ನವದೆಹಲಿ: ಬ್ರೆಜಿಲ್ ಸಂಸತ್ ಭವನ ಹಾಗೂ ಸುಪ್ರೀಂ ಕೋರ್ಟಿನ ಮೇಲೆ ಸುಮಾರು 3,000 ಕ್ಕೂ ಅಧಿಕ ಮಂದಿ ಭಾನುವಾರ ನುಗ್ಗಿ ದಾಂಧಲೆ ನಡೆಸಿರುವ ಘಟನೆ ನಡೆದಿದೆ.
ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರ ಬೆಂಬಲಿಗರು ಸಂಸತ್ ಭವನ ಹಾಗೂ ಸುಪ್ರೀಂ ಕೋರ್ಟಿಗೆ ನುಗ್ಗಿ ದಾಂಧಲೆ ನಡೆಸಿದ್ದು, ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಬ್ರೆಜಿಲ್‌ನ 38ನೇ ಅಧ್ಯಕ್ಷರಾಗಿ ಜೈರ್ ಬೋಲ್ಸನಾರೊ ಅವರು 2019 ರಿಂದ 2022 ರವರೆಗೆ ದೇಶದ ಆಡಳಿತವನ್ನು ನಿಭಾಯಿಸಿದ್ದರು. ಆ ಬಳಿಕ ನಡೆದ ಚುನಾವಣೆಯಲ್ಲಿ ಬೋಲ್ಸನಾರೊ, ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ವಿರುದ್ಧ ತೀವ್ರ ಸ್ಪರ್ಧೆಯಲ್ಲಿ ಸೋತು ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿದಿದ್ದರು.
ಇದಲ್ಲದೆ ಇತ್ತೀಚಗೆ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅಧ್ಯಕ್ಷರಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ. ಈ ವಿಚಾರವನ್ನು ಹಾಗೂ ಲೂಯಿಜ್ ಆಡಳಿತವನ್ನು, ಎಡಪಂಥೀಯ ಆಡಳಿತವನ್ನು ವಿರೋಧಿಸಿ ಬೋಲ್ಸನಾರೊ ಅವರ ಸುಮಾರು 3000 ಸಾವಿರಕ್ಕೂ ಹೆಚ್ಚಿನ ಬೆಂಬಲಿಗರು ಹಳದಿ – ಹಸಿರು ಬಣ್ಣದ ಬಟ್ಟೆ, ಧ್ವಜ ಹಿಡಿದುಕೊಂಡು ಸಂಸತ್ ಭವನ, ಸುಪ್ರೀಂ ಕೋರ್ಟಿಗೆ ಏಕಾಏಕಿ ನುಗ್ಗಿ ದಂಗೆ ಎಬ್ಬಿಸಿ, ಸಾಮಾಗ್ರಿಗಳನ್ನು ಪುಡಿಗಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಸಾವಿರಾರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸ್ ಪಡೆಗಳು ಹರಸಾಹಸ ಪಟ್ಟು, ಆಶ್ರುವಾಯುಗಳನ್ನು ಬಳಿಸಿದ್ದಾರೆ. 300 ಕ್ಕೂ ಹೆಚ್ಚಿನ ಮಂದಿಯನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.
ಈ ಘಟನೆ ವಿಶ್ವದೆಲ್ಲೆಡೆ ಸುದ್ದಿಯಾಗಿತ್ತು, ಅಮೆರಿಕಾ ಅಧ್ಯಕ್ಷ ಜೋ ಬೈಡೆನ್, ಭಾರತದ ಪ್ರಧಾನಿ ಮೋದಿ ಸೇರಿದಂತೆ ಅನೇಕ ರಾಷ್ಟ್ರಗಳು ಘಟನೆಯನ್ನು ಖಂಡಿಸಿದ್ದಾರೆ.