Advertisement
ಈ ಸಂಬಂಧ ಮೈಸೂರು ಮೂಲದ ಡಾ| ಚಂದನ್ ಬಲ್ಲಾಳ್ (52) ಮತ್ತು ಆತನ ಸಹಚರ, ಪ್ರಯೋಗಾಲಯದ ತಾಂತ್ರಿಕ ಸಿಬಂದಿ ನಿಸಾರ್ (28) ಎಂಬಾತನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಈ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದ ಮೈಸೂರಿನ ಉದಯಗಿರಿಯಲ್ಲಿರುವ ಮಾತಾ ಆಸ್ಪತ್ರೆ, ರಾಜ್ ಕುಮಾರ್ ರಸ್ತೆಯಲ್ಲಿ ರುವ ಆಯುರ್ವೇದಿಕ್ ಫೈಲ್ಸ್ ಡೇ ಕೇರ್ ಸೆಂಟರ್‌ಗಳನ್ನು ಜಪ್ತಿ ಮಾಡ ಲಾಗಿದೆ. ಆರೋಪಿ ಡಾ| ಚಂದನ್ ಬಲ್ಲಾಳ್ ಹೆಣ್ಣುಭ್ರೂಣ ಪತ್ತೆ ಹಚ್ಚಿ ಗರ್ಭಪಾತ ಮಾಡಿಸುತ್ತಿದ್ದರೆ, ಈ ಕೃತ್ಯಕ್ಕೆ ಬೇಕಾದ ಔಷಧಗಳನ್ನು ಆರೋಪಿ ನಿಸಾರ್ ತಂದುಕೊಡುತ್ತಿದ್ದ ಎಂಬುದು ಗೊತ್ತಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಹಳೇ ಮದ್ರಾಸ್ ರಸ್ತೆ ಕಡೆಯಿಂದ ಗರ್ಭಿಣಿಯನ್ನು ಪರೀಕ್ಷೆಗೆ ಕರೆದೊಯ್ಯಲು ವೀರೇಶ್ ತಂಡ ಬರುವ ಖಚಿತ ಮಾಹಿತಿ ಬೈಯಪ್ಪನಹಳ್ಳಿ ಠಾಣೆ ಇನ್‌ಸ್ಪೆಕ್ಟರ್ ಪ್ರಶಾಂತ್ ಅವರಿಗೆ ಸಿಕ್ಕಿತ್ತು. ಹೀಗಾಗಿ ಪ್ರಶಾಂತ್ ನೇತೃತ್ವದ ಪೊಲೀಸರ ತಂಡ ಹಳೇ ಮದ್ರಾಸ್ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿತ್ತು. ಆ ವೇಳೆ ಅಲ್ಲಿಗೆ ಬಂದ ದಂಧೆಕೋರರು ಪೊಲೀಸರನ್ನು ಕಂಡು ಭೀತಿಯಿಂದ ಕಾರನ್ನು ವೇಗವಾಗಿ ಚಲಾಯಿಸಿ ಕೊಂಡು ಹೋಗಲು ಯತ್ನಿಸಿದ್ದರು. ಅದರಿಂದ ಮತ್ತಷ್ಟು ಅನುಮಾನಗೊಂಡ ಪೊಲೀಸರು ಕೂಡಲೇ ಆ ಕಾರನ್ನು ಸ್ಪಲ್ಪ ದೂರ ಬೆನ್ನು ಹತ್ತಿ ಹೋಗಿ ತಡೆದಿದ್ದರು. ಬಳಿಕ ಕಾರಿನಲ್ಲಿದ್ದ ಶಿವಲಿಂಗೇಗೌಡ, ನಯನ್ ಹಾಗೂ ಗರ್ಭಿಣಿಯನ್ನು ಠಾಣೆ ಕರೆತಂದು ವಿಚಾರಿಸಿದಾಗ ಜಾಲ ಬಯಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಡಾ| ಚಂದನ್ ಬಲ್ಲಾಳ್‌ನ ಪತ್ನಿ ಹಾಗೂ ಮಾತಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಸಿ.ಎಂ. ಮೀನಾ ಹಾಗೂ ಆಸ್ಪತ್ರೆಯ ಸ್ವಾಗತಕಾರಿಣಿ ರಿಜ್ಮಾ ಖಾನುಂ, ಮಧ್ಯವರ್ತಿಗಳಾದ ಶಿವಲಿಂಗೇಗೌಡ, ನಯನ್ ಕುಮಾರ್, ವೀರೇಶ್, ನವೀನ್‌ಕುಮಾರ್ ಹಾಗೂ ಚೆನ್ನೈ ಮೂಲದ ವೈದ್ಯ ಡಾ| ತುಳಸಿರಾಮ್ ಅವರನ್ನು ಬಂಧಿಸಲಾಗಿತ್ತು. ಈ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಚಂದನ್ ಬಲ್ಲಾಳ್ ಮತ್ತು ಆತನ ಸಹಚರರನ್ನು ಬಂಧಿಸಲಾಗಿದೆ.
Related Articles
ವಿಚಾರಣೆ ವೇಳೆ ಚಂದನ್ ಬಲ್ಲಾಳ್ ಮೂರು ವರ್ಷಗಳಲ್ಲಿ 900ಕ್ಕೂ ಹೆಚ್ಚು ಹೆಣ್ಣು ಭ್ರೂಣ ಪತ್ತೆ ಹಚ್ಚಿ ಗರ್ಭಪಾತ ಮಾಡಿದ್ದಾನೆ ಎಂಬುದು ಗೊತ್ತಾಗಿದೆ. ಪ್ರತೀ ತಿಂಗಳು 22ರಿಂದ 25 ಗರ್ಭಪಾತ ಮಾಡುತ್ತಿದ್ದು, ಪ್ರತೀ ಗರ್ಭಪಾತಕ್ಕೆ 25-30 ಸಾವಿರ ರೂ. ಪಡೆದುಕೊಳ್ಳುತ್ತಿದ್ದರು. ಮಂಡ್ಯ ಜಿಲ್ಲೆಯ ಕೆಲವು ಆಲೆ ಮನೆಗಳನ್ನು ಸ್ಕ್ಯಾನಿಂಗ್ ಸೆಂಟರ್‌ಗಳನ್ನಾಗಿ ಪರಿವರ್ತಿಸಿಕೊಂಡು, ಕೈಯಲ್ಲಿ ಕೊಂಡೊಯ್ಯುವ ಸ್ಕ್ಯಾನ್ ಯಂತ್ರದ ಮೂಲಕ ಹೆಣ್ಣು ಭ್ರೂಣ ಪತ್ತೆ ಹಚ್ಚುತ್ತಿದ್ದರು. ಈ ಕೃತ್ಯಕ್ಕೆ ಶಿವಲಿಂಗೇಗೌಡ, ನಯನ್ ಕುಮಾರ್, ಶಿವನಂಜೇಗೌಡ, ವೀರೇಶನನ್ನು ಬಳಸಿಕೊಳ್ಳುತ್ತಿದ್ದರು.
ಈತ ಮೈಸೂರಿನಲ್ಲಿರುವ ತನ್ನ ಮಾತಾ ಆಸ್ಪತ್ರೆಯನ್ನು ಅಭಿವೃದ್ಧಿ ಪಡಿಸಿ ಬೇರೆ ವೈದ್ಯರನ್ನು ಅಲ್ಲಿಗೆ ಕರೆಸಿಕೊಂಡು ಈ ರೀತಿಯ ಕೃತ್ಯವೆಸಗುತ್ತಿದ್ದ.
Advertisement
ಇವರ ಕೃತ್ಯದ ಬಗ್ಗೆ ಕೆಲವರಿಗೆ ಗೊತ್ತಾದ ಹಿನ್ನೆಲೆಯಲ್ಲಿ ಮೈಸೂರಿನ ಡಾ| ರಾಜ್‌ಕುಮಾರ್ ರಸ್ತೆಯಲ್ಲಿ ಮತ್ತೂಂದು ಆಸ್ಪತ್ರೆಯನ್ನು ಆರಂಭಿಸಿದ್ದು, ಅದಕ್ಕೆ ಆಯುರ್ವೇದಿಕ್ ಫೈಲ್ಸ್ ಡೇ ಕೇರ್ ಸೆಂಟರ್ ಎಂಬ ಹೆಸರಿಟ್ಟು ಅಲ್ಲಿಗೆ ರಿಜ್ಮಾ ತಂಡವನ್ನು ಕರೆಸಿಕೊಂಡು ಗರ್ಭಿಣಿಯರನ್ನು ದಾಖಲಿಸಿ ಗರ್ಭಪಾತ ಮಾಡಿಸುತ್ತಿದ್ದ. ಈ ಸೆಂಟರ್‌ಗೆ ನಾಸಿರ್ ಔಷಧಗಳನ್ನು ಮಾತಾ ಆಸ್ಪತ್ರೆಯಿಂದ ಪೂರೈಕೆ ಮಾಡುತ್ತಿದ್ದ ಎಂಬುದು ಗೊತ್ತಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನಷ್ಟು ಮಂದಿಯ ಕೈವಾಡಹೆಣ್ಣು ಭ್ರೂಣ ಪತ್ತೆ ಹಾಗೂ ಗರ್ಭಪಾತ ಮಾಡಿಸುತ್ತಿದ್ದ ಜಾಲದ ಕುರಿತು ಮಾಹಿತಿ ಪಡೆದಿದ್ದ ಬೈಯ್ಯಪ್ಪನಹಳ್ಳಿ ಪೊಲೀಸರು ಅಕ್ಟೋಬರ್‌ನಲ್ಲಿ ಶಿವನಂಜೇಗೌಡ, ವೀರೇಶ್, ನವೀನ್ ಕುಮಾರ್ ಮತ್ತು ನಯನ್ ಕುಮಾರ್‌ನನ್ನು ಬಂಧಿಸಿದ್ದರು. ಬಂಧಿತ ಆರೋಪಿಗಳು ಗರ್ಭಿಣಿಯರನ್ನು ಗುರುತಿಸಿಕೊಂಡು ಮಂಡ್ಯದ ಆಲೆಮನೆಯೊಂದರಲ್ಲಿ ಸ್ಕ್ಯಾನ್ ಮಾಡಿಸುತ್ತಿದ್ದರು. ಬಳಿಕ ಹೆಣ್ಣು ಭ್ರೂಣವಾಗಿರುವುದು ಖಚಿತವಾದರೆ ಮೈಸೂರಿನ ಡಾ| ಚಂದನ್ ಬಲ್ಲಾಳ್‌ನ ಆಸ್ಪತ್ರೆಗೆ ಕರೆದೊಯ್ದು ಗರ್ಭಪಾತ ಮಾಡಿಸುತ್ತಿದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿತ್ತು. ಪ್ರಕರಣ ಬೆಳಕಿಗೆ ಬಂದ ಬಳಿಕ ಆರೋಪಿ ಚಂದನ್ ಬಲ್ಲಾಳ್ ಮತ್ತು ನಾಸಿರ್ ನಾಪತ್ತೆಯಾಗಿದ್ದರು. ಈಗ ಅವರನ್ನು ಬಂಧಿಸಲಾಗಿದೆ. ಜಿಲ್ಲೆ, ಬೇರೆ ರಾಜ್ಯಗಳಿಗೂ ವ್ಯಾಪಿಸಿದ್ದ ಜಾಲ
ಹೆಣ್ಣು ಭ್ರೂಣ ಪತ್ತೆ ಹಾಗೂ ಗರ್ಭಪಾತ ಮಾಡಿಸುತ್ತಿದ್ದ ಈ ಜಾಲವು ಕೇವಲ ಬೆಂಗಳೂರು, ಮೈಸೂರಿಗೆ ಸೀಮಿತವಾಗಿಲ್ಲ, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕದ ಕೆಲವು ಜಿಲ್ಲೆಗಳಿಗೂ ವ್ಯಾಪಿಸಿದೆ. ಅಲ್ಲದೆ ನೆರೆ ರಾಜ್ಯಗಳಿಗೂ ಹರಡಿಕೊಂಡಿದೆ ಎಂಬುದು ಗೊತ್ತಾಗಿದೆ. ಸದ್ಯ ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು, ತುಮಕೂರು, ದಾವಣಗೆರೆಯಲ್ಲಿ ಈ ತಂಡ ಸಕ್ರಿಯವಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.