Advertisement

ಬರಲಿದ್ದಾರೆ ಇನ್ನೂ ನಾಲ್ಕು ಪಟ್ಟು ಜನ

11:57 PM May 25, 2020 | Sriram |

ಉಡುಪಿ: ಉಡುಪಿ ಜಿಲ್ಲೆಗೆ ಮಹಾರಾಷ್ಟ್ರದಿಂದ ಆಗಮಿಸಿದವರ ಚಿಂತೆ ಕಾಡುತ್ತಿದೆ. 7,000ಕ್ಕೂ ಅಧಿಕ ಮಂದಿ ಆಗಮಿಸಿದ್ದು, 70 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಮೇ 31ರ ವರೆಗೆ ಅನ್ಯ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವುದನ್ನು ತಡೆಹಿಡಿಯಲಾಗಿದೆ.

Advertisement

ಉಡುಪಿ ಜಿಲ್ಲೆಗೆ ಹೊರರಾಜ್ಯಗಳಿಂದ 30 ಸಾವಿರಕ್ಕೂ ಅಧಿಕ ಮಂದಿ ಆಗಮಿಸಲು ಕಾತರರಾಗಿದ್ದಾರೆ. ವ್ಯವಸ್ಥಿತ ಕ್ವಾರಂಟೈನ್‌, ಸಿಬಂದಿ ನಿಯೋಜನೆ, ಟೆಸ್ಟಿಂಗ್‌, ನಿಧಾನಗತಿಯ ವರದಿಗಳೇ ಜಿಲ್ಲಾಡಳಿತಕ್ಕೆ ತಲೆನೋವಾಗಿವೆ. ಸೇವಾ ಸಿಂಧು ಮೂಲಕ ಹೊರರಾಜ್ಯಗಳಿಂದ ಬರಲು 11 ಸಾವಿರ ಅರ್ಜಿಗಳು ಬಂದಿದ್ದು, ಒಂದು ಅರ್ಜಿಯಲ್ಲಿ 2ರಿಂದ 5 ಮಂದಿ ಬರಬಹುದಾಗಿದೆ. ಸರಾಸರಿ ಮೂರರ ಲೆಕ್ಕದಲ್ಲಿ 33 ಸಾವಿರ ಮಂದಿ ಆಗುತ್ತದೆ.

4 ಸಾವಿರ ಅರ್ಜಿಗಳನ್ನು ಜಿಲ್ಲಾಡಳಿತ ಅಂಗೀಕರಿಸಿದ್ದು, ಇನ್ನೂ 7 ಸಾವಿರ ಅರ್ಜಿಗಳು ಇತ್ಯರ್ಥಕ್ಕೆ ಬಾಕಿಯಿವೆ. ಮೇ 31ರ ಲಾಕ್‌ಡೌನ್‌ ಮುಗಿದ ಬಳಿಕ ಸರಕಾರ ಕೈಗೊಳ್ಳುವ ತೀರ್ಮಾನಕ್ಕೆ ಅನುಗುಣವಾಗಿ ಅರ್ಜಿಗಳ ಅಂಗೀಕಾರಕ್ಕೆ ಜಿಲ್ಲಾ ಡಳಿತ ಉದ್ದೇಶಿಸಿದ್ದರೂ ಹೊರ ರಾಜ್ಯಗಳಿಂದ ಆಗಮಿಸಲು ಒತ್ತಡ ಹೆಚ್ಚುತ್ತಿದೆ.

ದುಬಾೖಯಿಂದ 2 ವಿಮಾನಗಳಲ್ಲಿ ಮಂಗಳೂರು ಮೂಲಕ ಆಗ ಮಿಸಿದ 97 ಮಂದಿ ಹಾಗೂ ಕುವೈಟ್‌ನಿಂದ ಬಂದ 21 ಮಂದಿ ಕ್ವಾರಂಟೈನ್‌ಗೆ ಒಳಪಟ್ಟಿದ್ದಾರೆ. ಗಲ್ಫ್ ರಾಷ್ಟ್ರ ಸಹಿತ ವಿವಿಧ ದೇಶಗಳಲ್ಲಿ ಲಾಕ್‌ಡೌನ್‌ನಿಂದಾಗಿ ಉಡುಪಿ ಮೂಲದ 2,800 ಮಂದಿ ಸಂಕಷ್ಟಕ್ಕೀಡಾಗಿದ್ದಾರೆ. ಭಾರತೀಯ ದೂತಾವಾಸದ ವೆಬ್‌ಸೈಟಿನಲ್ಲಿ ತಮ್ಮ ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ. ಲಾಕ್‌ಡೌನ್‌ ಮುಗಿದು ವಿಮಾನ ಸೇವೆ ಆರಂಭಗೊಂಡರೆ ಮತ್ತೆ ಸಾವಿರಾರು ಮಂದಿ ಆಗಮಿಸುವ ನಿರೀಕ್ಷೆಯಿದೆ. ಹೊರರಾಜ್ಯಗಳಿಂದ 8,010 ಮಂದಿ ಉಡುಪಿ ಜಿಲ್ಲೆಗೆ ಆಗಮಿಸಿ ಕ್ವಾರಂಟೈನ್‌ಗೆ ಒಳಗಾಗಿದ್ದು, ಇವರಲ್ಲಿ ಮಹಾರಾಷ್ಟ್ರದಿಂದ ಬಂದವರು 7,226 ಮಂದಿ.

ಉಡುಪಿ ಜಿಲ್ಲೆಯಿಂದ ಅನ್ಯ ಜಿಲ್ಲೆಗಳಿಗೆ 7,472 ಮಂದಿ ಹಾಗೂ ಹೊರರಾಜ್ಯಗಳಿಗೆ 4,116 ಮಂದಿ ಸಹಿತ ಒಟ್ಟು 11,588 ಮಂದಿ ಖಾಸಗಿ ವಾಹನ, ಬಸ್ಸು, ಶ್ರಮಿಕ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ತೆರಳಿದ್ದಾರೆ. ಹೊರರಾಜ್ಯದಿಂದ ಆಗಮಿಸಿದ 8,010 ಮಂದಿ ಪೈಕಿ 4 ಸಾವಿರ ಮಂದಿಯ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ 1,500 ಮಾದರಿಗಳ ವರದಿ ಬಂದಿದೆ.

Advertisement

ಇನ್ನೂ 4,500ಕ್ಕೂ ಅಧಿಕ ಮಾದರಿಗಳ ವರದಿ ಬರಬೇಕಿದೆ. ಈಗ ಜಿಲ್ಲೆಯಲ್ಲಿ ನಾಲ್ವರು ಪೊಲೀಸರಿಗೆ ಬಂದ ಕೋವಿಡ್-19 ಸೋಂಕಿನಿಂದಾಗಿ ಆತಂಕ ಮತ್ತಷ್ಟು ಹೆಚ್ಚಾಗಿದೆ.

ಕರಾವಳಿಗರ ಸಂಕಷ್ಟ
ಒಂದೆಡೆ ಮುಂಬಯಿಯಲ್ಲಿ ಕೆಲಸವಿಲ್ಲದೆ ಸಂಕಷ್ಟದಲ್ಲಿರುವ ಕರಾವಳಿ ಮಂದಿ; ಇನ್ನೊಂದೆಡೆ ಕೋವಿಡ್-19 ಭೀತಿಯಲ್ಲಿಯೇ ದಿನ ಕಳೆದು ತಾಯ್ನಾಡಿಗೆ ಬರುವ ತುಡಿತದಲ್ಲಿರುವ ಮಂದಿ; ಇಷ್ಟೇ ಅಲ್ಲ, ಮುಂಬಯಿಂದ ಬಂದವರ ಮೂಲಕ ಕರಾವಳಿಯಲ್ಲಿ ಕೋವಿಡ್-19 ಸಂಖ್ಯೆ ಹೆಚ್ಚಳದ ಆತಂಕ ತಂದಿದೆ. ಕರಾವಳಿಗರು ಹೊಟೇಲ್‌ಗ‌ಳಿಂದ ಹಿಡಿದು ದೊಡ್ಡ ಉದ್ಯಮ ಕ್ಷೇತ್ರಗಳಲ್ಲಿ ಮುಂಬಯಿ ಮಹಾನಗರದಲ್ಲಿ ಮಿಂಚುತ್ತಿದ್ದಾರೆ. ಹಲವಾರು ಮಂದಿಯ ವ್ಯಾಪಾರ-ಉದ್ಯಮಕ್ಕೆ ಈ ನಗರ ನೆಚ್ಚಿನದ್ದಾಗಿದೆ. ಕರಾವಳಿ ಹಾಗೂ ಮುಂಬಯಿ ನಂಟು ಸುದೀರ್ಘ‌ ವರ್ಷದಿಂದ ಬೆಸೆದುಕೊಂಡಿದೆ. ಆದರೆ ಈ ಸಂಪರ್ಕ ಸೇತುಗೆ ಕೋವಿಡ್-19 ದೊಡ್ಡ ಹೊಡೆತ ನೀಡಿದೆ.

ಅವಕಾಶವಿಲ್ಲ
ಹೊರರಾಜ್ಯಗಳಲ್ಲಿರುವ ಜಿಲ್ಲೆಯ ಜನರಿಗೆ ಮೇ 31ರವರೆಗೆ ಆಗಮಿಸಲು ಅವಕಾಶವಿಲ್ಲ. ಕ್ವಾರಂಟೈನ್‌ನಲ್ಲಿರುವವರು ಬಿಡುಗಡೆಯಾಗಿ ಸುರಕ್ಷಿತವಾಗಿ ತೆರಳಿದ ಅನಂತರ ಹೊರರಾಜ್ಯಗಳಿಂದ ಆಗಮಿಸುವವರನ್ನು ಸೇರ್ಪಡೆ ಮಾಡಲಾಗುವುದು. ಕ್ವಾರಂಟೈನ್‌ ಕೇಂದ್ರಗಳನ್ನು ಬಿಟ್ಟುಕೊಡುವಾಗಲೂ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.
-ಜಿ. ಜಗದೀಶ್‌,
ಜಿಲ್ಲಾಧಿಕಾರಿಗಳು, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next