Advertisement

318 ಮಂದಿ ಅನರ್ಹ ಕಾರ್ಡ್‌ದಾರರ ಪತ್ತೆ : ದಂಡ ವಸೂಲಿ

09:10 AM Jun 27, 2019 | sudhir |

ಕಾಸರಗೋಡು: ಜಿಲ್ಲೆಯಲ್ಲಿ ಅನರ್ಹರಾದ ಆದ್ಯತಾ ಪಟ್ಟಿಯಲ್ಲಿ, ಎ.ಎ.ವೈ. ಪಡಿತರ ಚೀಟಿ ಇರಿಸಿಕೊಂಡಿರುವವರನ್ನು ಪತ್ತೆಮಾಡುವ ತಪಾಸಣೆ ಮುಂದಿನ ದಿನಗಳಲ್ಲಿ ಕಠಿನ ರೂಪದಲ್ಲಿ ಮುಂದುವರಿಯಲಿದೆ ಎಂದು ಜಿಲ್ಲಾ ನಾಗರಿಕ ಪೂರೈಕೆ ಅಧಿಕಾರಿ ತಿಳಿಸಿದ್ದಾರೆ.

Advertisement

ಕಳೆದ ಮೇ 6ರಂದು ಆರಂಭಿಸಿದ್ದ ತನಿಖೆಯಲ್ಲಿ ಈ ವರೆಗೆ ಜಿಲ್ಲೆಯಲ್ಲಿ ಅನರ್ಹರಾದ 318 ಕಾರ್ಡ್‌ ದಾರರ ಪತ್ತೆಯಾಗಿತ್ತು. ಈ ವರೆಗೆ ಅವರು ಈ ಕಾರ್ಡ್‌ ಬಳಸಿ ಪಡೆದ ಪಡಿತರ ಸಾಮಗ್ರಿಗಳ ಮೌಲ್ಯ ರೂಪದಲ್ಲಿ ಪ್ರತಿ ಕಿಲೋಗೆ 29.81 ರೂ.ನಂತೆ ದಂಡ ಪಡೆಯುವ ಕ್ರಮ ಆರಂಭಿಸಲಾಗಿದೆ ಎಂದರು.

ಅನರ್ಹರಾದ ಅನೇಕ ಮಂದಿ ಆದ್ಯತೆ ಪಟ್ಟಿ ಕಾರ್ಡಿಗೆ ಅರ್ಜಿ ಸಲ್ಲಿಸಿದ್ದರೂ, ಜಿಲ್ಲೆಗೆ ಮಂಜೂರು ಮಾಡಿರುವ ಆದ್ಯತೆ ಕಾರ್ಡ್‌ಗಳ ಸಂಖ್ಯೆಯ ಮಿತಿ ತಲಪಿರುವ ಹಿನ್ನೆಲೆಯಲ್ಲಿ ಆದ್ಯತೆ ಕಾರ್ಡ್‌ ಗಳನ್ನು ನೀಡಲು ಸಾಧ್ಯವಾಗದು. ಅನರ್ಹರು ಸ್ವ ಪ್ರೇರಣೆಯಿಂದ ಆದ್ಯತೆ ರಹಿತ ಕಾರ್ಡ್‌ದಾರರ ಪಟ್ಟಿಗೆ ಅರ್ಜಿ ಸಲ್ಲಿಸಿದರೆ, ಅರ್ಹರಿಗೆ ಆದ್ಯತೆ ಕಾರ್ಡ್‌ ನೀಡಿಕೆ ಸಾಧ್ಯ.

ಕಾರ್ಡ್‌ ಒಪ್ಪಿಸಿ ಶಿಕ್ಷೆ ತಪ್ಪಿಸಿಕೊಳ್ಳಿ
ಈಗಾಗಲೇ ಅನರ್ಹರು ಇರಿಸಿಕೊಂಡಿರುವ ಆದ್ಯತೆ ಕಾರ್ಡ್‌ಗಳನ್ನು ನಾಗರಿಕ ಪೂರೈಕೆ ಅ ಧಿಕಾರಿಗೆ ಸಲ್ಲಿಸಿದಲ್ಲಿ ಶಿಕ್ಷೆ ಕ್ರಮಗಳಿಂದ ಹೊರತುಗೊಳ್ಳಬಹುದಾಗಿದೆ. ಆದರೆ ಅನೇಕ ಮಂದಿಗೆ ಸೂಚನೆ ನೀಡಿಯೂ ಕಾರ್ಡ್‌ ಹಿಂದಿರುಗಿಸಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾ, ತಾಲೂಕು ಮಟ್ಟದ ನಾಗರಿಕ ಪೂರೈಕೆ ಅಧಿ ಕಾರಿಗಳ ನೇತೃತ್ವದಲ್ಲಿ ಪಡಿತರ ಇನ್ಸ್‌ಪೆಕ್ಟರರು ಸೇರಿರುವ ತಂಡ ಜಿಲ್ಲೆಯ ವಿವಿಧೆಡೆ ತಪಾಸಣೆ ನಡೆಸುತ್ತಿದೆ. ಈ ರೀತಿ ಪತ್ತೆಯಾಗುವ ಆರೋಪಿಗಳಿಗೆ ದಂಡ ಹೇರಲಾಗುವುದು.

ನಾಗರಿಕ ಪೂರೈಕೆ ನಿರ್ದೇಶಕರಿಂದ ಲಭಿಸಿದ ಮೂರು ತಿಂಗಳಿಗಿಂತ ಅಧಿಕ ಪಡಿತರ ಸಾಮಗ್ರಿ ಖರೀದಿಸದೇ ಇರುವ ಆದ್ಯತೆ ಕಾರ್ಡ್‌ದಾರರು, 65 ವರ್ಷಕ್ಕಿಂತ ಅಧಿಕ ವಯೋಮಾನದ ಮಂದಿ ಮಾತ್ರ ಇರುವ ಕಾರ್ಡ್‌ಗಳು, ಒಬ್ಬರು ಮಾತ್ರ ಇರುವ ಕಾರ್ಡ್‌ಗಳು ಇತ್ಯಾದಿಗಳ ಪರಿಶೀಲನೆ ನಡೆಯುತ್ತಿದೆ. ಪಟ್ಟಿ ಪ್ರಕಾರ ಅನರ್ಹರಾದ 371 ಕಾರ್ಡ್‌ಗಳನ್ನು ಈಗಾಗಲೇ ರದ್ದುಪಡಿಸಲಾಗಿದೆ. ಆನಿವಾಸಿ ಭಾರತೀಯ ಎಂಬ ವಿಚಾರವನ್ನು ಬಚ್ಚಿಟ್ಟು, ಮೃತ‌ರಾದವರ ಹೆಸರು ಹಾಗೇ ಇರಿಸಿ, ಆದ್ಯತಾ ಪಟ್ಟಿಯಲ್ಲಿದ್ದು, ಈಗ ವಿಳಾಸ ಬದಲಿಸಿರುವ ಮಂದಿಯ ಹೆಸರಲ್ಲಿ ಪಡಿತರ ಸಾಮಗ್ರಿಗಳನ್ನು ಪಡೆಯುತ್ತಿರುವ ವಿಚಾರ ಇಲಾಖೆಯ ಗಮನಕ್ಕೆ ಬಂದಿದೆ. ಇವರು ಅಕ್ಷಯ ಕೇಂದ್ರ ಮೂಲಕ ಅರ್ಜಿ ಸಲ್ಲಿಸಬೇಕು. ಪರಿಶೀಲನೆಯಲ್ಲಿ ಲೋಪ ಪತ್ತೆಯಾದರೆ ಕ್ರಮ ಕೈಗೊಳ್ಳಲಾಗುವುದು.

Advertisement

ಕಚೇರಿಗಳನ್ನು ಸಂಪರ್ಕಿಸಿ
ಪಡಿತರ ಚೀಟಿಗಳಲ್ಲಿ ಆಧಾರ್‌ ನಂಬ್ರ ಅಳವಡಿಸದೇ ಇರುವವರು ಅಕ್ಷಯ ಕೇಂದ್ರಗಳ ಮೂಲಕ, ನಾಗರಿಕ ಪೂರೈಕೆ ಕೇಂದ್ರಗಳ ಮೂಲಕ ಸೇರ್ಪಡೆ ಸಾಧ್ಯ. ಎರಡು ಪಡಿತರ ಚೀಟಿಗಳಲ್ಲಿ ಹೆಸರು ಹೊಂದಿರುವ ವ್ಯಕ್ತಿಗಳು ತುರ್ತಾಗಿ ಒಂದರಲ್ಲಿ ಹೆಸರು ತೆರವುಗೊಳಿಸಬೇಕು. ಈ ಸಂಬಂಧ ದೂರುಗಳಿದ್ದಲ್ಲಿ ಈ ಕೆಳಗಿನ ದೂರವಾಣಿ ಸಂಖ್ಯೆಗಳ ಮೂಲಕ ತಿಳಿಸಬೇಕು.

ಆದ್ಯತೆ/ಎ.ಎ.ವೈ. ಕಾರ್ಡ್‌ಗೆ ಅನರ್ಹರಿವರು
ಸರಕಾರಿ/ಅರೆ ಸರಕಾರಿ ಸಿಬಂದಿ, ಸಾರ್ವ ಜನಿಕ ಸಂಸ್ಥೆಗಳ ಸಿಬ್ಬಂದಿ, ಸಹಕಾರಿ ಸಂಸ್ಥೆಗಳ ಸಿಬಂದಿ, ಸೇವಾ ಪಿಂಚಣಿದಾರರು, ಆದಾಯ ತೆರಿಗೆದಾರರು, ವಿದೇಶಗಳಲ್ಲಿ ದುಡಿಯುತ್ತಿರುವವರು, ಸ್ವಂತವಾಗಿ ಒಂದು ಎಕ್ರೆಗಿಂತ ಅಧಿಕ ಜಾಗ ಹೊಂದಿರುವವರು (ಪ. ಪಂಗಡದವರ ಹೊರತಾಗಿ), ಸ್ವಂತವಾಗಿ ಒಂದು ಸಾವಿರ ಚ. ಅಡಿ ವಿಸ್ತೀರ್ಣದ ಮನೆ, ಫ್ಲ್ಯಾಟ್‌, ನಾಲ್ಕು ಚಕ್ರ ವಾಹನ ಹೊಂದಿರುವವರು (ಬದುಕಿಗಾಗಿ ಟ್ಯಾಕ್ಸಿ ಚಲಾಯಿಸುವವರ ಹೊರತಾಗಿ), ಕುಟುಂಬದ ಸದಸ್ಯರಲ್ಲಿ ಯಾರಾದರೂ ಒಬ್ಬರ ಆದಾಯ ತಿಂಗಳಿಗೆ 25 ಸಾವಿರ ರೂ.ಗಿಂತ ಅಧಿಕ ಉಳ್ಳವರು.

Advertisement

Udayavani is now on Telegram. Click here to join our channel and stay updated with the latest news.

Next