ಕಲಬುರಗಿ: ರೈತರು ನಿರೀಕ್ಷಿಸುತ್ತಿದ್ದ ಬೆಳೆಹಾನಿ ಪರಿಹಾರ ಬುಧವಾರ ಸೆ.14ರಿಂದ ರೈತರ ಖಾತೆಗೆ ಜಮಾ ಆಗಲಿದೆ. ಪ್ರಸಕ್ತ ಅತಿವೃಷ್ಟಿಯಿಂದ ಆಗಿರುವ ಮುಂಗಾರು ಹಂಗಾಮು ಬೆಳೆ ಹಾನಿ ಪರಿಹಾರವಾಗಿ 30.79 ಕೋಟಿ ರೂ. ಮೊದಲನೇ ಕಂತಿನ ರೂಪದ ಹಣ 33,487 ರೈತರ ಖಾತೆಗಳಿಗೆ ಜಮೆ ಆಗಲಿದೆ.
ಜುಲೈ-ಆಗಸ್ಟ್ ತಿಂಗಳಲ್ಲಿ ಜಿಲ್ಲೆಯಾದ್ಯಂತ ಆಗಿರುವ ಬೆಳೆಹಾನಿಯ ಪ್ರಾಥಮಿಕ ವರದಿ ವರದಿ ಆಧಾರದ ಮೇಲೆ ಕಳುಹಿಸಿದ್ದ 1.10 ಲಕ್ಷ ರೈತರ ಅಂದಾಜು 80 ಕೋ.ರೂ. ಪರಿಹಾರದಲ್ಲಿ ಈಗ ಮೊದಲ ಕಂತು ಪರಿಹಾರ ಮಂಜೂರಾಗಿದೆ. ಮಂಗಳವಾರ ಜಿಲ್ಲಾಧಿಕಾರಿ ಯಶವಂತ ಗುರುಕರ್ ಅವರು 33.487 ರೈತರ ಫಲಾನುಭವಿ ಪಟ್ಟಿಗೆ ಅನುಮೋದನೆ ನೀಡಿದ್ದರಿಂದ ಬುಧವಾರದಿಂದ ರೈತರ ಖಾತೆಗೆ ಜಮಾ ಆಗಲಿದೆ.
150 ಕೋ.ರೂ ಬೆಳೆಹಾನಿ: ಜಿಲ್ಲೆಯಾದ್ಯಂತ ಸೆಪ್ಟೆಂಬರ್ ಮೊದಲ ವಾರದವರೆಗೆ 1.78 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ 150 ಕೋ.ರೂ. ಪರಿಹಾರ ಕೋರಿ ಜಿಲ್ಲಾಡಳಿತದಿಂದ ಸೋಮವಾರವಷ್ಟೇ ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆ. ಮೊದಲ ಕಂತು 30.79 ಕೋ.ರೂ. ಪರಿಹಾರ ರೈತರ ಖಾತೆಗೆ ಜಮಾ ಆದ ನಂತರ ಮುಂದಿನ ಎರಡ್ಮೂರು ವಾರದೊಳಗೆ ಎರಡನೇ ಕಂತು ರೈತರ ಖಾತೆಗೆ ಜಮಾ ಆಗಲಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲೇ ಅತ್ಯಧಿಕ: ವಾರದ ಹಿಂದೆ ಕಲಬುರಗಿ ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ ಕಲಬುರಗಿಗೆ ಬಂದು ಹೋಗಿದೆ. ಅಧ್ಯಯನ ತಂಡ ಕೇಂದ್ರಕ್ಕೆ ವರದಿ ಸಲ್ಲಿಕೆಯಾದ ನಂತರ ಪರಿಹಾರ ಬಿಡುಗಡೆಯಾಗುತ್ತಿತ್ತು. ಆದರೆ ಈಗ ಅಧ್ಯಯನ ತಂಡ ಬರುವ ಸಂದರ್ಭದಲ್ಲೇ ಪರಿಹಾರ ಬಿಡುಗಡೆಯಾಗಿರುವುದು ಇದೇ ಮೊದಲಾಗಿದೆ. 1.78 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿರುವ ಕುರಿತಾಗಿ ಈಗ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ವರದಿ ಪ್ರಕಾರ ರಾಜ್ಯದಲ್ಲೇ ಇದು ಅತ್ಯಧಿಕ ಹಾನಿ ಎಂದು ತಿಳಿದು ಬಂದಿದೆ. ಅದಲ್ಲದೇ ಕಲಬುರಗಿ ಜಿಲ್ಲೆಯಲ್ಲಿ ಸರಾಸರಿಗಿಂತ ಮಳೆಗಿಂತ ಶೇ.53 ಹೆಚ್ಚುವರಿ ಮಳೆಯಾಗಿದೆ. ಇನ್ನೂ ಮಳೆ ಮುಂದುವರಿದಿದೆ.
ಜುಲೈ, ಆಗಸ್ಟ್ ಹಾಗೂ ಪ್ರಸಕ್ತ ತಿಂಗಳಲ್ಲಿ ವರ್ಷದ ಸರಾಸರಿಗಿಂತ ಶೇ.50 ಹೆಚ್ಚುವರಿ ಮಳೆಯಾಗಿದೆ. ಕಳೆದ ಎರಡು ವಾರಗಳಲ್ಲಿ 69 ಮೀ.ಮೀ ಮಳೆ ಪೈಕಿ 109 ಮೀ.ಮೀ. ಮಳೆಯಾಗಿ ಶೇ. 57 ಮಳೆಯಾಗಿದೆ. ಜಿಲ್ಲೆ ಕೆಲವೆಡೆಯಂತೂ ವರ್ಷದ ಸರಾಸರಿ ಎರಡುಪಟ್ಟು ಮಳೆ ಜಾಸ್ತಿಯಾಗಿದೆ. ಹೀಗಾಗಿ ಬೆಳೆ ಕೈಗೆ ಬಾರದಂತಾಗಿದೆ. ಸತತ ಮಳೆಯಿಂದ ತೆಗ್ಗಿನ ಪ್ರದೇಶದ ಬೆಳೆಗಳೆಲ್ಲ ಸಂಪೂರ್ಣ ಹಾನಿಯಾಗಿದೆಯಲ್ಲದೇ ಉಳಿದ ಪ್ರದೇಶದ ಬೆಳೆಗಳು ಸಹ ಮಳೆ ಹೆಚ್ಚಾಗಿದ್ದರಿಂದ ಬೆಳೆಗಳ ಬೆಳವಣಿಗೆ ಕುಂಠಿತವಾಗಿದೆ. ಬೆಳೆಗಳ ಬೇರು ಸಂಪೂರ್ಣ ಕೊಳೆತು ಹೋಗಿದೆ. ಬೆಳೆ ನೆಟೆರೋಗಕ್ಕೆ ಒಳಗಾಗುವ ಆತಂಕ ಎದುರಾಗಿದೆ.
ಬೆಳೆವಿಮೆಯಲ್ಲೂ ದಾಖಲೆ: ಪ್ರಸಕ್ತವಾಗಿ ಜಿಲ್ಲೆಯಲ್ಲಿ ಬೆಳೆವಿಮೆ ಸಹ ರೈತರು ದಾಖಲೆ ಮಾಡಿಸಿದ್ದು, 2.14 ಲಕ್ಷ ರೈತರು ಬೆಳೆವಿಮೆಗೆಂದು ಪ್ರಿಮಿಯಂ ತುಂಬಿದ್ದು, ಈಗಾಗಲೇ ಇದರಲ್ಲಿ 80 ಸಾವಿರ ರೈತರು ಅತಿವೃಷ್ಟಿಯಿಂದ ತಮ್ಮ ಬೆಳೆಹಾನಿಯಾಗಿದೆ ಎಂದು ಅರ್ಜಿ ಸಲ್ಲಿಸಿದ್ದಾರೆ. ಕಳೆದ ವರ್ಷ ಜಿಲ್ಲೆಗೆ 55 ಕೋ. ರೂ. ಬೆಳೆವಿಮೆ ಬಿಡುಗಡೆಯಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ವಿದೇಶ ಪ್ರವಾಸದಲ್ಲಿರುವುದರಿಂದ ಅಲ್ಲಿಂದಲೇ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಪರಿಸ್ಥಿತಿ ಅವಲೋಕನ ನಡೆಸಿದ್ದಾರೆ.
-ಹಣಮಂತರಾವ ಭೈರಾಮಡಗಿ