ಹೊಸಪೇಟೆ: ನಗರದ ರಾಣಿಪೇಟೆಯಲ್ಲಿ ಶುಕ್ರವಾರ ಜರುಗಿದ ದರೋಡೆ, ವೃದ್ಧೆ ಕೊಲೆ ಪ್ರಕರಣಕ್ಕೆ ಸಂಬಂಧಿ ಸಿ ತನಿಖೆ ಚುರುಕುಗೊಳಿಸಲಾಗಿದೆ. ತನಿಖೆಗೆ ಮೂರು ವಿಶೇಷ ತಂಡ ರಚನೆ ಮಾಡಲಾಗಿದ್ದು, ಆರೋಪಿಗಳ ಶೀಘ್ರ ಪತ್ತೆ ಹಚ್ಚಲಾಗುವುದು ಎಂದು ವಿಜಯನಗರ ಜಿಲ್ಲಾ ಎಸ್ಪಿ ಅರುಣ್ ಕೆ. ತಿಳಿಸಿದರು.
ನಗರದ ಡಿವೈಎಸ್ಪಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐವರು ದರೋಡೆಕೋರರ ತಂಡ ಸೀರೆ ಖರೀದಿ ನೆಪದಲ್ಲಿ ಬಂದು ರಾಣಿಪೇಟೆ ನಿವಾಸಿ ಭುವನೇಶ್ವರಿ (68)ಯವರನ್ನು ಕೊಲೆ ಮಾಡಿ 3 ಲಕ್ಷ ರು. ನಗದು ಹಾಗೂ 100 ಗ್ರಾಂ. ಚಿನ್ನ ಕದ್ದು ಪರಾರಿಯಾಗಿದೆ. ಭುವನೇಶ್ವರಿ ಅವರ ಜೊತೆಗಿದ್ದ ಶಿವಭೂಷಣಮ್ಮ ಗಾಯಗೊಂಡಿದ್ದು, ಆಘಾತಕ್ಕೊಳಗಾಗಿದ್ದಾರೆ. ಅವರಿಗೆ ಚಿಕಿತ್ಸೆ ಕೊಡಿಸಲಾಗಿದ್ದು ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದರು.
ಹೊಸಪೇಟೆ ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ ನೇತೃತ್ವದಲ್ಲಿ ಪಟ್ಟಣ ಠಾಣೆ ಪಿಐ ಶ್ರೀನಿವಾಸ್, ಚಿತ್ತವಾಡ್ಗಿ ಪಿಐ ಜಯಪ್ರಕಾಶ ಮತ್ತು ಗ್ರಾಮೀಣ ಠಾಣೆ ಪಿಐ ಶ್ರೀನಿವಾಸ ಮೇಟಿ ಅವರನ್ನೊಳಗೊಂಡ ತಂಡ ತನಿಖೆ ಕೈಗೊಂಡಿದೆ. ಅಂತಾರಾಜ್ಯ ಇಲ್ಲವೇ ಅಂತರ್ ಜಿಲ್ಲಾ ದರೋಡೆಕೋರ ತಂಡ ಕೃತ್ಯ ನಡೆಸಿದೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ. ಗುರುವಾರ ದಿನ ಇದೇ ತಂಡದ ಇಬ್ಬರು ರಾಣಿಪೇಟೆಯಲ್ಲಿರುವ ಭುವನೇಶ್ವರಿ ಅವರ ಮನೆಗೆ ಬಂದು ಹೋಗಿದೆ. ಶುಕ್ರವಾರ ಬಂದು ಸೀರೆ ಖರೀದಿ ನೆಪದಲ್ಲಿ ಕೊಲೆ ಮಾಡಿದೆ. ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಲಾಗುತ್ತಿದೆ. ಎಲ್ಲ ದಿಸೆಯಲ್ಲಿ ತನಿಖೆ ಕೈಗೊಳ್ಳಲಾಗುತ್ತಿದ್ದು, ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ ಎಂದರು. ದರೋಡೆಕೋರರು ಮನೆ ಬಾಗಿಲುಮುಚ್ಚಿ, ಬಾಯಿಗೆ ಬಟ್ಟೆ ಹಾಕಿದ್ದಾರೆ. ಬಾಯಿಗೆ ಬಟ್ಟೆ ಹಾಕಿದ್ದರಿಂದ ಭುವನೇಶ್ವರಿ ಅವರು ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿರಬಹುದು ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ. ಮೈಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಪೋಸ್ಟ್ ಮಾರ್ಟಮ್ ವರದಿಯಿಂದ ಎಲ್ಲವೂ ತಿಳಿಯಲಿದೆ ಎಂದರು.
ಕಳೆದ 40 ವರ್ಷಗಳಿಂದ ಭುವನೇಶ್ವರಿ ಹಾಗೂ ಶಿವಭೂಷಣಮ್ಮ ಅವರು ಮನೆಯಲ್ಲೇ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಖರೀದಿ ನೆಪದಲ್ಲಿ ದರೋಡೆ ಮಾಡಲು ತಂಡ ಬಂದು ಕೃತ್ಯವೆಸಗಿದೆ. ಮನೆಯಲ್ಲಿ ಹಣ ಹಾಗೂ ಒಡವೆಗೂ ಹುಡುಕಾಟ ನಡೆಸಿದೆ. ಭುವನೇಶ್ವರಿ ಅವರ ಮೈಮೇಲಿದ್ದ ಒಡವೆ ಹಾಗೂ ಮನೆಯಲ್ಲಿದ್ದ 3 ಲಕ್ಷ ರು. ಕದ್ದು ಮನೆ ಹಿಂಬಾಗಿಲಿನಿಂದ ಪರಾರಿಯಾಗಿದೆ ಎಂದು ತಿಳಿಸಿದರು. ಜನವಸತಿ ಪ್ರದೇಶದಲ್ಲೇ ಕೊಲೆ ನಡೆದಿರುವ ಹಿನ್ನೆಲೆ ರಾಣಿಪೇಟೆ ಸೇರಿ ನಗರದ ಜನರು ಸಹಜವಾಗಿ ಆತಂಕಗೊಂಡಿದ್ದಾರೆ. ಆದರೆ ಜನ ಆತಂಕಗೊಳ್ಳುವುದು ಬೇಡ. ನಗರದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗುವುದು. ಮನೆಗಳಲ್ಲಿ ಬೆಲೆ ಬಾಳುವ ವಸ್ತುಗಳನ್ನು ಇಡಬಾರದು. ಬ್ಯಾಂಕ್‌ಗಳ ಲಾಕರ್‌ಗಳಲ್ಲಿ ಇಡಬೇಕು. ಶಂಕಾಸ್ಪದ ವ್ಯಕ್ತಿಗಳು ಕಂಡುಬಂದರೆ 112 ನಂಬರ್‌ಗೆ ಕರೆ ಮಾಡಬೇಕು. ನವೆಂಬರ್ ಒಂದರಿಂದ ನಗರದ ವಿದ್ಯಾನಗರದ ಡಾ| ಬಾಬು ಜಗಜೀವನರಾಂ ಭವನದಲ್ಲಿ ತಾತ್ಕಾಲಿಕ ಎಸ್ಪಿ ಕಚೇರಿ ಆರಂಭಗೊಳ್ಳಲಿದೆ. ಎಸ್ಪಿ ಕಚೇರಿಗೆ 120 ಸಿಬ್ಬಂದಿ ನಿಯೋಜನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೋಲಾರದ ಕೆಜಿಎಫ್‌ನ ಸಿಬ್ಬಂದಿಯನ್ನು ವಿಜಯನಗರಕ್ಕೆ ನಿಯೋಜನೆ ಮಾಡುವ ಪ್ರಕ್ರಿಯೆ ಸರ್ಕಾರದ ಹಂತದಲ್ಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಡಿವೈಎಸ್ಪಿ ವಿಶ್ವನಾಥ ರಾವ್ ಕುಲಕರ್ಣಿ ಇದ್ದರು.