ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಪ್ರವಾಹದಿಂದ ಹಾನಿಯಾಗಿರುವ ಕಿಂಡಿ ಅಣೆಕಟ್ಟುಗಳ ಮರು ನಿರ್ಮಾಣಕ್ಕೆ ಸಣ್ಣ ನೀರಾವರಿ ಇಲಾಖೆಯಿಂದ 30 ಕೋ.ರೂ.ಗಳನ್ನು ಬಿಡುಗಡೆಗೊಳಿಸಲಾಗುವುದು ಎಂದು ರಾಜ್ಯ ಕಾನೂನು ಹಾಗೂ ಸಣ್ಣ ನೀರಾವರಿ ಇಲಾಖಾ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಅವರು ಶನಿವಾರ ಬೆಳ್ತಂಗಡಿ ತಾಲೂಕಿನ ಪ್ರವಾಹ ಪೀಡಿತ ಪ್ರದೇಶ ಪ್ರದೇಶಗಳ ಕುಕ್ಕಾವು, ಚಾರ್ಮಾಡಿ ಗ್ರಾಮದ ಅರಣಪಾದೆ ಹಾಗೂ ಪರ್ಲಾಣಿ ಪ್ರದೇಶಕ್ಕೆ ಭೇಟಿ ನೀಡಿ ಪತ್ರಕರ್ತರ ಜತೆ ಮಾತನಾಡಿದರು.
ಪ್ರವಾಹದಿಂದ ಹಾನಿಯಾಗಿರುವ ಪ್ರದೇಶದಲ್ಲಿ ನದಿಗಳಿಗೆ ತಡೆಗೋಡೆ ನಿರ್ಮಾಣಕ್ಕೆ ಬೇಡಿಕೆ ಬರುತ್ತಿದ್ದು, ಈ ಕುರಿತು ತಜ್ಞರು ಅಧ್ಯಯನ ನಡೆಸಿ ಅವರ ವರದಿಯ ಆಧಾರದಲ್ಲಿ ತಡೆಗೋಡೆಗೆ ಅನುದಾನ ನೀಡುವ ಕಾರ್ಯ ಮಾಡಲಾಗುವುದು ಎಂದರು.
ಸಚಿವರು ಶುಕ್ರವಾರ ಧರ್ಮಸ್ಥಳಕ್ಕೆ ಆಗಮಿಸಿ ವಾಸ್ತವ್ಯ ಹೂಡಿದ್ದು, ಶನಿವಾರ ಬೆಳಗ್ಗೆ ದೇವರ ದರ್ಶನ ಪಡೆದು ಬಳಿಕ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ಪ್ರದೇಶಗಳ ಪರಿಶೀಲನೆಯ ಬಳಿಕ ಚಾರ್ಮಾಡಿ ಘಾಟ್ ರಸ್ತೆಯ ಮೂಲಕ ಹಾಸನಕ್ಕೆ ತೆರಳಿದರು.
ಶಾಸಕ ಹರೀಶ್ ಪೂಂಜ, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಜತೆಗಿದ್ದರು.