Advertisement

ಲಾಕ್‌ಡೌನ್‌ ತೆರವು ಬಳಿಕ 3 ವಾರ ತರಗತಿ; ಜೂನ್‌ ಅಂತ್ಯಕ್ಕೆ ಪರೀಕ್ಷೆ

08:29 AM May 10, 2020 | Sriram |

ಮಂಗಳೂರು: ಲಾಕ್‌ಡೌನ್‌ ತೆರವುಗೊಂಡ ಬಳಿಕ ವಿದ್ಯಾರ್ಥಿಗಳಿಗೆ 2ರಿಂದ 3 ವಾರಗಳ ತರಗತಿಗಳನ್ನು ನಡೆಸಿದ ಬಳಿಕವಷ್ಟೇ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ| ಪಿ.ಎಸ್‌. ಎಡಿಪಡಿತ್ತಾಯ ಹೇಳಿದ್ದಾರೆ.

Advertisement

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ ಪ್ರಸಕ್ತ ಶೈಕ್ಷಣಿಕ ಚಟು ವಟಿಕೆಗಳಿಗೆ ಉಂಟಾಗಿರುವ ಹಿನ್ನಡೆ, ಈ ಕುರಿತಂತೆ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಎದುರಾಗಿರುವ ಸಂದೇಹ ಗಳನ್ನು ಬಗೆಹರಿಸುವ ಆಶಯದೊಂದಿಗೆ ಉದಯವಾಣಿಯ ಮಂಗಳೂರು ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ “ಫೋನ್‌-ಇನ್‌’ನಲ್ಲಿ ಅವರು ಮಾತನಾಡಿದರು.

ಒಂದು ವೇಳೆ ಮೇ ಅಂತ್ಯದೊಳಗೆ ಲಾಕ್‌ಡೌನ್‌ ತೆರವುಗೊಂಡರೆ, ಜೂನ್‌ ಮೊದಲ ವಾರದಿಂದ 3ನೇ ವಾರದವರೆಗೆ ತರಗತಿ ಮುಂದುವರಿಸಿ ಬಾಕಿಯಾಗಿರುವ ಪಠ್ಯವನ್ನು ಪೂರ್ಣಗೊಳಿಸಲಾಗುವುದು. ಆ ಬಳಿಕ ಜೂನ್‌ ಕೊನೆಯ ವಾರದಿಂದ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಲಾಕ್‌ಡೌನ್‌ ಅನಂತರದ ಕಾರ್ಯಚಟುವಟಿಕೆ ಕುರಿತಂತೆ ಮಾನವ ಸಂಪನ್ಮೂಲ ಇಲಾಖೆ, ಯುಜಿಸಿ, ಉನ್ನತ ಶಿಕ್ಷಣ ಪರಿಷತ್‌ ಉನ್ನತ ಶಿಕ್ಷಣ ಇಲಾಖೆ ಹಾಗೂ ಎಲ್ಲ ವಿ.ವಿ.ಗಳ ಉಪಕುಲಪತಿಗಳ ಸಭೆ ನಡೆದಿದ್ದು, ಉನ್ನತ ಶಿಕ್ಷಣ ಇಲಾಖೆಯಿಂದ 10 ದಿನಗಳೊಳಗೆ ಶೈಕ್ಷಣಿಕ ವೇಳಾಪಟ್ಟಿ ಬರುವ ಸಾಧ್ಯತೆಯಿದೆ. ಆನ್‌ಲೈನ್‌ ತರಗತಿಗಳ ಮೂಲಕ ಎಲ್ಲ ವಿದ್ಯಾರ್ಥಿಗಳನ್ನು ತಲುಪಲು ಸಾಧ್ಯವಿಲ್ಲದ ಕಾರಣ ಲಾಕ್‌ಡೌನ್‌ ತೆರವು ಬಳಿಕ ಎರಡು ಅಥವಾ ಮೂರು ವಾರ ತರಗತಿ ನಡೆಸಿ ಬಳಿಕ ಪರೀಕ್ಷೆ ನಡೆಸುವಂತೆ ಆ ಸಭೆಯಲ್ಲಿ ಸಲಹೆ ಮಾಡಿದ್ದೇವೆ. ಇದಕ್ಕೆ ಉನ್ನತ ಶಿಕ್ಷಣ ಸಚಿವರು ಸಹಮತ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆಯು ಮಾರ್ಗಸೂಚಿ ಪ್ರಕಟಿಸಲಿದ್ದು, ಅದರಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ತರಗತಿ-ಪರೀಕ್ಷೆ ನಡೆಸುವ ಹಾಗೂ ಮುಂದಿನ ಶೈಕ್ಷಣಿಕ ವರ್ಷಾರಂಭದ ಕುರಿತು ನಿರ್ದೇಶನ ಹೊರಬರಲಿದೆ ಎಂದರು.

ಜುಲೈಯಲ್ಲಿ ಫಲಿತಾಂಶ
ಅಮುಕ್‌¤, ಪದವಿ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರಿಂದ ಪಡೆದುಕೊಂಡಿರುವ ಮಾಹಿತಿಯಂತೆ ಪ್ರಸ್ತುತ ಪದವಿಯಲ್ಲಿ ಶೇ. 90ರಿಂದ 95ರಷ್ಟು ಹಾಗೂ ಸ್ನಾತಕೋತ್ತರದಲ್ಲಿ ಶೇ. 80ರಿಂದ 85ರಷ್ಟು ಪಠ್ಯಗಳು ಪೂರ್ತಿಯಾಗಿವೆ. ಲಾಕ್‌ಡೌನ್‌ ಮುಗಿದ ಬಳಿಕ ಪದವಿ ಹಾಗೂ ಸ್ನಾತಕೋತ್ತರ ಪದವಿ ಅಂತಿಮ ಸೆಮಿಸ್ಟರ್‌ ತರಗತಿಗಳನ್ನು ಮುಂದುವರಿಸಿ ಪರೀಕ್ಷೆಗಳನ್ನು ನಡೆಸಲಾಗುವುದು. ಜುಲೈ ಅಂತ್ಯದೊಳಗೆ ಎಲ್ಲ ಪರೀಕ್ಷೆ ಫಲಿತಾಂಶ ಪ್ರಕಟಿಸುವ ಚಿಂತನೆಯಿದೆ. ಬಳಿಕ ಪದವಿ ತರಗತಿಗಳ ಉಳಿದ ಸೆಮಿಸ್ಟರ್‌ ಪರೀಕ್ಷೆಗಳನ್ನು ಆಗಸ್ಟ್‌ ಪ್ರಥಮ ವಾರದಲ್ಲಿ ಕೈಗೆತ್ತಿಗೊಳ್ಳಲಾಗುವುದು. ಮುಂದಿನ ವರ್ಷ ದಿಂದ ರಾಜ್ಯದ ಎಲ್ಲ ವಿ.ವಿ.ಗಳ ವ್ಯಾಪ್ತಿಯಲ್ಲಿ ಏಕರೂಪದ ಶೈಕ್ಷಣಿಕ ವೇಳಾಪಟ್ಟಿ ನಡೆಸುವ ಬಗ್ಗೆ ಚರ್ಚೆ ನಡೆದಿದೆ ಎಂದು ಪ್ರೊ| ಎಡಪಡಿತ್ತಾಯ ವಿವರಿಸಿದರು.

Advertisement

ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ
ತರಗತಿ ಹಾಗೂ ಪರೀಕ್ಷಾ ಸಮಯದಲ್ಲಿ ಕೋವೀಡ್‌-19 ಶಿಷ್ಟಾಚಾರ ಪ್ರಕಾರ ಗರಿಷ್ಠ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು. ತರಗತಿ ಹಾಗೂ ಪರೀಕ್ಷೆಗಳ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮಾಸ್ಕ್ ಧರಿಸುವುದು ಹಾಗೂ ಸ್ಯಾನಿಟೈಸರ್‌ ವ್ಯವಸ್ಥೆಗೊಳಿಸುವುದು ಕಡ್ಡಾಯವಾಗಿರು ತ್ತದೆ. ಉದಾಹರಣೆಗೆ ಒಂದು ತರಗತಿಯಲ್ಲಿ 60 ವಿದ್ಯಾರ್ಥಿಗಳಿದ್ದರೆ ಇದನ್ನು 20 ವಿದ್ಯಾರ್ಥಿಗಳಂತೆ ವಿಂಗಡಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಮೂರು ಪಾಳಿಗಳಲ್ಲಿ ತರಗತಿ ನಡೆಸಲಾಗುವುದು. ಪ್ರಥಮವಾಗಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುವುದು. ಹೊರಜಿಲ್ಲೆಗಳಿಂದ ಬರುವ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ 14 ದಿನ ಕ್ವಾರಂಟೈನ್‌ ಮಾಡಲಾಗುವುದು ಎಂದವರು ಹೇಳಿದರು.

ಡಿಜಿಟಲ್‌ ಮೌಲ್ಯಮಾಪನ
ಈ ಬಾರಿ ಶೀಘ್ರ ಫಲಿತಾಂಶ ಪ್ರಕಟಿಸಲು ವಿ.ವಿ. ಪೂರಕ ಸಿದ್ಧತೆ ಆರಂಭಿಸಿದ್ದು, ಡಿಜಿಟಲ್‌ ವ್ಯವಸ್ಥೆ ಮೂಲಕ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಲಾಗುವುದು. ಮಂಗಳೂರು ವಿ.ವಿ. ಈಗಾಗಲೇ ಪ್ರಾಯೋಗಿಕವಾಗಿ ಎಂಬಿಎ 3ನೇ ಸೆಮಿಸ್ಟರ್‌ನ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಡಿಜಿಟಲ್‌ ವ್ಯವಸ್ಥೆಯ ಮೂಲಕ ನಡೆಸಿ ಯಶಸ್ವಿಯಾಗಿದೆ. ಈ ಬಾರಿ ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ಉತ್ತರ ಪತ್ರಿಕೆಗಳ ಮೌಲ್ಯಮೌಪನಕ್ಕೆ ಅಳವಡಿಸಲಾಗುವುದು. ಮಂಗಳೂರು ವಿವಿ ವ್ಯಾಪ್ತಿಗೆ ಬರುವ ಪ್ರತಿಯೊಂದು ಜಿಲ್ಲೆಯಲ್ಲಿ ಒಂದೊಂದು ಕೇಂದ್ರವನ್ನು ಗುರುತಿಸಿ ಅಲ್ಲಿ ಒಂದು ಸ್ಕ್ಯಾನಿಂಗ್‌ ಸೆಂಟರ್‌ ಸ್ಥಾಪಿಸಿ ಮಲ್ಟಿ ಸ್ಕ್ಯಾನರ್‌ಗಳನ್ನು ಅಳವಡಿಸಲಾಗುವುದು. ಇಲ್ಲಿ ಆಯಾಯ ದಿನಗಳ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್‌ ಮಾಡಲಾಗುವುದು. ಇದು ಇಂಟರ್‌ನೆಟ್‌ಗೆ ಹೋಗಿ ಡಿಜಿಟಲ್‌ ಫಾರ್ಮೆಟ್‌ ಆಗುತ್ತದೆ. ಬಳಿಕ ಸರ್ವರ್‌ನಲ್ಲಿ ಕಂಪ್ಯೂಟರ್‌ ರ್‍ಯಾಂಡಮೈಸೇಸನ್‌ ಮಾಡುತ್ತದೆ. ಪ್ರತಿಯೊಂದು ಜಿಲ್ಲೆಯಲ್ಲಿ ಸುಮಾರು 5ರಿಂದ 6 ಕಂಪ್ಯೂಟರ್‌ ಲ್ಯಾಬ್‌ಗಳನ್ನು ಗುರುತಿಸಲಾಗುತ್ತದೆ. ಅಲ್ಲಿ ಉತ್ತರ ಪತ್ರಿಕೆಗಳ ಡಿಜಿಟಲ್‌ ಮೌಲ್ಯಮಾಪನ ನಡೆಯುತ್ತಿದೆ. ಇದರಡಿ ಪರೀಕ್ಷೆ ಮುಗಿದು 10 ದಿನಗಳೊಳಗೆ ಮೌಲ್ಯಮಾಪನ ಆಗಿ 24 ತಾಸಿನಲ್ಲಿ ಫಲಿತಾಂಶ ಪ್ರಕಟಿಸಲು ಸಾಧ್ಯ ಎಂದರು.

ಹಾಜರಾತಿ ಕೊರತೆ ಆತಂಕ ಬೇಡ
ಯುಜಿಸಿ ಮಾರ್ಗಸೂಚಿ ಪ್ರಕಾರ ಪರೀಕ್ಷೆಗೆ ಹಾಜರಾಗಲು ತರಗತಿಯಲ್ಲಿ ಶೇ. 75ರಷ್ಟು ಹಾಜರಾತಿ ಇರಬೇಕು. ಆದರೆ ಕೋವಿಡ್-19 ಲಾಕ್‌ಡೌನ್‌ ಅವಧಿಯನ್ನು ಈ ಬಾರಿ ವಿದ್ಯಾರ್ಥಿಗಳ ಹಾಜರಾತಿ (ಡೀಮ್ಡ್ ಟು ಅಟೆಂಡೆಡ್‌) ಎಂದು ಪರಿಗಣಿಸಲಾಗುವುದು. ಉನ್ನತ ಶಿಕ್ಷಣಇಲಾಖೆ ಮಾರ್ಗಸೂಚಿಯಲ್ಲಿ ಈ ಅಂಶವೂ ಒಳಗೊಳ್ಳಲಿದೆ. ಹೀಗಾಗಿ ವಿದ್ಯಾರ್ಥಿಗಳು ಹಾಜ ರಾತಿ ಕೊರತೆ ಬಗ್ಗೆ ಆತಂಕಕ್ಕೊಳಗಾಗು ವುದು ಬೇಡ. ಜತೆಗೆ ಕ್ವಾರಂಟೈನ್‌, ಸೀಲ್‌ಡೌನ್‌ನಲ್ಲಿ ಸಿಲುಕಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದವರಿಗೆ ಒಂದು ಅವಧಿಯ ಉಪಕ್ರಮವಾಗಿ ವಿಶೇಷ ಪರೀಕ್ಷೆ ನಡೆಸಲಾಗುವುದು ಎಂದರು.

ಶೇ. 25 ಆನ್‌ಲೈನ್‌ ಶಿಕ್ಷಣ ಕಡ್ಡಾಯಕ್ಕೆ ಚಿಂತನೆ
ಮುಂದಿನ ದಿನಗಳಲ್ಲಿ ಶಿಕ್ಷಣದಲ್ಲಿ ಆನ್‌ಲೈನ್‌ ವ್ಯವಸ್ಥೆಯನ್ನು ಅಳವಡಿಸುವ ಮಹತ್ವವನ್ನು ಕೋವಿಡ್-19 ಅವಧಿ ಎತ್ತಿತೋರಿಸಿದೆ. ಮುಂದಿನ ವರ್ಷದಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಶೇ. 25 ಡಿಜಿಟಲ್‌ ಲರ್ನಿಂಗ್‌ ಹಾಗೂ ಶೇ.75ರಷ್ಟು ಮುಖಾಮುಖಿ ಶಿಕ್ಷಣ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಚಿಂತನೆ ನಡೆಸಲಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬಂದಿಗೆ ತರಬೇತಿ ಆಯೋಜಿಸಲಾಗುವುದು ಎಂದು ಉಪ ಕುಲಪತಿ ತಿಳಿಸಿದ್ದಾರೆ.

ಅತಿಥಿ ಉಪನ್ಯಾಸಕರ ಸೇವೆ ಮುಂದುವರಿಕೆ
ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಈ ವರ್ಷ ಅತಿಥಿ ಉಪನ್ಯಾಸಕರನ್ನು ಕೈಬಿಡುವುದಿಲ್ಲ. ಅವರ ನೇಮಕಾತಿ ಆದೇಶದಂತೆ ನಿಗದಿತ ಅವಧಿ ವರೆಗೆ ಅವರೆಲ್ಲರ ಸೇವೆ ಮುಂದುವರಿಯಲಿದೆ ಎಂದು ಉಪ ಕುಲಪತಿ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next