Advertisement

32 ಸಾಧಕರಿಗೊಲಿದ ಕೆಂಪೇಗೌಡ ಪ್ರಶಸ್ತಿ

11:12 AM Sep 11, 2020 | Suhan S |

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆಯನ್ನು ಬೆಂಗಳೂರಿನ ಕೆಂಪೇಗೌಡ ಬಸ್‌ ನಿಲ್ದಾಣ (ಮೆಜೆಸ್ಟಿಕ್‌)ದಲ್ಲಿ ಹಾಗೂ ಬೆಂಗಳೂರಿನ ಪ್ರಮುಖ ಪೇಟೆಗಳಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥ ನಾರಾಯಣ ಹೇಳಿದರು.

Advertisement

ಪಾಲಿಕೆಯ ಕೇಂದ್ರ ಕಚೇರಿ ಗಾಜಿನ ಮನೆಯಲ್ಲಿ ನಡೆದ ಬಿಬಿಎಂಪಿಯ 2020ನೇ ಸಾಲಿನ ಕೆಂಪೇಗೌಡ ಜಯಂತಿ ಹಾಗೂ ಕೆಂಪೇಗೌಡ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಯಾವುದೇ ಜಾತಿಯನ್ನೂ ನೋಡದೆ ಎಲ್ಲ ಜಾತಿಯವರನ್ನು ಸಮಾನವಾಗಿ ನಡೆಸಿಕೊಂಡಿದ್ದರು. ಅವರ ಆದರ್ಶಗಳನ್ನು ಪಾಲಿಸುವ ಹಾಗೂ ಸ್ಮರಿಸುವ ಉದ್ದೇಶದಿಂದ ಕೆಂಪೇಗೌಡ ಪ್ರತಿಮೆ ಸ್ಥಾಪನೆ ಮಾಡಲಾಗುವುದು. ಕೆಂಪೇಗೌಡ ಅವರು ಬೆಂಗಳೂರನ್ನು 360 ಡಿಗ್ರಿ ಪರಿಕಲ್ಪನೆಯಲ್ಲಿ ಅಭಿವೃದ್ಧಿಪಡಿಸಿದ್ದರು. ಈ ಪರಿಕಲ್ಪನೆಯಲ್ಲೇ ಬಿಬಿಎಂಪಿ ಈಗ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಸೆಂಟ್ರಲ್‌ ಪಾರ್ಕ್‌ ಅಭಿವೃದ್ಧಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 23 ಎಕರೆ ಪ್ರದೇಶದಲ್ಲಿ ಕೆಂಪೇಗೌಡ ಅವರ ಸೆಂಟ್ರಲ್‌ ಪಾರ್ಕ್‌ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಇದರಲ್ಲಿ ಕೆಂಪೇಗೌಡರ ಸಾಧನೆ, ಗಡಿಗೋಪುರ, ಕೆರೆ ಹಾಗೂ ಪೇಟೆಗಳ ಪ್ರತಿರೂಪಕ ಇರಲಿದೆ. ಅಲ್ಲದೆ, ಅವರ ಬಗ್ಗೆ ತಿಳಿಸುವ ಇತಿಹಾಸವನ್ನು ಈ ಪಾರ್ಕ್‌ನಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದರು. ಮೇಯರ್‌ ಎಂ. ಗೌತಮ್‌ಕುಮಾರ್‌, ಉಪಮೇಯರ್‌ ರಾಮಮೋಹನ್‌ರಾಜ್‌, ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್‌, ವಿರೋಧ ಪಕ್ಷದ ನಾಯಕರಾದ ಅಬ್ದುಲ್‌ವಾಜಿದ್‌, ನೇತ್ರಾ  ನಾರಯಣ ಹಾಗೂ ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ಇತರರಿದ್ದರು.

ವಿವಾದದಿಂದ ತಪ್ಪಿಸಿಕೊಳ್ಳಲಿಲ್ಲ: ಕೆಂಪೇಗೌಡ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಈ ಬಾರಿಯೂ ವಿವಾದಕ್ಕೆ ಕಾರಣವಾಗಿದೆ. ಆರ್‌ಎಸ್‌ಎಸ್‌ ಹಾಗೂ ಜಮಾತ್‌- ಎ- ಇಸ್ಲಾಮಿ ಸಂಘಟನೆಯಲ್ಲಿ ಗುರುತಿಸಿಕೊಂಡಿರುವವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರು, ಎಲ್ಲರು ವಿವಿಧ ಕ್ಷೇತ್ರದಲ್ಲಿ ಸಾಧನೆಮಾಡಿರುವವರು ಆರ್‌ಎಸ್‌ಎಸ್‌ನವರಿಗೆ ಪ್ರಶಸ್ತಿಪ್ರದಾನ ಮಾಡಬಾರದು ಎಂದು ಎಲ್ಲಿಯಾದರು ಇದೆಯೇ, ಅವರು ಸಮಾಜ ಸೇವೆ ಮಾಡಿದ್ದರೆ ನೀಡಬಹುದು ಎಂದು ಸ್ಪಷ್ಟನೆ ನೀಡಿದರು.

ಒಂದೇ ವ್ಯಕ್ತಿಗೆ ಎರಡು ಬಾರಿ ಪ್ರಶಸ್ತಿ: ಕಾಡಿನ ಮಿತ್ರ ಎಂಬ ರಾಷ್ಟ್ರೀಯ ವಾರ ಪತ್ರಿಕೆಯ ಮೂಲಕ ಗುರುತಿಸಿಕೊಂಡಿದ್ದಾರೆ ಎನ್ನಲಾದ ನಂದಿದುರ್ಗ ಬಾಲುಗೌಡ ಅವರಿಗೆ ಪಾಲಿಕೆ ಎರಡನೇ ಬಾರಿ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಿದೆ. ಈ ಸಂಬಂಧ ಪ್ರತಿಕ್ರಿಯಿಸಿದ ನಂದಿದುರ್ಗ ಬಾಲುಗೌಡ ಅವರು, ಸಂಘನೆಯ ಹೆಸರಿನಲ್ಲಿ ಒಮ್ಮೆ ಹಾಗೂ ವೈಯಕ್ತಿಕವಾಗಿ ಒಮ್ಮೆ ಪಾಲಿಕೆಯಿಂದ ಪ್ರಶಸ್ತಿ ಸ್ವೀಕರಿಸಿದ್ದೇನೆ ಎಂದರು.

Advertisement

ಪ್ರಶಸ್ತಿ ನೀಡಿ ವಾಪಸ್‌ ಪಡೆದ ಪಾಲಿಕೆ: ಡಾ. ಥಹಾ ಮತೀನ್‌ ಎಂಬವರು ಜಮತ್‌- ಎ- ಇಸ್ಲಾಮಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಅವರ ಹೆಸರನ್ನು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರ ಪಟ್ಟಿಯಿಂದ ಪಾಲಿಕೆ ಕೈಬಿಟ್ಟಿದೆ. ಇವರಿಗೆ ಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆಯಾದರೂ, ಪ್ರಶಸ್ತಿ ಮೊತ್ತ ನೀಡದಿರಲು ನಿರ್ಧರಿಸಿದೆ.

ಬಾರಿ ಅಶ್ವರೂಢ ಪ್ರತಿಮೆ ಇಲ್ಲ! :  ಕೆಂಪೇಗೌಡ ಪ್ರಶಸ್ತಿ ಎಂದರೆ ನಾಡಪ್ರಭು ಕೆಂಪೇಗೌಡ ಅವರ ಅಶ್ವರೂಢ ಪ್ರತಿಮೆ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಕೆಂಪೇಗೌಡ ಅವರ ಭಾವ ಚಿತ್ರ ಹಾಗೂ ಬಿಬಿಎಂಪಿ ಲಾಂಚನ ಇರುವ ಸಾಮಾ ನ್ಯ ಪ್ರಶಸ್ತಿ ಫ‌ಲಕ ವಿತರಣೆ ಹಾಗೂ 50 ಸಾವಿರ ನಗದು ನೀಡಲಾಗಿದೆ. ಈ ಬಾರಿ 32 ಜನರಿಗೆ ನೀಡಲಾಗಿದ್ದು, ಇದೇ ಮೊದಲ ಬಾರಿಗೆ ಅತೀ ಕಡಿಮೆ ಜನಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಕೆಂಪೇಗೌಡ ಪ್ರಶಸ್ತಿ ಪಡೆದವರು : ಮೀನಾ ಗಣೇಶ್‌(ವೈದ್ಯಕೀಯ), ಡಾ.ಅಸೀಮಾ ಬಾನು(ವೈದ್ಯಕೀಯ), ನವೀನ್‌ ಬೆನಕಪ್ಪ (ವೈದ್ಯಕೀಯ), ಎಚ್‌. ಸುಬ್ರಹ್ಮಣ್ಯ ಜೋಯಿಸ್‌(ಸರ್ಕಾರಿ ಸೇವೆ), ಕೆ.ಎಚ್‌. ಸುರೇಶ್‌(ಸರ್ಕಾರಿ ಸೇವೆ), ಜಿ. ಶ್ರುತಿ (ಸರ್ಕಾರಿ ಸೇವೆ), ಡಾ. ವೆಂಕಟೇಶ್‌(ಸಮಾಜ ಸೇವೆ), ವಿಜಯ ನಾಯಕ್‌ (ಸಮಾಜ ಸೇವೆ), ಎಂ. ನಾಗರಾಜ್‌(ಸಮಾಜ ಸೇವೆ)ನಂದಿದುರ್ಗ ಬಾಲುಗೌಡ(ಸಮಾಜ ಸೇವೆ), ಜಯರಾಜ್‌(ಸಮಾಜ ಸೇವೆ), ಶಿವಪ್ರಸಾದ್‌ ಮಂಜುನಾಥ್‌(ಸಮಾಜ ಸೇವೆ), ಅಚ್ಯುತ್‌ಗೌಡ(ಸಮಾಜ ಸೇವೆ), ಸಿ.ಆರ್‌. ರಾಕೇಶ್‌(ಸಮಾಜ ಸೇವೆ), ಎ.ಎನ್‌. ಕಲ್ಯಾಣಿ (ಸಮಾಜ ಸೇವೆ), ನಾಗರತ್ನ ರಾಜು (ಸಮಾಜ ಸೇವೆ), ಲೆ.ಜನರಲ್‌ ಪಿ.ಸಿ. ತಿಮ್ಮಯ್ಯ (ವಿವಿಧ ಕ್ಷೇತ್ರ), ಡಾ. ತಸ್ಲಿರ್ಮಿ ಸೈಯದ್‌ (ವಿವಿಧ ಕ್ಷೇತ್ರ), ವೈ.ಸಿ. ಕೃಷ್ಣಮೂರ್ತಿ ನಾಡಿಗ್‌ (ವಿವಿಧ ಕ್ಷೇತ್ರ) ನಿತಿನ್‌ ಕಾಮತ್‌ (ವಿವಿಧ ಕ್ಷೇತ್ರ), ಮನೋಹರ್‌ ಕಾಮತ್‌(ಕ್ರೀಡೆ), ಎನ್‌. ನಾರಾಯಣ್‌ ಸ್ವಾಮಿ (ಕ್ರೀಡೆ), ಎಚ್‌.ಎಸ್‌. ವೇಣುಗೋಪಾಲ್‌ (ಸಂಗೀತ), ರಮ್ಯ ವಸಿಷ್ಠ(ಸಂಗೀತ), ಸಂತೋಷ್‌ ತಮ್ಮಯ್ಯ(ಸಾಹಿತ್ಯ), ಜಯರಾಂ ರಾಯಪುರ(ಸಾಹಿತ್ಯ), ಬಿ.ಕೆ.ಎಸ್‌. ವರ್ಮಾ (ಚಿತ್ರಕಲೆ), ಯಶಸ್ವಿನಿ ಶರ್ಮಾ(ವಾಸ್ತುಶಿಲ್ಪ), ಪಿ. ವಿನಯ್‌ ಚಂದ್ರ (ರಂಗಭೂಮಿ), ನೊಣವಿನಕೆರೆ ರಾಮಕೃಷ್ಣಯ್ಯ(ರಂಗಭೂಮಿ), ಎಸ್‌.ಮಂಜುನಾಥ್‌(ಯೋಗ), ಪ್ರಶಾಂತ್‌ ಗೋಪಾಲ (ಶಾಸ್ತ್ರೀಯನೃತ್ಯ)

 

Advertisement

Udayavani is now on Telegram. Click here to join our channel and stay updated with the latest news.

Next