ಗದಗ: ಇಲ್ಲಿನ ಪಶುವೈದ್ಯಕೀಯ ಮಹಾವಿದ್ಯಾಲಯದ ಮೂಲ ಸೌಕರ್ಯಕ್ಕಾಗಿ 30 ಕೋಟಿ ರೂ. ಆಡಳಿತಾತ್ಮಕ ಮಂಜೂರಾತಿ ಪ್ರಕ್ರಿಯೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡುವ ಮೂಲಕ ಸ್ಥಳೀಯ ಪಶು ವೈದ್ಯಕೀಯ ವಿದ್ಯಾರ್ಥಿಗಳ ಆತಂಕ ನಿವಾರಿಸಿದೆ.
ವಲಯವಾರು ಪ್ರಾದೇಶಿಕ ಅಸಮತೋಲನೆ ನಿವಾರಣೆಗಾಗಿ ಡಾ|ನಂಜುಂಡಪ್ಪ ವರದಿ ಅನ್ವಯ 2009ರಲ್ಲಿಯೇ ಗದಗಿನಲ್ಲಿ ಪಶು ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸಲು 50 ಕೋಟಿ ರೂ. ಮಂಜೂರಾತಿಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಅನುಮೋದನೆ ನೀಡಿತ್ತು.
ಗದಗ ಜಿಲ್ಲಾಧಿಕಾರಿ ಮೂಲಕ 156.21 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಈಗಾಗಲೇ ಮೊದಲನೇ ಹಂತದ ಕಾಮಗಾರಿ 30.16 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಿದೆ. ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ನಗರದ ಹೊಂಬಳ ರಸ್ತೆಯಲ್ಲಿ ಪಶು ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸಲಾಗಿದೆ.
2017-18ನೇ ಸಾಲಿನಲ್ಲಿ ಕಾರ್ಯಾರಂಭಿಸಿದ್ದು, ಪಶು ವೈದ್ಯಕೀಯ ಸಾರ್ವಜನಿಕ ಆರೋಗ್ಯ, ಮತ್ತು ಸಾಂಕ್ರಾಮಿಕ ರೋಗಶಾಸ್ತ್ರ, ಪಶು ವೈದ್ಯಕೀಯ ಶರೀರ ಶಾಸ್ತ್ರ ಮತ್ತು ಜೀವರಾಸಾಯ ಶಾಸ್ತ್ರ ಹಾಗೂ ಪಶು ವೈದ್ಯಕೀಯ ಪರಾವಲಂಭಿ ಶಾಸ್ತ್ರ ಸೇರಿ ಒಟ್ಟು 17 ಬೋಧನಾ ವಿಭಾಗಗಳಿವೆ. ಪ್ರತಿ ವರ್ಷ 50 ರಂತೆ ಒಟ್ಟು 200 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.
ಮಹಾವಿದ್ಯಾಲಯ ಆರಂಭಗೊಂಡು 4 ವರ್ಷಗಳು ಕಳೆದರೂ 2ನೇ ಹಂತದ ಕಾಮಗಾರಿಗಳು ಮುಗಿದಿಲ್ಲ. ಇದೇ ಕಾರಣಕ್ಕೆ ವಿಸಿಐನಿಂದ ಪೂರ್ಣ ಪ್ರಮಾಣದ ಮಾನ್ಯತೆಯೇ ಸಿಕ್ಕಿಲ್ಲ. ಅಂತಿಮ 5ನೇ ವರ್ಷದ ಪ್ರಾಯೋಗಿಕ ಕಲಿಕೆಗೆ ವಿಸಿಐ ಅನುಮತಿ ತೊಡಕಾಗಿತ್ತು. ಹೀಗಾಗಿ ವಿದ್ಯಾರ್ಥಿಗಳು ಹೋರಾಟದ ಹಾದಿ ಹಿಡಿದಿದ್ದರು. ಆದರೆ ಸರಕಾರದ ಸ್ಪಂದನೆಯಿಂದ ವಿದ್ಯಾರ್ಥಿಗಳು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.