Advertisement

3 ಸಹಸ್ರದ ಪುಟ್ಟ ಹೆಜ್ಜೆಯು 3.72 ಲಕ್ಷವಾದ ಕ್ಷೀರ ಕ್ರಾಂತಿ!

07:23 AM Apr 16, 2017 | Harsha Rao |

ಮಣಿಪಾಲದಲ್ಲಿ 1974ರಲ್ಲಿ ಆರಂಭವಾದ ಕೆನರಾ ಮಿಲ್ಕ್ ಯೂನಿಯನ್‌ ಬಳಿಕ ದಕ್ಷಿಣಕನ್ನಡ ಜಿಲ್ಲಾ ಹಾಲು ಒಕ್ಕೂಟದೊಂದಿಗೆ ವಿಲೀನವಾಯಿತು. ಈಗ ಇದು ಕರ್ನಾಟಕದ ಹಾಲು ಒಕ್ಕೂಟಗಳಲ್ಲೇ ಸಮಗ್ರ ಸಾಧನಾ ನಿರ್ವಹಣೆಯಲ್ಲಿ ಅಗ್ರಸ್ಥಾನದಲ್ಲಿದ್ದು, ಅವಿಭಜಿತ ಜಿಲ್ಲೆಯ ಕ್ಷೀರಕ್ರಾಂತಿಯ ಸ್ವರೂಪವನ್ನು ಪ್ರತಿಫಲಿಸುತ್ತದೆ. ಇಂದು ಒಕ್ಕೂಟವು ಉಡುಪಿ ಜಿಲ್ಲೆಯ ಉಪ್ಪೂರು ಗ್ರಾಮದಲ್ಲಿ ಹೊಸ ಡೈರಿ ಮತ್ತು ಆಡಳಿತ ಕಚೇರಿ ಸಂಕೀರ್ಣಕ್ಕೆ ಶಂಕುಸ್ಥಾಪನೆ ನಡೆಯಲಿದೆ.

Advertisement

ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸಹಿತವಾದ “ಅವಿಭಜಿತ’ ದ.ಕನ್ನಡ ಜಿಲ್ಲೆಯಲ್ಲಿ ಕ್ಷೀರಕ್ರಾಂತಿಯ ಹರಿಕಾರ ಸಂಸ್ಥೆ “ನಂದಿನಿ’ ಬ್ರಾಂಡ್ ಉತ್ಪನ್ನಗಳಿಂದ ಪ್ರಸಿದ್ಧವಾದದ್ದು ದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ.

ಈಗ ಏಪ್ರಿಲ್‌ 16ರಂದು ಒಕ್ಕೂಟವು ಉಡುಪಿ ಜಿಲ್ಲೆಯ ಉಪ್ಪೂರು ಗ್ರಾಮದಲ್ಲಿ ನೂತನವಾಗಿ, 2.5 ಲಕ್ಷ ಲೀಟರ್‌ ಸಾಮರ್ಥ್ಯದ ಡೈರಿ ಮತ್ತು ಆಡಳಿತ ಕಚೇರಿ ಸಂಕೀರ್ಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಿದೆ. ಈ ಮೂಲಕ ಹಾಲು ಮತ್ತು ಪೂರಕ ಉತ್ಪನ್ನಗಳ ಕುರಿತಾದ ರೈತಪರ- ಪಶು ಸಂಗೋಪನಾ ಅಭಿಯಾನವನ್ನು ಮತ್ತಷ್ಟು ವಿಸ್ತರಿಸಲಿದೆ.

ಎಲ್ಲ ಮಹಾ ಅಭಿಯಾನಗಳೂ ಒಂದು ಪುಟ್ಟ ಹೆಜ್ಜೆಯಿಂದ ಆರಂಭವಾಗುತ್ತವೆ ಎನ್ನುವುದು ಪ್ರಸಿದ್ಧವಾದ ನಾಣ್ನುಡಿ! ದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತಕ್ಕೆ ಸಂಬಂಧಪಟ್ಟಂತೆಯೂ ಇದು ನಿಜವೇ. ಒಕ್ಕೂಟದ ಈ ಮಹಾ ಅಭಿಯಾನ ಆರಂಭವಾದದ್ದು 1974ರ ಮೇ 25ರಂದು, ಮಣಿಪಾಲದಲ್ಲಿ. ಅವಿಭಜಿತ ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆಯ ಮೂಲಕ ರೈತರಿಗೆ ಆರ್ಥಿಕ ಶಕ್ತಿ ತುಂಬುವ ಆಶಯದೊಂದಿಗೆ, ಗುಜರಾತ್‌ನ ಆನಂದ್‌ನ ಅಮುಲ್‌ ಮಾದರಿಯಲ್ಲಿ ಕೀರ್ತಿಶೇಷ ಟಿ. ಎ. ಪೈ ಅವರು ಕೆನರಾ ಮಿಲ್ಕ್ ಯೂನಿಯನ್‌ ಸ್ಥಾಪಿಸಿದರು. ಕೆಮುಲ್‌ ಎಂಬ ಹೆಸರು ಇರಿಸಿದರು. ಯೂನಿಯನನ್ನು ಆಸುಪಾಸಿನ ಪರಿಸರಕ್ಕೆ ವಿಸ್ತರಿಸಿಧಿದರು. ಆ ಕಾಲಕ್ಕೆ ಇಲ್ಲಿ ದಿನಕ್ಕೆ ಸರಾಸರಿ 3 ಸಾವಿರ ಲೀ. ಹಾಲು ಸಂಗ್ರಹಿಸಿ ಸಂಸ್ಕರಿಸಲಾಗುತ್ತಿತ್ತು. ಟಿ. ಎ. ಪೈ ಅವರ ಬಳಿಕ ಕೆ. ಕೆ. ಪೈ ಅವರು ಅಧ್ಯಕ್ಷರಾಗಿ ಸಂಸ್ಥೆಯನ್ನು ಮುನ್ನಡೆಸಿದರು.

ಈ ಯೂನಿಯನ್‌ 1985ರಲ್ಲಿ ದ.ಕನ್ನಡ ಜಿಲ್ಲಾ ಹಾಲು ಒಕ್ಕೂಟ ದೊಂದಿಗೆ ವಿಲೀನವಾಯಿತು.

Advertisement

ರಾಜ್ಯದಲ್ಲಿ ಅಗ್ರಸ್ಥಾನಿ
ಮುಂದೆ ಜಿಲ್ಲಾ ಹಾಲು ಒಕ್ಕೂಟವು ಮಂಗಳೂರು (ಕುಲಶೇಖರ), ಮಣಿಪಾಲ, ಪುತ್ತೂರು ವಿಭಾಗಗಳೊಂದಿಗೆ ಮುನ್ನಡೆಯಿತು. ಈಗ ಕರ್ನಾಟಕದ 14 ಹಾಲು ಒಕ್ಕೂಟಗಳಲ್ಲಿ ದ.ಕನ್ನಡ ಹಾಲು ಒಕ್ಕೂಟವು ಸಮಗ್ರ ಸಾಧನಾ ನಿರ್ವಹಣೆಯಲ್ಲಿ ಅಗ್ರಸ್ಥಾನದಲ್ಲಿದೆ.

“ಜಿಲ್ಲಾ ಒಕ್ಕೂಟವು ಹಾಲು ಖರೀದಿಯ ಮೂಲಕ ಈ ಭಾಗದ ರೈತರ ಹಿತಾಸಕ್ತಿಯನ್ನು ರಕ್ಷಿಸುತ್ತಿದೆ. ಪೂರಕ ಉತ್ಪನ್ನಗಳನ್ನು ತಯಾರಿಸುವ ಮೂಲಕ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ’ ಎನ್ನುತ್ತಾರೆ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಅವರು. ಒಕ್ಕೂಟದ ಸಾಧನೆಯ ಪಕ್ಷಿನೋಟ ಇಲ್ಲಿದೆ: 
– 95 ಬಿಎಂಸಿ ಹಾಲು ಕೇಂದ್ರ 
– 34 ಹಾಲು ಸಂಗ್ರಹಣಾ ಮಾರ್ಗ 
– 702 ಹಾಲು ಉತ್ಪಾದಕರ ಸಹಕಾರಿ ಸಂಘಗಳು
– ದೈನಿಕ 3.72 ಲಕ್ಷ ಲೀ. ಹಾಲು ಸಂಗ್ರಹ 
– ನಂದಿನಿ ಹಾಲಿನ 1,525 ಅಧಿಕೃತ ಡೀಲರ್‌ಗಳು 
– ದೈನಿಕ ಸರಾಸರಿ 3.45 ಲಕ್ಷ ಲೀಟರ್‌ ಹಾಲು; 60 ಸಾವಿರ ಲೀ. ಮೊಸರು ಮಾರಾಟ 
– 28 ಕೋಟಿ ರೂ. ವೆಚ್ಚದಲ್ಲಿ ಫ್ಲೆಕ್ಸಿ ಪ್ಯಾಕ್‌ ಮತ್ತು ಉತ್ಪನ್ನಗಳ ಘಟಕ ಸ್ಥಾಪನೆ ಮೂಲಕ ಮೂರು ತಿಂಗಳ ಕಾಲ ಸಂರಕ್ಷಿಸಬಹುದಾದ “ತೃಪ್ತಿ’ ಹಾಲು ಉತ್ಪಾದನೆ. 

ಒಕ್ಕೂಟವು ಪೇಡಾ, ಮೈಸೂರು ಪಾಕ್‌, ಹಾಲಿನ ಜಂಬೋ ಪೊಟ್ಟಣ, ಮೊಸರು, ನಂದಿನಿ ಬೈಟ್‌, ಬೆಣ್ಣೆ, ಸಾದಾ ಮತ್ತು ಮ್ಯಾಂಗೋ ಲಸ್ಸಿ, ಬರ್ಫಿ, ಮಜ್ಜಿಗೆ, ಸುವಾಸಿತ ಹಾಲು, ನಂದಿನಿ ಗುಡ್‌ಲೈಫ್‌, ಕ್ರೀಂ, ಪನೀರ್‌, ತುಪ್ಪ ಇತ್ಯಾದಿ ಹಾಲಿನ ಪೂರಕ ಉತ್ಪನ್ನಗಳನ್ನು ಕೂಡ ನಂದಿನಿ ಬ್ರಾÂಂಡ್‌ನ‌ಲ್ಲಿ ಯಶಸ್ವಿಯಾಗಿ ಮಾರುಕಟ್ಟೆಗೆ ನೀಡುತ್ತಿದೆ. 

ಗ್ರಾಮೀಣ ಆರ್ಥಿಕ ಶಕ್ತಿ
ಹಾಲು ಸಂಬಂಧಿತ ವಸ್ತುಶಃ ಎಲ್ಲ  ಕ್ಷೇತ್ರಗಳಲ್ಲಿಯೂ ಒಕ್ಕೂಟವು ಯಶಸ್ಸು ಪಡೆದಿದೆ. ಈ ಮೂಲಕ ಕರಾವಳಿಯ ಈ ಭಾಗದ ರೈತರಿಗೆ, ಕೃಷಿಕರಿಗೆ ಆರ್ಥಿಕ ಶಕ್ತಿ ದೊರೆಯಲು ಸಾಧ್ಯವಾಗಿದೆ. ಹಾಲು ಉತ್ಪಾದಕರ ಮಹಿಳಾ ಸಂಘಗಳ ಮೂಲಕ ಗ್ರಾಮೀಣ ಮಹಿಳಾ ಸಬಲೀಕರಣವೂ ಸಾಕಾರಗೊಂಡಿದೆ.

ಒಕ್ಕೂಟದಲ್ಲಿ ಸುಮಾರು 12 ಲಕ್ಷ ಸದಸ್ಯರಿದ್ದಾರೆ. ದೈನಿಕ ಹಾಲು ಒದಗಿಸುವ 13 ಲಕ್ಷ ಮಂದಿ ಇದ್ದಾರೆ. 702 ಸಂಘಗಳಿವೆ. 193 ಮಹಿಳಾ ಸಂಘಗಳಿವೆ. ಇದು ಅವಿಭಜಿತ ಜಿಲ್ಲೆಯ ಕ್ಷೀರಕ್ರಾಂತಿಯ ಸ್ವರೂಪವನ್ನು ಪ್ರತಿಫಲಿಸುತ್ತದೆ. ಮಂಗಳೂರು ಡೈರಿಯು ವ್ಯಾಪಕ ನೆಲೆಯ ಸೌಲಭ್ಯಗಳಿಂದ ದೇಶದ ರೈತರ ಗಮನ ಸೆಳೆದಿದೆ. ಉಪ್ಪೂರು ಗ್ರಾಮದ ಹೊಸ ಡೈರಿಯು 2.5 ಲಕ್ಷ ಲೀ. ಹಾಲು ಸಂಸ್ಕರಣೆ, 35 ಸಾವಿರ ಕೆಜಿ ಮೊಸರು ಮತ್ತು ಪೂರಕ ಉತ್ಪನ್ನಗಳ ಸಾಮರ್ಥ್ಯ ಹೊಂದಲಿದೆ. 

– ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next