Advertisement

ಸ್ವಯಂ ಗುಣಮುಖರಾದ ಶೇ.30 ಮಂದಿ

10:27 AM Jun 12, 2020 | mahesh |

ಹೊಸದಿಲ್ಲಿ: ದೇಶದ ಹಲವು ಪ್ರಮುಖ ಕಂಟೈನ್‌ಮೆಂಟ್‌ ವಲಯಗಳಲ್ಲಿ ಶೇ.30ರಷ್ಟು ಮಂದಿಗೆ ಈಗಾಗಲೇ ಕೋವಿಡ್ ವೈರಸ್‌ ತಗುಲಿದ್ದು, ಅವರು ತಾವಾಗಿಯೇ ಗುಣ ಮುಖರಾಗಿದ್ದಾರೆ! ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ನಡೆಸಿದ ಜನಸಂಖ್ಯೆ ಆಧಾರಿತ ಸಮೀಕ್ಷೆಯಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ ಎಂದು “ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ. ಕೋವಿಡ್ ಸೋಂಕಿನ ವ್ಯಾಪಿಸುವಿಕೆ ಎಷ್ಟಿದೆ ಎಂಬುದನ್ನು ಅರಿಯುವ ಸಲುವಾಗಿ ಐಸಿಎಂಆರ್‌, ರಾಜ್ಯ ಸರಕಾರಗಳು, ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ, ವಿಶ್ವ ಆರೋಗ್ಯ ಸಂಸ್ಥೆಯ ಭಾರತೀಯ ಕಾರ್ಯಾಲಯದ ಸಹಭಾಗಿತ್ವದಲ್ಲಿ ದೇಶಾದ್ಯಂತ 70 ಜಿಲ್ಲೆಗಳಿಂದ 24 ಸಾವಿರ ಸ್ಯಾಂಪಲ್‌ ಗಳನ್ನು ಸಂಗ್ರಹಿಸಿ ಈ ಸಮೀಕ್ಷೆ ಕೈಗೊಂಡಿತ್ತು.

Advertisement

ಪ್ರತಿಕಾಯ ಸೃಷ್ಟಿ: ಬಹುತೇಕ ಕಂಟೈನ್‌ಮೆಂಟ್‌ ವಲಯಗಳಲ್ಲಿ ಶೇ.15ರಿಂದ 30ರಷ್ಟು ಮಂದಿಗೆ ಸೋಂಕು ದೃಢಪಟ್ಟಿದೆ. ಅದರಲ್ಲೂ ಇತರ ಹಾಟ್‌ಸ್ಪಾಟ್‌ಗಳಿಗೆ ಹೋಲಿಸಿದರೆ ಮುಂಬಯಿ, ಪುಣೆ, ದಿಲ್ಲಿ, ಅಹಮದಾಬಾದ್‌ ಮತ್ತು ಇಂದೋರ್‌ನಲ್ಲಿ ಸೋಂಕಿನ ವ್ಯಾಪಿಸುವಿಕೆ ಅತ್ಯಂತ ಹೆಚ್ಚಿದೆ. ಆದರೆ, ಶೇ.30ರಷ್ಟು ಮಂದಿಗೆ ಸೋಂಕು ತಗುಲಿದ್ದರೂ, ಅವರ ದೇಹದಲ್ಲಿ ಪ್ರತಿಕಾಯ ಸೃಷ್ಟಿಯಾಗಿರುವ ಕಾರಣ ಯಾವುದೇ ಚಿಕಿತ್ಸೆಯಿಲ್ಲದೇ ತನ್ನಿಂತಾನೇ ಅವರು ಗುಣಮುಖರಾಗಿದ್ದಾರೆ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ.

ಭಾರತದಲ್ಲಿ ಕೋವಿಡ್ ಸೋಂಕಿನ ವಿರುದ್ಧ ಹೋರಾಡುವಂಥ ರೋಗ ನಿರೋಧಕ ಶಕ್ತಿ ಬೆಳೆಯುತ್ತಿದೆ ಎಂಬುದೂ ಈ ಸಮೀಕ್ಷೆಯಿಂದ ತಿಳಿದುಬಂದಿದೆ. ಅಲ್ಲದೆ, ದೇಶದಲ್ಲಿ ನಾವೆಲ್ಲರೂ ಅಂದುಕೊಂಡಿರುವುದಕ್ಕಿಂತಲೂ ಹೆಚ್ಚು ವ್ಯಾಪಕವಾಗಿ ಸೋಂಕು ಹಬ್ಬಿದ್ದು, ರೋಗ ಲಕ್ಷಣವಿಲ್ಲದ ಎಷ್ಟೋ ಮಂದಿ ನಮ್ಮೊಂದಿಗಿದ್ದಾರೆ ಎಂಬ ವಿಚಾರವೂ ತಿಳಿದುಬಂದಿದೆ.

ಸಮೀಕ್ಷೆ ಪೂರ್ಣಗೊಂಡಿಲ್ಲ: ಐಸಿಎಂಆರ್‌
ಮಾಧ್ಯಮಗಳಲ್ಲಿ ಸಮೀಕ್ಷೆಯ ವರದಿ ಬಂದಿದ್ದರೂ ಐಸಿಎಂಆರ್‌ ಮಾತ್ರ ಇನ್ನೂ ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ. ಸಮೀಕ್ಷೆಯನ್ನು ಎರಡು ಭಾಗಗಳಾಗಿ ನಡೆಸಲಾಗುತ್ತಿದ್ದು, ಒಂದು ಭಾಗವಷ್ಟೇ ಪೂರ್ಣಗೊಂಡಿದೆ. ಇನ್ನೊಂದು ಮುಗಿದಿಲ್ಲ ಎಂದು ಐಸಿಎಂ ಆರ್‌ ಹೇಳಿದೆ. ಜತೆಗೆ, ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಪ್ರದೇಶದಲ್ಲಿ (1.09 ಪಟ್ಟು) ಮತ್ತು ನಗರದ ಕೊಳೆಗೇರಿ ಪ್ರದೇಶ (1.89 ಪಟ್ಟು) ಗಳಲ್ಲಿ ಸೋಂಕು ಹಬ್ಬುವ ಅಪಾಯ ಹೆಚ್ಚಿದೆ. ಆದರೆ, ಸೋಂಕಿತರ ಮರಣ ಪ್ರಮಾಣ ಶೇ.0.08ರಷ್ಟು ಮಾತ್ರವೇ ಇದೆ. ಕಂಟೈನ್ಮೆಂಟ್‌ ಪ್ರದೇಶಗಳಲ್ಲಿ ಸೋಂಕು ವ್ಯಾಪಿಸುವ ಅಪಾಯ ಜಾಸ್ತಿ ಎಂದು ಸಮೀಕ್ಷೆಯಿಂದ ತಿಳಿದುಬಂದಿರುವುದಾಗಿ ಮಂಡಳಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next