Advertisement

3 ವರ್ಷದಲ್ಲಿ ಮಹಿಳೆ, ಅಪ್ರಾಪ್ತ ಹೆಣ್ಣಿನ ಮೇಲೆ 3340 ದೌರ್ಜನ್ಯ!

11:29 AM Jan 05, 2017 | Team Udayavani |

ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ “ಸಿಲಿಕಾನ್‌ ಸಿಟಿ’ ಎಂಬ ಖ್ಯಾತಿ ಹೊಂದಿರುವ ಬೆಂಗಳೂರಿನಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳೂ ಸಾಕಷ್ಟು ಹೆಚ್ಚಾಗುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ಇಂತಹ ಒಟ್ಟು 3,340 ಪ್ರಕರಣಗಳು ವರದಿಯಾಗಿವೆ.

Advertisement

ಆಡಳಿತ ಶಕ್ತಿ ಕೇಂದ್ರವಿರುವ, ಅತಿ ಹೆಚ್ಚು ಪೊಲೀಸ್‌ ಭದ್ರತೆ ಇರುವ ನಗರದಲ್ಲಿ ಹೊಸ ವರ್ಷಾಚರಣೆ ವೇಳೆ ಯುವತಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯಗಳು ಜನ ಬೆಚ್ಚಿಬೀಳುವಂತೆ ಮಾಡಿದ್ದು, ಇದರ ಜತೆಗೆ ಅತ್ಯಾಚಾರ, ಲೈಂಗಿಕ ದೌರ್ಜನ್ಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದರೂ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದು ಆತಂಕ ಮೂಡಿಸಿದೆ.

ಕಳೆದ ಮೂರು ವರ್ಷಗಳಲ್ಲಿ ಮಹಿಳೆಯರು ಮತ್ತು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ನಡೆದಿರುವ ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳ ಅಂಕಿ-ಅಂಶಗಳೇ ಇದನ್ನು ಸಾಬೀತುಪಡಿಸುತ್ತವೆ. ಮೂರು ವರ್ಷದಲ್ಲಿ ಮಹಿಳೆ ಮತ್ತು ಹೆಣ್ಣು ಮಕ್ಕಳ ಮೇಲೆ 3340 ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 2,160 ಲೈಂಗಿಕ ಕಿರುಕುಳ, 322 ಅತ್ಯಾಚಾರ ಮತ್ತು 858 ಪೋಕ್ಸೊ ಪ್ರಕರಣಗಳಿವೆ.

2014ರಲ್ಲಿ ನಗರದ ವಿವಿಧ ಠಾಣೆಗಳಲ್ಲಿ 690 ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿದ್ದು, 2015ರಲ್ಲಿ 714 ಮತ್ತು 2016ರಲ್ಲಿ 756 ಪ್ರಕರಣಗಳು ದಾಖಲಾಗಿದೆ ಎಂದು ಸಿಸಿಆರ್‌ಬಿ (ನಗರ ಅಪರಾಧ ದಾಖಲಾತಿ ಘಟಕ) ತಿಳಿಸಿದೆ.  ಇದೇ ರೀತಿ ಅತ್ಯಾಚಾರಕ್ಕೆ ಸಂಬಂಧಿಸಿದಂತೆ 2014ರಲ್ಲಿ 112, 2015ರಲ್ಲಿ 114 ಹಾಗೂ 2015ರಲ್ಲಿ 96 ಪ್ರಕರಣಗಳು ದಾಖಲಾಗಿವೆ.

ಅಲ್ಲದೆ, ಅಪ್ರಾಪ್ತರ ಮೇಲೆ ನಡೆದಿ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪೋಕ್ಸೊ ಕಾಯ್ದೆಯಡಿ 2014ರಲ್ಲಿ 302, 2015ರಲ್ಲಿ 276 ಹಾಗೂ 2016ರಲ್ಲಿ 280 ಪ್ರಕರಣ ದಾಖಲಾಗಿದೆ. ಈ ಪ್ರಕರಣಗಳು ದಾಖಲಾದ ಕೂಡಲೇ ಪೊಲೀಸರು ಶೀಘ್ರ ವಿಲೇವಾರಿ ಮಾಡಿದ್ದು, ಶೇ.95 ರಷ್ಟು ಪ್ರಕರಣದ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Advertisement

ಈ ಕಾರಣಗಳಿಂದಾಗಿಯೇ ಕೆಲವರು ರಾಜಧಾನಿ ಬೆಂಗಳೂರನ್ನು “ರೇಪ್‌ ಸಿಟಿ’ ಎಂಬ ಅಪಕೀರ್ತಿಗೆ ತಳ್ಳುತ್ತಿದ್ದಾರೆ. ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂಬ ಆರೋಪ ಕೇಳಿಬಂದಿದೆ. ಅದಕ್ಕೆ ಪುಷ್ಠಿ ನೀಡುವಂತೆ ಹೊಸ ವರ್ಷಚಾರಣೆ ಸಂದರ್ಭದಲ್ಲಿ ಎಂ.ಜಿ.ರಸ್ತೆಯಲ್ಲಿ ನಡೆದ ಹಾಗೂ ಕಮ್ಮನಹಳ್ಳಿಯಲ್ಲಿ ಯುವತಿಯನ್ನು ಅಡ್ಡ ಹಾಕಿ ಲೈಂಗಿಕ ದೌರ್ಜನ್ಯ ನಡೆಸಿರುವುದು ವರದಿಯಾಗಿದೆ.

ಇಂತಹದ್ದೇ ಪ್ರಕರಣ ಕಳೆದ ವರ್ಷ ಏಪ್ರಿಲ್‌ನಲ್ಲಿ ನಡೆದಿತ್ತು. ಉತ್ತರ ಭಾರತ ಮೂಲದ ಯುವತಿ ಸಿ.ಕೆ.ಅಚ್ಚುಕಟ್ಟು ಠಾಣಾ ವ್ಯಾಪ್ತಿಯಲ್ಲಿರುವ ಪಿ.ಜಿ.ಮುಂದೆ ನಿಂತಿದ್ದಾಗ ಹಿಂದಿನಿಂದ ಬಂದ ಕಾಮುಕನೊಬ್ಬ ಆಕೆಯನ್ನು ನಿರ್ಮಾಣ ಹಂತದ ಕಟ್ಟಡಕ್ಕೆ ಹೊತ್ತೂಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ. ಬಳಿಕ ಯುವತಿ ಕಿರುಚಾಟದಿಂದ ಬೆದರಿ ಆಕೆಯನ್ನು ಬಿಟ್ಟು ಪರಾರಿಯಾಗಿದ್ದನು.

Advertisement

Udayavani is now on Telegram. Click here to join our channel and stay updated with the latest news.

Next