ಭಾಲ್ಕಿ: ಪಟ್ಟಣದ ಲಕ್ಷ್ಮೀಬಾಯಿ ಭೀಮಣ್ಣ ಖಂಡ್ರೆ ಸರಕಾರಿ ಐಟಿಐ ಕಾಲೇಜಿನ ಆವರಣದಲ್ಲಿ ಪ್ರಗತಿಯಲ್ಲಿರುವ ಟಾಟಾ ವರ್ಕ್‌ಶಾಪ್‌ಗೆ ಶಾಸಕ ಈಶ್ವರ ಖಂಡ್ರೆ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಮಾತನಾಡಿದ ಅವರು, ಪ್ರತಿಷ್ಠಿತ ಕೈಗಾರಿಕಾ ಕಂಪನಿಗಳಲ್ಲಿ ಸ್ಥಳೀಯ ಯುವ ಅಭ್ಯರ್ಥಿಗಳು, ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗುವಂತೆ ಮತ್ತು ಸ್ವಂತ ಉದ್ಯಮ ಆರಂಭಿಸುವಂತೆ ಅಣಿಗೊಳಿಸುವ ಉದ್ದೇಶದಿಂದ ಟಾಟಾ ಟೆಕ್ನಾಲಜೀಸ್ ಸಹಯೋಗದಲ್ಲಿ ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಉನ್ನತೀಕರಿಸಿ ತಾಂತ್ರಿಕ ಚಟುವಟಿಕಾ ಕೇಂದ್ರವನ್ನಾಗಿ ಪರಿವರ್ತಿಸಲಾಗುತ್ತಿದೆ. ಇದರಿಂದ ಈ ಯೋಜನೆಯಡಿ ವಿದ್ಯಾರ್ಥಿಗಳಿಗೆ 11 ವಿವಿಧ ವಲಯಗಳಲ್ಲಿ ತರಬೇತಿ ಸಿಗಲಿದೆ ಎಂದರು.
ಕೌಶಲಾಭಿವೃದ್ಧಿ ಅಪೇಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ತಜ್ಞರಿಂದ ಶಿಕ್ಷಣ, ಆಧುನಿಕ ಉಪಕರಣ ಬಳಸಿ ಪ್ರಾಯೋಗಿಕ ತರಬೇತಿ ನೀಡುವುದು, ಕೃಷಿ, ವಾಹನೋದ್ಯಮ, ಗೃಹ ಬಳಕೆಯ ವಿದ್ಯುನ್ಮಾನ ಉಪಕರಣಗಳು, ವಿದ್ಯುತ್ ಚಾಲಿತ ವಾಹನಗಳು, ಪ್ಯಾಕೇಜಿಂಗ್, ಔಷಧೀಯ ಉದ್ಯಮ, ಕರಕುಶಲ ವಸ್ತುಗಳ ಆಟಿಕೆಗಳ ಉದ್ಯಮ ಸೇರಿ ವಿವಿಧ ವಲಯಗಳಲ್ಲಿ ತರಬೇತಿ ನೀಡಲಾಗುತ್ತದೆ ಎಂದರು. ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳು, ಪಿಯುಸಿ, ಐಟಿಐ, ವೊಕೇಷನಲ್, ಪದವಿ, ಇಂಜಿನಿಯರಿಂಗ್ ಸೇರಿ ವಿವಿಧ ಕೋರ್ಸ್‌ನ ವಿದ್ಯಾರ್ಥಿಗಳು ಒಂದು ಮತ್ತು ಎರಡು ವರ್ಷ ಅವಧಿಯ ಶಿಕ್ಷಣ ತರಬೇತಿ ಪಡೆಯಬಹುದಾಗಿದೆ. ಈ ವರ್ಕ್‌ಶಾಪ್‌ನಲ್ಲಿ ಉಪಕರಣಗಳ ಜೋಡಣೆ ನಡೆಯುತ್ತಿದ್ದು, ಶೀಘ್ರ ಆರಂಭಿಸಲಾಗುವುದು ಎಂದು ಹೇಳಿದರು.
ನಮ್ಮ ಭಾಗದ ರೈತರು, ಕೂಲಿ ಕಾರ್ಮಿಕರು, ಬಡವರ ಮಕ್ಕಳು, ನಿರುದ್ಯೋಗ ಯುವಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮುಂಬರುವ ದಿನಗಳಲ್ಲಿ ಉತ್ತಮ ತರಬೇತಿ ಪಡೆಯುವ ಯುವಕರ ಮನೆ ಬಾಗಿಲಿಗೆ ಉದ್ಯೋಗ ಹುಡುಕಿಕೊಂಡು ಬರಲಿವೆ ಎಂದು ತಿಳಿಸಿದರು.
ಪುರಸಭೆ ಅಧ್ಯಕ್ಷ ಅನಿಲ ಸುಂಟೆ, ಉಪಾಧ್ಯಕ್ಷ ಅಶೋಕ ಗಾಯಕವಾಡ್, ಐಟಿಐ ಪ್ರಾಚಾರ್ಯ ಲಕ್ಷ್ಮೀಕಾಂತ ಸೇರಿದಂತೆ ಹಲವರು ಇದ್ದರು.