Advertisement

ಸರ್ಕಾರಿ ಕಾಲೇಜಿಗೆ 30 ಕಂಪ್ಯೂಟರ್‌ ಉಚಿತ ವಿತರಣೆ

02:40 PM Nov 24, 2021 | Team Udayavani |

ಬೀದರ: ಕಾಂಗ್ನಿಜೆಂಟ್‌ ತಂತ್ರಜ್ಞಾನ ಸಂಸ್ಥೆಯು ಉಚಿತವಾಗಿ ನೀಡಿರುವ 30 ಕಂಪ್ಯೂಟರ್‌ ಗಳನ್ನು ರೋಟರಿ ಕ್ಲಬ್‌ ಆಫ್‌ ಬೀದರ್‌ ನ್ಯೂ ಸೆಂಚುರಿಯು ಮಂಗಳವಾರ ಚಿಟಗುಪ್ಪ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ವಿತರಿಸಿತು.

Advertisement

ಕಾಲೇಜಿನ ಗಣಿತಶಾಸ್ತ್ರ ಪ್ರಯೋಗಾಲಯ ಹಾಗೂ ಗಣಕ ವಿಜ್ಞಾನ ಪ್ರಯೋಗಾಲಯದಲ್ಲಿ ಅಳವಡಿಸಿದ ಕಂಪ್ಯೂಟರ್‌ಗಳ ಸೇವೆಗೆ ಅಂತಾರಾಷ್ಟ್ರೀಯ ರೋಟರಿ ಜಿಲ್ಲೆ 3160 ಗರ್ವನರ್‌ ತಿರುಪತಿ ನಾಯ್ಡು ಚಾಲನೆ ನೀಡಿದರು. ಕಾಂಗ್ನಿಜೆಂಟ್‌ ತಂತ್ರಜ್ಞಾನ ಸಂಸ್ಥೆಯು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ವಿತರಿಸಲು ರಾಜ್ಯ ಸರ್ಕಾರಕ್ಕೆ ಉಚಿತವಾಗಿ ಕಂಪ್ಯೂಟರ್‌ಗಳನ್ನು ಕೊಟ್ಟಿದೆ. ಸರ್ಕಾರ ಕಂಪ್ಯೂಟರ್‌ಗಳ ಸಾಗಣೆ ಹಾಗೂ ಅನುಷ್ಠಾನದ ಹೊಣೆಯನ್ನು ರೋಟರಿ ಸಂಸ್ಥೆಗೆ ವಹಿಸಿದೆ. ಉಚಿತ ಕಂಪ್ಯೂಟರ್‌ ವಿತರಣೆಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ರೋಟರಿ ಸಂಸ್ಥೆಯು ಸಾಮಾಜಿಕ ಚಟುವಟಿಕೆಗಳಲ್ಲಿ ನಿರಂತರ ತೊಡಗಿಸಿಕೊಂಡಿದೆ. ಶಿಕ್ಷಣ ಕ್ಷೇತ್ರದ ಪ್ರಗತಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದೆ. ರೋಟರಿ ಕ್ಲಬ್‌ ಆಫ್‌ ಬೀದರ್‌ ನ್ಯೂ ಸೆಂಚುರಿ ಜಿಲ್ಲೆಯಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು. ರೋಟರಿ ಸಹಾಯಕ ಗವರ್ನರ್‌ ಶಿವಕುಮಾರ ಯಲಾಲ್‌ ಮಾತನಾಡಿ, ಬೀದರನಲ್ಲಿ ಇನ್ನಷ್ಟು ರೋಟರಿ ಕ್ಲಬ್‌ಗಳನ್ನು ರಚಿಸುವ ಉದ್ದೇಶ ಇದೆ. ಹೊಸ ತಾಲೂಕು ಚಿಟಗುಪ್ಪದಲ್ಲೂ ಕ್ಲಬ್‌ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ರೋಟರಿ ಕ್ಲಬ್‌ ಆಫ್‌ ಬೀದರ್‌ ನ್ಯೂ ಸೆಂಚುರಿಯ ಅಧ್ಯಕ್ಷ ಡಾ| ನಿತೇಶಕುಮಾರ ಬಿರಾದಾರ ಮಾತನಾಡಿ, ರೋಟರಿ ಸಂಸ್ಥೆಯು ನಿಸ್ವಾರ್ಥ ಮನೋಭಾವದಿಂದ ಸೇವೆ ಸಲ್ಲಿಸುವ ಸಂಸ್ಥೆಯಾಗಿದೆ. ಶೈಕ್ಷಣಿಕ ಪ್ರಗತಿಗಾಗಿ ವಿದ್ಯಾರ್ಥಿಗಳಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ವಿದ್ಯಾರ್ಥಿಗಳು ಸೌಲಭ್ಯಗಳ ಸದ್ಬಳಕೆ ಮಾಡಿಕೊಳ್ಳಬೇಕು. ಉನ್ನತ ಸ್ಥಾನಕ್ಕೆ ತಲುಪಿದ ನಂತರ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ಕಿವಿಮಾತು ಹೇಳಿದರು. ಡಾ| ಸುಭಾಷ್‌ ಕರ್ಪೂರ ಫೌಂಡೇಷನ್‌, ಡಾ| ಸಂತೋಷ ರೇಜಂತಲ್‌, ಚೇತನ ಮೇಗೂರ, ರಾಜಕುಮಾರ ಅಳ್ಳೆ, ಡಾ| ರಘು ಕೃಷ್ಣಮೂರ್ತಿ ಹಾಗೂ ನರಸಿಂಹ ಕಾರಂತ ಅವರು ಕಂಪ್ಯೂಟರ್‌ ಸಾಗಣೆ ವೆಚ್ಚದ ದಾನಿಗಳಾಗಿದ್ದಾರೆ ಎಂದು ತಿಳಿಸಿದರು.

ಪ್ರಾಚಾರ್ಯ ಸುರೇಂದ್ರ ಸಿಂಗ್‌ ಮಾತನಾಡಿದರು. ಸುಧೀಂದ್ರ ಸಿಂದೋಲ್‌, ಕಾಮಶೆಟ್ಟಿ ಚಿಕ್ಕಬಸೆ, ನಿತಿನ್‌ ಕರ್ಪೂರ, ಚೇತನ್‌ ಮೇಗೂರ, ಶಿವಕುಮಾರ ಪಾಖಲ್‌, ನರಸಿಂಹ ಕಾರಂತ, ಜಹೀರ್‌ ಅನ್ವರ್‌, ಡಾ| ಪೃಥ್ವಿರಾಜ, ಜಯಭಾರತ ಮಂಗೇಶ್ಕರ್‌, ಶಹಿದಾ ಭಾನು ಇದ್ದರು. ಉಪನ್ಯಾಸಕ ಡಾ| ವೀರಶೆಟ್ಟಿ ಮೈಲೂರಕರ್‌ ಸ್ವಾಗತಿಸಿದರು. ದಶರಥ ನಯನೂರ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next