Advertisement
ಕೃಷ್ಣರಾಜ ಅಣೆಕಟ್ಟೆಯಿಂದ ಕುಡಿಯುವ ನೀರಿಗೆ 3 ಟಿಎಂಸಿ ನೀರು ಬಿಡುವಂತೆ ತಮಿಳುನಾಡು ಮುಖ್ಯ ಕಾರ್ಯದರ್ಶಿ ಗಿರಿಜಾ ವೈದ್ಯನಾಥನ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಸ್‌ಚಂದ್ರ ಕುಂಟಿಯಾ ಅವರಿಗೆ ಪತ್ರ ಬರೆದಿದ್ದಾರೆ.ಮಾರ್ಚ್ 9 ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ತಮಿಳುನಾಡು ಮುಖ್ಯ ಕಾರ್ಯದರ್ಶಿ, ತಮಿಳುನಾಡಿನಲ್ಲಿ ಈ ವರ್ಷ ಮಳೆಯ ಅಭಾವದಿಂದ ಜನರಿಗೆ ಕುಡಿಯುವ ನೀರಿನ ತೀವ್ರ ಸಮಸ್ಯೆ ಉಂಟಾಗಿದ್ದು, ಕಾವೇರಿ ನದಿಯಿಂದ ಕುಡಿಯುವ ನೀರಿಗಾಗಿ 3 ಟಿಎಂಸಿ ನೀರನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಕಾವೇರಿ ನ್ಯಾಯಮಂಡಳಿಯ ತೀರ್ಪಿನಂತೆ ಕರ್ನಾಟಕ ಸರ್ಕಾರ ಪ್ರತಿ ದಿನ 2000 ಕ್ಯೂಸೆಕ್ ನೀರು ಬಿಡಬೇಕಿದೆ. ಸಧ್ಯದ ಪರಿಸ್ಥಿತಿಯಲ್ಲಿ ತಮಿಳು ನಾಡಿನಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದ್ದು, ಈ ಬಗ್ಗೆ ವಿಳಂಬ ಮಾಡದೇ ಮೆಟ್ಟೂರು ಜಲಾಶಯಕ್ಕೆ ನೀರು ಬಿಡುವಂತೆ ಅವರು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಆ ವರದಿ ಆಧರಿಸಿ ಮುಖ್ಯಕಾರ್ಯದರ್ಶಿ ಸುಭಾಸ್‌ಚಂದ್ರ ಕುಂಟಿಯಾ ಸೋಮವಾರ ತಮಿಳುನಾಡಿಗೆ ರಾಜ್ಯದ ವಾಸ್ತವ ಮನವರಿಕೆ ಮಾಡಿ ಕೊಟ್ಟು ಪತ್ರ ಬರೆಯುವ ಸಾಧ್ಯತೆ ಇದೆ ಎಂದು ಜಲ ಸಂಪನ್ಮೂಲ ಇಲಾಖೆ ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಈ ವರ್ಷ ತೀವ್ರ ಬರ ಎದುರಿಸುತ್ತಿರೋದ್ರಿಂದ ನಮಗೇ ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾವೇರಿ ಕೊಳ್ಳದಲ್ಲಿ ಜನ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೇ ಹಾಹಾಕಾರ ಉಂಟಾಗಿದೆ. ತಮಿಳುನಾಡಿನ ಬೇಡಿಕೆಗೆ ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ನೀರು ಬಿಡುವ ಪ್ರಶ್ನೆಯೇ ಇಲ್ಲ.
-ಎಂ.ಬಿ.ಪಾಟೀಲ್, ಜಲ ಸಂಪನ್ಮೂಲ ಸಚಿವ