ಶ್ರೀನಗರ್: ಜಮ್ಮು-ಕಾಶ್ಮೀರದ ಗಡಿನಿಯಂತ್ರಣ ರೇಖೆ ಸಮೀಪ ಪಾಕಿಸ್ತಾನ ಸೇನಾಪಡೆ ಕದನ ವಿರಾಮ ಉಲ್ಲಂಘಿಸಿ ನಡೆಸಿದ ಶೆಲ್ಲಿಂಗ್ ದಾಳಿಯ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಭಾರತೀಯ ಯೋಧರು ಹುತಾತ್ಮರಾಗಿದ್ದು, ಐದು ಯೋಧರು ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ.
ಭಾರತೀಯ ಸೇನಾ ಶಿಬಿರಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದ ಪಾಕಿಸ್ತಾನ ಸೇನೆಗೆ ತಕ್ಕ ಪ್ರತ್ಯುತ್ತರ ಕೊಡಲಾಗಿದೆ ಎಂದು ವರದಿ ತಿಳಿಸಿದೆ.
ರಕ್ಷಣಾ ವಕ್ತಾರ ನೀಡಿರುವ ಮಾಹಿತಿ ಪ್ರಕಾರ, ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ನೌಗಾಮ್ ಸೆಕ್ಟರ್ ನಲ್ಲಿ ಪಾಕಿಸ್ತಾನ ಸೇನಾಪಡೆ ಮೋರ್ಟಾರ್ಸ್ಸ್ ದಾಳಿ ಆರಂಭಿಸಿತ್ತು. ಈ ದಾಳಿಯಲ್ಲಿ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದು, ನಾಲ್ವರು ಸೈನಿಕರು ಗಾಯಗೊಂಡಿದ್ದರು.
ಇದನ್ನೂ ಓದಿ: ಗುಡ್ ನ್ಯೂಸ್: ಕೋವಿಡ್ ಸೋಂಕು-ಭಾರತದಲ್ಲಿ 53 ಲಕ್ಷ ಮಂದಿ ಗುಣಮುಖ: ಸಚಿವಾಲಯ
ಭಾರತೀಯ ಸೇನಾಪಡೆ ನಡೆಸಿದ ಪ್ರತಿದಾಳಿಯಲ್ಲಿ ಪಾಕಿಸ್ತಾನ ಸೈನಿಕರು ಸಾವನ್ನಪ್ಪಿದ್ದಾರೋ ಅಥವಾ ಇಲ್ಲವೋ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ವರದಿ ತಿಳಿಸಿದೆ. ಪೂಂಚ್ ಸೆಕ್ಟರ್ ನಲ್ಲಿ ಇಂದು ಮುಂಜಾನೆ ಪಾಕ್ ಆರ್ಮಿ ನಡೆಸಿದ್ದ ದಾಳಿಯಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದರು.
ಕಳೆದ ಎಂಟು ತಿಂಗಳಿನಿಂದ ಪಾಕಿಸ್ತಾನ ಮೂರು ಸಾವಿರಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘಿಸಿರುವುದಾಗಿದ್ದು, ಇದು ಕಳೆದ 17ವರ್ಷಗಳಲ್ಲಿಯೇ ಅತೀ ಹೆಚ್ಚಿನದ್ದಾಗಿದೆ ಎಂದು ವರದಿ ವಿವರಿಸಿದೆ.