪೊಲೀಸ್‌ ಮಹಾ ನಿರ್ದೇಶಕ ಎಂ.ಕೆ. ಸಿನ್ಹಾ, “ಬಂಧಿತ ಯಾಸಿರ್‌ ಜಾವೇದ್‌ ಬಟ್‌, ಕುಲ್ಗಾಮ್‌ನ ಖಾನೊ³àರಾ-ದಸೀನ್‌ ಹಳ್ಳಿಯವನಾಗಿದ್ದು, ಈತ ಹಿಜ್ಬುಲ್‌ ಮುಜಾಹಿದ್ದೀನ್‌ನ ಜಿಲ್ಲಾ ಕಮಾಂಡರ್‌ ಆಗಿರುವ ಫಾರೂಕ್‌ ಅಹ್ಮದ್‌ ಬಟ್‌ ಅಲಿಯಾಸ್‌ ಉಮರ್‌ನಿಂದ ದಾಳಿ ನಡೆಸುವ ಆದೇಶ ಪಡೆದಿದ್ದ” ಎಂದು ತಿಳಿಸಿದ್ದಾರೆ.
 
ಮಲಿಕ್‌ ವಿರುದ್ಧ ಕೇಸು: ಕಳೆದ ತಿಂಗಳ  22ರಂದು ಬಂಧಿಸಲ್ಪಟ್ಟಿದ್ದ ಜಮ್ಮು ಕಾಶ್ಮೀರ ಲಿಬರೇಷನ್‌ ಫ್ರಂಟ್‌ (ಜೆಕೆಎಲ್‌ಎಫ್) ಮುಖ್ಯಸ್ಥ ಯಾಸಿನ್‌ ಮಲಿಕ್‌ ವಿರುದ್ಧ 1990ರಲ್ಲಿ ಶ್ರೀನಗರದ ಸನ್ನಾತ್‌ ನಗರದಲ್ಲಿ ನಾಲ್ವರು ಸೇನಾಧಿಕಾರಿಗಳನ್ನು ಗುಂಡಿಕ್ಕಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಸುರಕ್ಷಾ ಕಾಯ್ದೆಯಡಿ (ಪಿಎಸ್‌ಎ) ಹೊಸದಾಗಿ ಪ್ರಕರಣ ದಾಖಲಿಸಲಾಗಿದೆ. ಇದರ ಜತೆಗೆ, 1990ರ ಅವಧಿಯಲ್ಲಿ ಕೇಂದ್ರ ಗೃಹ ಸಚಿವರಾಗಿದ್ದ ಮುಫ್ತಿ ಮಹಮ್ಮದ್‌ ಸಯೀದ್‌  ಪುತ್ರಿ ರುಬಿಯಾ ಸಯೀದ್‌ರನ್ನು ಅಪಹರಿಸಿದ ಪ್ರಕರಣದಲ್ಲೂ ಮಲಿಕ್‌ನನ್ನು  ಆರೋಪಿಯಾಗಿ ಹೆಸರಿಸಲಾಗಿದೆ. 

ಮದ್ರಸಗಳ ಮೇಲೆ ದಾಳಿ: ತನ್ನ ನೆಲದಲ್ಲಿ ಉಗ್ರವಾದಿ ಸಂಘಟನೆಗಳಿಂದ ನಿಯಂತ್ರಣಗೊಳ್ಳುತ್ತಿದ್ದ 182 ಮದ್ರಸಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಸರಕಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ಈ ದಾಳಿಗಳ ಸಂದರ್ಭದಲ್ಲಿ 121 ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ ಎಂದು ಪಾಕಿಸ್ಥಾನ ಸರಕಾರ ಗುರುವಾರ ಹೇಳಿಕೊಂಡಿದೆ. ಈ ಕ್ರಮ ಭಾರತವನ್ನು ಸಮಾಧಾನಪಡಿಸಲು ಮಾಡಿದ ದಾಳಿಗಳಲ್ಲ ಎಂದಿದೆ. 

ದಾಲಿಗಂಜ್‌ನಲ್ಲಿ ನಾಲ್ವರ ಬಂಧನ
ಉತ್ತರ ಪ್ರದೇಶ ರಾಜಧಾನಿ ಲಕ್ನೋದ ದಾಲಿಗಂಜ್‌ ಎಂಬ ಪ್ರದೇಶದಲ್ಲಿ ವ್ಯಾಪಾರ ನಡೆಸುತ್ತಿದ್ದ ಜಮ್ಮು ಮತ್ತು ಕಾಶ್ಮೀರ ಮೂಲದ ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್‌ ಆಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.

Advertisement

ಕುಪ್ವಾರಾ: ಜೈಶ್‌ ಉಗ್ರ ಫಿನಿಶ್‌
ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಗೆ ಸೇರಿದ ಉಗ್ರನನ್ನು ಕೊಲ್ಲಲಾಗಿದೆ. ಕ್ರಾಲ್‌ಗ‌ುಂಡ್‌ ಪ್ರದೇಶದಲ್ಲಿ ಬಿರುಸಿನ ಶೋಧ ಕಾರ್ಯಚರಣೆ ನಡೆಸುವ ವೇಳೆ ಉಗ್ರನ ಇರವು ಪತ್ತೆಯಾಗಿದೆ. 

ಹಫೀಜ್‌ಗೆ ಹಿನ್ನಡೆ
ಮಹತ್ವದ ಬೆಳವಣಿಗೆಯೊಂದರಲ್ಲಿ, ವಿಶ್ವಸಂಸ್ಥೆಯ ನಿಷೇಧಿತ ಉಗ್ರವಾದಿಗಳ ಪಟ್ಟಿಯಿಂದ ತನ್ನ ಹೆಸರನ್ನು ಕೈಬಿಡಬೇಕೆಂದು ಒತ್ತಾಯಿಸಿ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ ಸಲ್ಲಿಸಿದ್ದ ಮನವಿಯನ್ನು ವಿಶ್ವ ಸಂಸ್ಥೆ ತಳ್ಳಿಹಾಕಿದೆ. ಈ ಬಗ್ಗೆ ಭಾರತ, ಅಮೆರಿಕ, ಫ್ರಾನ್ಸ್‌, ಯು.ಕೆ. ಪ್ರಸ್ತಾವನೆ ಸಲ್ಲಿಸಿದ್ದವು. 2008ರ ಮುಂಬೈ ದಾಳಿ, ಫೆ.14ರ ಘಟನೆಗೂ ಜೈಶ್‌ ಸಂಘಟನೆ ಕಾರಣವಾಗಿದೆ. ಇದೇ ವೇಳೆ ಜೈಶ್‌ ಮುಖ್ಯಸ್ಥ  ಮಸೂದ್‌ ಅಜರ್‌ ತೀವ್ರವಾಗಿ ಖಂಡಿಸಿದ್ದಾನೆ. 

ಪಾಕಿಸ್ಥಾನ ಸರಕಾರಕ್ಕೆ 11:41 ನಿಮಿಷಗಳ ಧ್ವನಿ ಸಂದೇಶವೊಂದನ್ನು ರವಾನಿಸಿರುವ ಮಸೂದ್‌, ಪಾಕಿಸ್ಥಾನವು ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ಉಗ್ರರ ವಿರುದ್ಧ ದಮನಕಾರಿಯಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದ್ದಾನೆ. ಜತೆಗೆ, ಮಾಧ್ಯಮಗಳಲ್ಲಿ ಇತ್ತೀಚೆಗೆ ವರದಿಯಾದಂತೆ ತಾನು ಸತ್ತಿಲ್ಲ. ಎಂದಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next