Advertisement
ಕಣಿವೆಯಲ್ಲಿನ ನಿರಂತರ ಹಿಮಪಾತ ಈಗಾಗಲೇ 20 ಯೋಧ ಪ್ರಾಣ ಕಸಿದಿದೆ. ಕುಪ್ವಾರದ ಹಳ್ಳಿಯಲ್ಲಿ ಯೋಧನೊಂದಿಗೆ ವಾಸವಿದ್ದ ತಾಯಿ ಜನವರಿ 28ರಂದು ನಿಧನರಾಗಿದ್ದರು. ತೀವ್ರ ಚಳಿಯಿಂದ ಹೃದಯದ ನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿ ಯೋಧನ ತಾಯಿ ನಿಧನರಾಗಿದ್ದರು. ಪಠಾಣ್‌ಕೋಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಮ್ಮದ್ ಅಬ್ಟಾಸ್ ಮರುದಿನವೇ ಸೇನಾಧಿಕಾರಿಗಳಿಗೆ ಈ ಸಂಗತಿ ತಿಳಿಸಿ, ತಮ್ಮ ಹಳ್ಳಿ ಕರ್ನಾಹ್‌ಗೆ ಶವ ಸಾಗಿಸಲು ಹೆಲಿಕಾಪ್ಟರ್ ನೆರವು ಕೇಳಿದ್ದಾರೆ. “ದಟ್ಟ ಹಿಮವಿದ್ದ ಕಾರಣ ಹೆಲಿಕಾಪ್ಟರ್ ಕಳುಹಿಸಿ ಕೊಡಲು ಕಷ್ಟವಾಗುತ್ತದೆ. ಹಿಮಪಾತ ಕಡಿಮೆಯಾದರೆ ಸೌಲಭ್ಯ ನೀಡುತ್ತೇವೆ’ ಎಂದು ಭರವಸೆ ನೀಡಿದ್ದಾರೆ. ಆದರೆ, ಮೂರ್ನಾಲ್ಕು ದಿನವಾದರೂ ಹೆಲಿಕಾಪ್ಟರ್ ಬರಲು ಸಾಧ್ಯವೇ ಆಗಲಿಲ್ಲ.
ಇನ್ನು ಕಾದು ಕುಳಿತರೆ ಪ್ರಯೋಜನವಿಲ್ಲ ಎಂದುಕೊಂಡು ಅಬ್ಟಾಸ್, ಆ ಹಳ್ಳಿ ಮಂದಿಯ ಜೊತೆಗೂಡಿ ಶವ ಹೊರಲು ನಿರ್ಧರಿಸಿದರು. ಕಣಿವೆಯ 30 ಕಿಲೋಮೀಟರ್ ಹಾದಿಯಲ್ಲಿ ಹಿಮ 10 ಅಡಿ ಎತ್ತರ ದಟ್ಟವಾಗಿ ಆವರಿಸಿತ್ತು. ಹಿಮಗಾಳಿ ಪ್ರಪಾತಕ್ಕೆ ತಳ್ಳಲೆತ್ನಿಸುತ್ತಿತ್ತು. ಆ ಸವಾಲನ್ನೆಲ್ಲ ಮೆಟ್ಟಿ ಶವಯಾತ್ರೆ ಸಾಗಿತು. ಅಬ್ಟಾಸ್ ಸೇರಿದಂತೆ ಶವ ಹೊತ್ತ ಹತ್ತಾರು ಮಂದಿ ದ್ರಂಗ್ಯಾರಿ ಎಂಬ ಹಳ್ಳಿಗೆ ಬರುವಾಗ ಕತ್ತಲಾಗಿತ್ತು. ಅಲ್ಲಿನ ಜನ ಇವರಿಗೆಲ್ಲ ಊಟ- ವಸತಿಯ ವ್ಯವಸ್ಥೆ ಕಲ್ಪಿಸಿ ನೆರವಾದರು.