Advertisement

ಮುಂಗಾರಿನಲ್ಲಿ 30 ಮಸೂದೆ ಪಾಸ್‌

05:42 PM Aug 05, 2019 | Team Udayavani |

ನವದೆಹಲಿ: ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿದ ಹೆಗ್ಗಳಿಕೆಗೆ ಸಂಸತ್‌ನ ಮುಂಗಾರು ಅಧಿವೇಶನ ಸಾಕ್ಷಿಯಾಗಿದೆ.

Advertisement

ಜೂ.17 ರಂದು ಶುರುವಾದ ಸಂಸತ್‌ ಅಧಿವೇಶನದಲ್ಲಿ ಒಟ್ಟು 30 ಮಸೂದೆಗಳು ಪಾಸ್‌ ಆಗಿವೆ. ಲೋಕಸಭೆಯಲ್ಲಿ 30 ಮಸೂದೆಗಳು ಅನುಮೋದನೆ ಪಡೆದಿದ್ದರೆ, ರಾಜ್ಯಸಭೆಯಲ್ಲಿ 25 ಮಸೂದೆಗಳಿಗೆ ಒಪ್ಪಿಗೆ ಸಿಕ್ಕಿದೆ.

ಆಡಳಿತ ಪಕ್ಷಕ್ಕೆ ಮೇಲ್ಮನೆಯಲ್ಲಿ ಸರಿಯಾದ ಬಹುಮತ ಇಲ್ಲದಿದ್ದರೂ, ವಿಪಕ್ಷಗಳನ್ನು ಮನವೊಲಿಕೆ ಮಾಡಿ ಮಸೂದೆಗಳಿಗೆ ಒಪ್ಪಿಗೆ ಪಡೆದ ಕೀರ್ತಿಯೂ ಆಡಳಿತ ಪಕ್ಷಕ್ಕೆ ಸಂದಿದೆ.

ವಿಶೇಷವೆಂದರೆ, 1952ರಲ್ಲಿ ಮಾತ್ರ ಅಧಿವೇಶನವೊಂದರಲ್ಲಿ ಈ ಪ್ರಮಾಣದ ಮಸೂದೆಗಳು ಅನುಮೋದನೆ ಪಡೆದಿದ್ದವು. ಜವಾಹರ್‌ ಲಾಲ್ ನೆಹರು ಅವರು ಆಗ ಪ್ರಧಾನಿಯಾಗಿದ್ದು, ಒಟ್ಟು 27 ಮಸೂದೆಗಳಿಗೆ ಅಂಗೀಕಾರ ಸಿಕ್ಕಿತ್ತು. ಇದನ್ನು ಬಿಟ್ಟರೆ, ಈಗಲೇ ಈ ಪ್ರಮಾಣದ ಮಸೂದೆಗಳು ಪಾಸ್‌ ಆಗಿವೆ.

ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಷಿ ಅವರು, ಆಗಸ್ಟ್‌ 7ರ ಒಳಗೆ ಉಳಿದ ಮಸೂದೆಗಳಿಗೂ ಅನುಮೋದನೆ ಪಡೆಯಲು ಯತ್ನಿಸುತ್ತೇವೆ. ಸಂಸತ್‌ನ ಇತಿಹಾಸದಲ್ಲಿ ಹೊಸ ಅಧ್ಯಾಯ ಶುರು ಮಾಡುತ್ತೇವೆ ಎಂದು ಗುರುವಾರ ಹೇಳಿದ್ದರು.

Advertisement

ಪ್ರತಿಪಕ್ಷಗಳ ಆಕ್ಷೇಪ: ತರಾತುರಿಯಲ್ಲಿ ಮಸೂದೆಗಳು ಪಾಸ್‌ ಆಗಿ ಹೋಗುತ್ತಿರುವ ಬಗ್ಗೆ ಪ್ರತಿಪಕ್ಷಗಳ ನಾಯಕರು ತೀವ್ರ ಆಕ್ಷೇಪವೆತ್ತಿದ್ದಾರೆ. ಇದುವರೆಗೆ ಈ ಅಧಿವೇಶನದಲ್ಲಿ ಯಾವುದೇ ಮಸೂದೆಗಳು ಆಯ್ಕೆ ಸಮಿತಿಗೆ ಹೋಗಿಲ್ಲ ಎಂಬುದು ಈ ನಾಯಕರ ಆಕ್ಷೇಪ. ಈ ಬಗ್ಗೆ ರಾಜ್ಯಸಭೆಯಲ್ಲಿನ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಮತ್ತು ಟಿಎಂಸಿ ನಾಯಕ ಡೆರಿಕ್‌ ಒ ಬ್ರಿಯಾನ್‌ ತಮ್ಮ ಆಕ್ರೋಶವನ್ನೂ ಹೊರಹಾಕಿದ್ದರು.

ಕ್ರಿಯಾಶೀಲ ಸ್ಪೀಕರ್‌: ಈ ಪ್ರಮಾಣದ ಮಸೂದೆಗಳು ಪಾಸ್‌ ಆಗುವುದರಲ್ಲಿ ಸ್ಪೀಕರ್‌ ಓಂ ಬಿರ್ಲಾ ಅವರ ಪಾತ್ರವೂ ಹೆಚ್ಚಿದೆ ಎಂದು ಕೇಂದ್ರದ ಸಚಿವರೊಬ್ಬರು ಹೇಳಿದ್ದಾರೆ. ಬೆಳಗ್ಗೆ 9.30ಕ್ಕೇ ಸಂಸತ್‌ಗೆ ಆಗಮಿಸುವ ಸ್ಪೀಕರ್‌ ಅವರು, ಅಂದು ಮಂಡನೆಯಾಗಬೇಕಾಗಿರುವ ಮಸೂದೆಗಳ ಮಾಹಿತಿ ಪಡೆಯುತ್ತಾರೆ. ಬಳಿಕ ಅತ್ಯಂತ ಸುಲಲಿತವಾಗಿ ಸದನವನ್ನು ನಡೆಸಿಕೊಂಡು ಹೋಗುತ್ತಾರೆ ಎಂದು ಹೇಳಿದ್ದಾರೆ.

ಲೋಕಸಭೆಯಲ್ಲಿ ಸಲೀಸು
ಬಿಜೆಪಿ ನೇತೃತ್ವದ ಎನ್‌ಡಿಎಗೆ ಲೋಕಸಭೆಯಲ್ಲಿ 352 ಸದಸ್ಯರ ಬಲವುಂಟು. ಹೀಗಾಗಿ ಇಲ್ಲಿ ಯಾವುದೇ ಮಸೂದೆ ಪಾಸ್‌ ಆಗಲು ಪ್ರತಿಪಕ್ಷಗಳ ನೆರವು ಬೇಕಾಗಿಲ್ಲ. ಹೀಗಾಗಿಯೇ ಇಲ್ಲಿ 30 ಮಸೂದೆಗಳು ಅನುಮೋದನೆ ಪಡೆದುಕೊಂಡಿವೆ. ಆದರೆ, ರಾಜ್ಯಸಭೆಯಲ್ಲಿ ಆಡಳಿತ ಪಕ್ಷಕ್ಕೆ ಬಹುಮತ ಇಲ್ಲ. ಇಲ್ಲಿ ಪ್ರತಿಪಕ್ಷಗಳಿಗೇ ಹೆಚ್ಚಿನ ಸ್ಥಾನವುಂಟು. ಇಂಥ ಪರಿಸ್ಥಿತಿಯಲ್ಲೂ ಪ್ರತಿಪಕ್ಷ ನಾಯಕರ ಜತೆಗೆ ಮಾತುಕತೆ ನಡೆಸಿ 25 ಮಸೂದೆಗಳಿಗೆ ಒಪ್ಪಿಗೆ ಪಡೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next