ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಣದಲ್ಲಿ ಒಟ್ಟು 31 ಅಭ್ಯರ್ಥಿಗಳಿದ್ದಾರೆ ಎಂದು ಚುನಾವಣಾಧಿಕಾರಿ ಬಿ.ಎಂ.ವಿಜಯಶಂಕರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ನಡೆದ ಉತ್ತರ ಕ್ಷೇತ್ರದ ಅಭ್ಯರ್ಥಿಗಳು ಹಾಗೂ ಏಜೆಂಟರುಗಳ ಸಭೆಯಲ್ಲಿ ಮಾತನಾಡಿದ ಅವರು, ಬೆಂ.ಉತ್ತರ ಕ್ಷೇತ್ರಕ್ಕೆ ಮೂವರು ವೀಕ್ಷಕರನ್ನು ನೇಮಿಸಿದ್ದು, ಅಹವಾಲು, ದೂರು ಹಾಗೂ ಮನವಿಗಳನ್ನು ಅವರಿಗೆ ನೀಡಬಹುದಾಗಿದೆ ಎಂದು ಹೇಳಿದರು.
ಚುನಾವಣಾ ವೀಕ್ಷಕರಾದ ಟಿ.ಎನ್.ವೆಂಕಟೇಶ್ ಮಾತನಾಡಿ, ಉತ್ತರ ಕ್ಷೇತ್ರದಲ್ಲಿ 527 ಸೂಕ್ಷ್ಮಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಅಂತಹ ಕಡೆಗಳಲ್ಲಿ ಹೆಚ್ಚಿನ ನಿಗಾವಹಿಸಲಾಗಿದೆ. ಜತೆಗೆ ಕೇಂದ್ರ ಸಶಸ್ತ್ರ ಪಡೆಗಳು ಇರಲಿದ್ದು, ವೆಬ್ ಕ್ಯಾಮೆರಾ, ವಿಡಿಯೋ ವ್ಯವಸ್ಥೆ ಸಹ ಮಾಡಲಾಗಿದೆ.
ಒಂದು ಮತಗಟ್ಟೆಗೆ ಒಬ್ಬರು ಏಜೆಂಟ್‌ರಿಗೆ ಮಾತ್ರ ಅವಕಾಶ ಕಲ್ಪಿಸಿದ್ದು, ಫೋಟೋದೊಂದಿಗೆ ಐಡಿ ಕಾರ್ಡ್ ವಿತರಿಸಲಾಗುವುದು. ಏಜೆಂಟರು ಪ್ರಚಾರ ಕಾರ್ಯಕ್ಕೆ ಸಾರ್ವಜನಿಕರ ಆಸ್ತಿ ಪಾಸ್ತಿಗಳನ್ನಾಗಲಿ, ಸಾರ್ವಜನಿಕ ಸ್ಥಳಗಳನ್ನಾಗಿ ಬಳಕೆ ಮಾಡಬಾರದು ಎಂದು ಹೇಳಿದರು.
ಚುನಾವಣಾ ವೀಕ್ಷಕ ಶಂಕರಬಾಬು ರೆಡ್ಡಿ, ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲು ಎಲ್ಲರೂ ಸಹಕಾರ ಬೇಕು. ಬೆಂಗಳೂರು ಉತ್ತಮ ವಾತಾವತರಣದ ನಗರವಾಗಿದ್ದು, ಕರ್ನಾಟಕ ಶಾಂತಿಗೆ ಹೆಸರಾಗಿದ್ದು ಜನರು ಸಹ ಶಾಂತಿ ಪ್ರಿಯರಾಗಿದ್ದಾರೆ.
ಹೀಗಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಚುನಾವಣೆಗೆ ತಯಾರಿ ನಡೆಸಲಾಗುತ್ತಿದೆ ಎಂದರು. ಈ ವೇಳೆ ಚುನಾವಣಾ ವೀಕ್ಷಕ ಪಿ.ಎಸ್.ರೆಡ್ಡಿ ಸೇರಿದಂತೆ ಪ್ರಮುಖರು ಹಾಜರಿದ್ದರು.