ಪಾಟ್ನಾ: ಬಿಜೆಪಿ ಜೊತೆಗಿನ ಮೈತ್ರಿ ಕಡಿದುಕೊಂಡು ಹಳೆಯ ಮಿತ್ರ ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಕೈ ಹಿಡಿದಿರುವ ನಿತೀಶ್ ಕುಮಾರ್ ಅವರು ಇಂದು ತಮ್ಮ ಹೊಸ ಸರ್ಕಾರದ ಸಂಪುಟ ವಿಸ್ತರಣೆ ಮಾಡಲಿದ್ದಾರೆ. ಇದುವರೆಗೆ ಸಿಎಂ ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಮಾತ್ರ ಪ್ರಮಾಣ ವಚನ ಸ್ವೀಕರಿಸಿದ್ದು, 31 ಮಂದಿ ಶಾಸಕರು ಇಂದು ಸಚಿವರುಗಳಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಕಾಂಗ್ರೆಸ್ ಸೇರಿ ಮಹಾ ಘಟಬಂಧನ್ ನ ವಿವಿಧ ಪಕ್ಷಗಳ 31 ಮಂದಿ ಶಾಸಕರು ಇಂದು ಕ್ಯಾಬಿನೆಟ್ ಸೇರಲಿದ್ದಾರೆ. ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಬೆಳಗ್ಗೆ 11.30ಕ್ಕೆ ರಾಜಭವನದಲ್ಲಿ ನಡೆಯಲಿದೆ.
ನಿತೀಶ್ ಕುಮಾರ್ ಅವರು ತಮ್ಮ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಎಲ್ಲಾ ಜೆಡಿಯು ಶಾಸಕರನ್ನು ಕ್ಯಾಬಿನೆಟ್ ನಲ್ಲಿ ಉಳಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ವಿಜಯ್ ಕುಮಾರ್ ಚೌಧರಿ, ಅಶೋಕ್ ಚೌಧರಿ, ಸಂಜಯ್ ಝಾ, ಮದನ್ ಸಾಹ್ನಿ, ಜಯಂತ್ ರಾಜ್, ಶೀಲಾ ಮಂಡಲ್, ಬಿಜೇಂದ್ರ ಯಾದವ್, ಶ್ರವಣ್ ಕುಮಾರ್, ಸುನಿಲ್ ಕುಮಾರ್ ಮತ್ತು ಜಮಾ ಖಾನ್ ಅವರು ಮತ್ತೆ ಕ್ಯಾಬಿನೆಟ್ ಸೇರಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:28ವರ್ಷದ ಹಿಂದೆ ಚಿನ್ನಕ್ಕಾಗಿ ನಾಲ್ವರನ್ನು ಕೊಲೆಗೈದ ಪ್ರವೀಣ್‌ಗೆ ಸಿಕ್ಕಿಲ್ಲ ಬಿಡುಗಡೆ ಭಾಗ್ಯ
ಲಾಲೂ ಪ್ರಸಾದ್ ಪಕ್ಷ ಆರ್ ಜೆಡಿಯ ತೇಜ್ ಪ್ರತಾಪ್ ಯಾದವ್, ಸುರೇಂದ್ರ ಯಾದವ್, ಲಲಿತ್ ಯಾದವ್, ಕುಮಾರ್ ಸರ್ವಜೀತ್, ಸುರೇಂದ್ರ ರಾಮ್, ಶಹನವಾಜ್ ಆಲಂ, ಸಮೀರ್ ಮಹಾಸೇತ್, ಭಾರತ್ ಮಂಡಲ್, ಅನಿತಾ ದೇವಿ ಮತ್ತು ಸುಧಾಕರ್ ಸಿಂಗ್ ಇಂದು ಸಚಿವರಾಗಲಿದ್ದಾರೆ ಎಂದು ವರದಿ ತಿಳಿಸಿದೆ.
ಕಾಂಗ್ರೆಸ್ ಪಕ್ಷದ ಅಫಾಖ್ ಅಲಾಂ ಮತ್ತು ಮುರಾರಿ ಲಾಲ್ ಗೌತಮ್, ಹಿಂದೂಸ್ಥಾನಿ ಅವಾಮ್ ಮೋರ್ಚಾದ ಸಂತೋಷ್ ಸುಮನ್ ಮತ್ತು ಸ್ವತಂತ್ರ ಅಭ್ಯರ್ಥಿ ಸುಮಿತ್ ಕುಮಾರ್ ಸಿಂಗ್ ಸಚಿವರಾಗಲಿದ್ದಾರೆ.