Advertisement
ಪ್ರಮುಖವಾಗಿ ಹೊಸ ತಾಲೂಕುಗಳಿಗೆ ಮುಕುಟಪ್ರಾಯವಾದ ಸ್ಥಳೀಯ ಆಡಳಿತ ಕೇಂದ್ರ ಮಿನಿ ವಿಧಾನಸೌಧ ಅನೇಕ ಕಡೆ ಇನ್ನೂ ತಲೆಎತ್ತಿಲ್ಲ. ಬಹಳಷ್ಟು ಕಡೆ ಯಾವುದೋ ಹಳೆಯ ಕಟ್ಟಡಗಳಲ್ಲಿ, ಇನ್ಯಾವುದೋ ಇಲಾಖೆಯ ಕಚೇರಿಗಳಲ್ಲಿ ಒಂದಿಷ್ಟು ಜಾಗ ಪಡೆದು, ಇನ್ನೂ ಕೆಲವೆಡೆ ಬಾಡಿಗೆ ಕಟ್ಟಡಗಳಲ್ಲಿ ತಾಲೂಕು ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ತಾಲೂಕು ಆಗಿದೆ, ಆದರೆ ಅದಕ್ಕೆ ಆಡಳಿತದ ಗತ್ತು ಇನ್ನೂ ಸಿಕ್ಕಿಲ್ಲ.
ದೊಡ್ಡ ಸಂಖ್ಯೆಯಲ್ಲಿ ಹೊಸ ತಾಲೂಕುಗಳ ಘೋಷಣೆ ಆಗಿದ್ದು, 2013ರಲ್ಲಿ. ಅಂದು ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ್ ಅವರು ಬಜೆಟ್‌ನಲ್ಲಿ 43 ಹೊಸ ತಾಲೂಕುಗಳನ್ನು ಘೋಷಿಸಿದ್ದರು. ಅನುದಾನದ ಕೊರತೆ ಕಾರಣಕ್ಕೆ ಅವುಗಳು ಕಾರ್ಯರೂಪಕ್ಕೆ ಬರಲಿಲ್ಲ. 2017-18ರ ಬಜೆಟ್‌ನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ 10 ತಾಲೂಕುಗಳನ್ನು ಸೇರಿಸಿ ಒಟ್ಟು 53 ತಾಲೂಕುಗಳನ್ನು ಹೊಸ ತಾಲೂಕು ಕೇಂದ್ರಗಳನ್ನಾಗಿ ಘೋಷಿಸಿದ್ದರು. 2019ರಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಎಚ್.ಡಿ. ಕುಮಾರಸ್ವಾಮಿ ತಮ್ಮ ಬಜೆಟ್‌ನಲ್ಲಿ ಮತ್ತೆ ಕೆಲವು ಹೆಸರುಗಳನ್ನು ಸೇರಿಸಿದರು. ಅದರಂತೆ, 2017ರಿಂದ 2023ರವರೆಗೆ ರಾಜ್ಯದಲ್ಲಿ ಒಟ್ಟು 64 ಹೊಸ ತಾಲೂಕುಗಳ ಘೋಷಣೆ ಆಗಿದೆ.
Related Articles
– ಯಲಹಂಕ, ಕೆಜಿಎಫ್, ಮೂಡುಬಿದಿರೆ, ಕಡಬ ತಾಲೂಕುಗಳಲ್ಲಿ ಮಿನಿ ವಿಧಾನಸೌಧ ಕಾಮಗಾರಿ ಪೂರ್ಣ
– ಮೂಲ್ಕಿ, ಹೆಬ್ರಿ, ಕಾಪು, ಬೈಂದೂರು, ಕುರಗೋಡು, ದಾಂಡೇಲಿ, ಬ್ರಹ್ಮಾವರ, ಕಂಪ್ಲಿ, ಬಬಲೇಶ್ವರ, ತಿಕೋಟಗಳಲ್ಲಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ
– ನ್ಯಾಮತಿ, ಹನೂರು, ಪೊನ್ನಂಪೇಟೆ, ಕುಶಾಲನಗರ, ಮೂಡಲಗಿ, ಲಕ್ಷ್ಮೇಶ್ವರ, ಗಜೇಂದ್ರಗಡ, ನಿಡಗುಂದಿ, ಕೊಲ್ಹಾರ, ಹುಣಸಗಿ, ವಡಗೇರ ತಾಲೂಕುಗಳಲ್ಲಿ ನಿರ್ಮಾಣಕ್ಕೆ ಜಾಗದ ಪ್ರಸ್ತಾವನೆ ಜಿಲ್ಲಾಧಿಕಾರಿಗಳಿಂದ ಇನ್ನಷ್ಟೇ ಬರಬೇಕಿದೆ
Advertisement
80 ಕೋಟಿ ರೂ. ಅನುದಾನ42 ತಾಲೂಕು ಆಡಳಿತ ಸೌಧದ ಕಾಮಗಾರಿಗಳಿಗೆ ಪ್ರಸಕ್ತ ಸಾಲಿನಲ್ಲಿ 80 ಕೋಟಿ ರೂ. ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ರಾಜ್ಯದಲ್ಲಿ ಹೊಸದಾಗಿ ತಾಲೂಕು ಆಡಳಿತ ಸೌಧ ನಿರ್ಮಾಣಕ್ಕೆ ಬೇಕಾದ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಶೌಚಾಲಯ, ಲಿಫ್ಟ್ ಅಳವಡಿಕೆ ಇನ್ನಿತರ ಎಲ್ಲಾ ಪೂರಕ ಸೌಲಭ್ಯಗಳನ್ನು ಒಳಗೊಂಡಂತೆ 10 ಕೋಟಿ ರೂ.ಗಳ ಮಿತಿಯೊಳಗೆ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣ ಮಾಡಲು ಅವಕಾಶವಿದೆ. ಆದರೆ, ಈ ಹಣ ಸಾಕಾಗಲ್ಲ ಅನ್ನುವ ಮಾತುಗಳೂ ಇದ್ದಾವೆ. -ರಫೀಕ್ ಅಹ್ಮದ್