Advertisement

ಮೂವರು ಉಗ್ರರ ದಮನ

06:00 AM Jun 30, 2018 | Team Udayavani |

ಶ್ರೀನಗರ: ಕಣಿವೆ ರಾಜ್ಯದಲ್ಲಿ ಉಗ್ರರ ದಮನಕ್ಕಾಗಿ ನಡೆಯುತ್ತಿರುವ ಬಿರುಸಿನ ಕಾರ್ಯಾಚರಣೆ ಮುಂದುವರಿದಿದ್ದು, ಶುಕ್ರವಾರ ಮೂವರು ಭಯೋತ್ಪಾದಕರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ. ಈ ಎನ್‌ಕೌಂಟರ್‌ ನಡೆಯುತ್ತಿದ್ದ ಸಮಯದಲ್ಲಿ ಸ್ಥಳೀಯ ಯುವಕರು ಭದ್ರತಾ ಪಡೆಗಳ ಮೇಲೆ ಕಲ್ಲುತೂರಾಟ ನಡೆಸಿದ್ದು, ಆಗ ನಡೆದ ಘರ್ಷಣೆಯಲ್ಲಿ ಒಬ್ಬ ಯುವಕನೂ ಸಾವಿಗೀಡಾಗಿದ್ದಾನೆ.

Advertisement

ತುಮ್ನಾ ಗ್ರಾಮದ ಮನೆಯೊಂದರಲ್ಲಿ ಉಗ್ರರು ಅವಿತಿರುವ ಸುಳಿವು ಸಿಕ್ಕಿದೊಡನೆ ಭದ್ರತಾ ಪಡೆಯು ಆ ಮನೆಯನ್ನು ಸುತ್ತುವರಿಯಿತು. ಆದರೆ, ನಾಗರಿಕರು ವಾಸವಿದ್ದ ಕಾರಣ ಕಾರ್ಯಾಚರಣೆ ವಿಳಂಬವಾಯಿತು. ಎಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರ ಮಾಡಿದ ನಂತರ, ಗುಂಡಿನ ಚಕಮಕಿ ನಡೆಯಿತು. ಕೊನೆಗೆ ಒಳಗಿದ್ದ ಎಲ್ಲ ಮೂವರು ಉಗ್ರರನ್ನೂ ಹತ್ಯೆಗೈಯ್ಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ, ಕೆಲವು ಯುವಕರು ಕಲ್ಲು ತೂರಾಟ ನಡೆಸಿದ್ದು, ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆ ಏರ್ಪಟ್ಟಿತು. ಈ ಸಂದರ್ಭದಲ್ಲಿ 5 ಮಂದಿ ಗಾಯಗೊಂಡಿದ್ದು, ಈ ಪೈಕಿ 16 ವರ್ಷದ ಫೈಜಾನ್‌ ಅಹ್ಮದ್‌ ಖಾನ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರೆನೇಡ್‌ ದಾಳಿ: ಶೋಪಿಯಾನ್‌ನಲ್ಲಿ ಶುಕ್ರವಾರ ಸೇನೆಯ ಗಸ್ತು ವಾಹನದ ಮೇಲೆ ಉಗ್ರರು ಗ್ರೆನೇಡ್‌ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಮೂವರು ಯೋಧರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಕಾಶ್ಮೀರದಲ್ಲಿ “ಜನಸ್ನೇಹಿ ಕಾರ್ಯಾಚರಣೆ’
ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಉಗ್ರರ ದಮನ ಕಾರ್ಯಾಚರಣೆಯ ಬಗ್ಗೆ ಮೊದಲ ಬಾರಿಗೆ ಆರ್ಮಿ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಮಾತನಾಡಿದ್ದಾರೆ. “”ಜಮ್ಮು ಕಾಶ್ಮೀರದಲ್ಲಿ ಆರ್ಮಿ ನಾಗರಿಕ ಸ್ನೇಹಿ ಕಾರ್ಯಾಚರಣೆ ನಡೆಸುತ್ತಿದೆ. ದಿನಬೆಳಗಾದರೆ ಕಣಿವೆ ಪ್ರದೆಶದಲ್ಲಿ ನಡೆಯುವ ಸಂಘರ್ಷಕ್ಕೆ ಕಾರಣರಾಗುವ ಉಗ್ರರ ಅಟ್ಟಹಾಸ ಹತ್ತಿಕ್ಕುವುದು ನಮ್ಮ ಮೂಲ ಉದ್ದೇಶ” ಎಂದಿದ್ದಾರೆ. ಕಾರ್ಯಾಚರಣೆ ಬಗ್ಗೆ ಸ್ಥಳೀಯವಾಗಿ ಕೇಳಿಬರುತ್ತಿರುವ ಟೀಕೆಗಳಿಗೆ ಸ್ಪಷ್ಟನೆ ನೀಡಿರುವ ರಾವತ್‌, “”ಕಣಿವೆ ಪ್ರದೇಶದಲ್ಲಿ ಅಶಾಂತಿ, ಸಂಘರ್ಷಕ್ಕೆ ನಾಂದಿ ಹಾಡುವುದು ನಮ್ಮ ಉದ್ದೇಶವಲ್ಲ. ಅಂಥ ಕಾರ್ಯಕ್ಕೆ ಸೇನೆ ಮುಂದಾಗುವುದೂ ಇಲ್ಲ’ ಎಂದಿದ್ದಾರೆ. ಅಲ್ಲದೇ, ಕಾರ್ಯಾಚರಣೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ. ಶಾಂತಿ ಕದಡುವ ಸಂಘಟನೆಗಳನ್ನು ಹೆಡೆಮುರಿ ಕಟ್ಟಿ, ಜನತೆ ನೆಮ್ಮದಿಯಿಂದ ಇರುವಂತೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇದೇ ವೇಳೆ, ಕಾರ್ಯಾಚರಣೆ ಹೇಗೆ ಇರಬೇಕೆನ್ನುವುದನ್ನು ಸ್ಥಳೀಯ ಕಮಾಂಡರ್‌ಗಳ ನಿರ್ದೇಶನದಂತೆ ಯೋಧರು ಹೆಜ್ಜೆ ಇಡುತ್ತಿದ್ದಾರೆ. ಆರ್ಮಿ ನಾಗರಿಕ ಸ್ನೇಹಿಯಾದ ಕಾರ್ಯಾಚರಣೆಯನ್ನೇ ನಡೆಸುತ್ತಿದೆ. ಹಿಂಸಾತ್ಮಕವಾಗಿ ಕಾರ್ಯಾಚರಣೆ ನಡೆಸುತ್ತಿದೆ ಎನ್ನುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಸ್ಪಷ್ಟಪಡಿಸಿದ್ದಾರೆ.

Advertisement

ಮಾನವ ಹಕ್ಕು ಉಲ್ಲಂಘನೆ ಆಗಿಲ್ಲ: ಕಾರ್ಯಾಚರಣೆ ವೇಳೆ ಸೇನೆಯಿಂದ ಮಾನವ ಹಕ್ಕು ಉಲ್ಲಂಘನೆ ಆಗುತ್ತಿದೆ ಎನ್ನುವ ವಿಶ್ವಸಂಸ್ಥೆಯ ಆರೋಪವನ್ನೂ ಜನರಲ್‌ ರಾವತ್‌ ತಳ್ಳಿಹಾಕಿದ್ದಾರೆ. ಅಂದಹಾಗೆ, ಈಗ ಉಗ್ರವಾದದ ಚಟುವಟಿಕೆಗಳು, ಕಲ್ಲೆಸೆಯುವ ಕೃತ್ಯಗಳಿಗೆ ಬ್ರೇಕ್‌ ಬೀಳುತ್ತಿದೆ. ಮಕ್ಕಳು ಧೈರ್ಯವಾಗಿ ಮರಳಿ ಶಾಲೆಗೆ ಹೋಗುತ್ತಿದ್ದಾರೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next