ಬಳ್ಳಾರಿ: ಅಕ್ರಮ ಗಣಿಗಾರಿಕೆಯಿಂದ ದೇಶದ ಗಮನ ಸೆಳೆದಿದ್ದ ಗಣಿನಾಡು ಬಳ್ಳಾರಿ ಜಿಲ್ಲೆ ಇತ್ತೀಚಿನ ದಿನಗಳಲ್ಲಿ ಉಪಚುನಾವಣೆಗಳಿಂದ ಹೆಚ್ಚು ಸುದ್ದಿಯಾಗುತ್ತಿದೆ. ಮೊಳಕಾಲ್ಮೂರು ಶಾಸಕ ಶ್ರೀರಾಮುಲು ರಾಜೀನಾಮೆಯಿಂದಾಗಿ ವಿಧಾನಸಭೆಗೆ ಈ ಹಿಂದೆ ಎರಡು
ಉಪಚುನಾವಣೆಗಳು ನಡೆದಿದ್ದು, ಇದೀಗ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ನ.3ರಂದು ಉಪಚುನಾವಣೆ ನಡೆಯಲಿದೆ.
2008ರಲ್ಲಿ ಕ್ಷೇತ್ರ ಮರುವಿಂಗಡಣೆಯಾದ ಬಳಿಕ ಬಳ್ಳಾರಿ ಜಿಲ್ಲೆಯಲ್ಲಿ ಹೊಸದಾಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ರಚನೆಯಾಯಿತು. ಜಿಲ್ಲೆಯ ಒಟ್ಟು ವಿಧಾನಸಭಾ ಕ್ಷೇತ್ರಗಳಲ್ಲಿ 5 ಕ್ಷೇತ್ರಗಳು ಪರಿಶಿಷ್ಟ ಪಂಗಡ, ಎರಡು ಕ್ಷೇತ್ರ ಪರಿಶಿಷ್ಟ ಜಾತಿ, ಎರಡು ಕ್ಷೇತ್ರಗಳು ಸಾಮಾನ್ಯ ವರ್ಗಕ್ಕೆ
ಮೀಸಲಾಗಿವೆ. ಜತೆಗೆ, ಬಳ್ಳಾರಿ ಲೋಕಸಭಾ ಕ್ಷೇತ್ರವೂ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಆದರೆ, 2008ರಲ್ಲಿ ಹೊಸದಾಗಿ ರಚನೆಯಾಗಿದ್ದ ಬಳ್ಳಾರಿ ಗ್ರಾಮೀಣ (ಪ.ಪಂ. ಮೀಸಲು) ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿದ್ದ ಶಾಸಕ ಬಿ.ಶ್ರೀರಾಮುಲು, ಭರ್ಜರಿ ಜಯ ಗಳಿಸುವ ಮೂಲಕ ಕ್ಷೇತ್ರದ ಮೊದಲ ಶಾಸಕರಾಗಿ ಆಯ್ಕೆಯಾದರು. ಆದರೆ, ಆಪ್ತ ಸ್ನೇಹಿತ, ಮಾಜಿ ಸಚಿವ ಜಿ.ಜನಾರ್ದನರೆಡ್ಡಿಯವರು ಅಕ್ರಮ ಗಣಿಗಾರಿಕೆ ಆರೋಪ ಹೊತ್ತು 2011ರಲ್ಲಿ ಬಂಧಿಸಲ್ಪಟ್ಟ ನಂತರ ಉಂಟಾದ ರಾಜಕೀಯ ಬದಲಾವಣೆ ಯಿಂದಾಗಿ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಗ್ರಾಮೀಣ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾಗಿದ್ದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಹೊಸ ಪಕ್ಷದಿಂದಲೂ ಗೆಲುವು: ಬಳಿಕ ಬಿಜೆಪಿಯಿಂದಲೇ ಹೊರ ಬಂದು, ಪ್ರತ್ಯೇಕವಾಗಿ ಬಿಎಸ್‌ಆರ್ ಎಂಬ ಹೊಸ ರಾಜಕೀಯ ಪಕ್ಷ ಸ್ಥಾಪಿಸಿದರು. ಶ್ರೀರಾಮುಲು ರಾಜೀನಾಮೆ ಯಿಂದ ತೆರವಾಗಿದ್ದ ಗ್ರಾಮೀಣ ಕ್ಷೇತ್ರಕ್ಕೆ 2011ರಲ್ಲಿ ಮೊದಲ ಬಾರಿಗೆ ಉಪಚುನಾವಣೆ ಘೋಷಣೆ ಯಾಯಿತು. ಪುನಃ ಗ್ರಾಮೀಣ ಕ್ಷೇತ್ರದಿಂದ ಉಪಚುನಾವಣೆಯಲ್ಲಿ 2ನೇ ಬಾರಿಗೆ ಬಿಎಸ್‌ಆರ್ ಪಕ್ಷದಿಂದ ಕಣಕ್ಕಿಳಿದಿದ್ದ ಶ್ರೀರಾಮುಲು, ಸುಮಾರು 40 ಸಾವಿರ ಮತಗಳ ಅಂತರದಿಂದ ಜಯಗಳಿಸುವ ಮೂಲಕ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರರಾಗಿ ಹೊರ ಹೊಮ್ಮಿದ್ದರು. 2013ರಲ್ಲಿ ನಡೆದ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಎಸ್‌ಆರ್ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಯಿತಾದರೂ, ನಿರೀಕ್ಷಿತ ಪ್ರಮಾಣದಲ್ಲಿ ಫಲಿತಾಂಶ ಬರಲಿಲ್ಲ. ಇದರ ಬೆನ್ನಲ್ಲೇ ರಾಜ್ಯ ವಿಧಾನಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಶ್ರೀರಾಮುಲು, ರಾಜ್ಯಾದ್ಯಂತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದರ ಜತೆಗೆ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ 3ನೇ ಬಾರಿಗೆ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಶ್ರೀರಾಮುಲು ಭರ್ಜರಿ ಜಯಗಳಿಸಿದಾದರೂ, ರಾಜ್ಯಾದ್ಯಂತ ಕೇವಲ ನಾಲ್ಕು ಕ್ಷೇತ್ರಗಳಲ್ಲಿ ಮಾತ್ರ ಬಿಎಸ್‌ಆರ್ ಪಕ್ಷ ಗೆಲ್ಲುವಲ್ಲಿ ಶಕ್ತವಾಯಿತು.
ಸಂಸತ್‌ಗೆ ಪ್ರವೇಶ: ಬಳಿಕ, ಮಾತೃ ಪಕ್ಷ ಬಿಜೆಪಿಯತ್ತ ಮುಖ ಮಾಡಿದ ಶ್ರೀರಾಮುಲು, 2014ರ ಲೋಕಸಭೆ ಚುನಾವಣೆ ಹೊತ್ತಿಗೆ ಬಿಎಸ್ ಆರ್ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದರು. ಆಗಲೂ ಬಿಎಸ್‌ಆರ್ ಪಕ್ಷದಿಂದ ಜಯಗಳಿಸಿದ್ದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಮುಲು, ಬಿಜೆಪಿಯಿಂದ ಬಳ್ಳಾರಿ ಲೋಕಸಭೆ ಎಸ್‌ಟಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ಮೊದಲ ಬಾರಿಗೆ ಸಂಸತ್ ಪ್ರವೇಶ ಮಾಡಿದರು. ಅಲ್ಲದೆ, ತಮ್ಮ ರಾಜೀನಾಮೆಯಿಂದ ತೆರವಾಗಿದ್ದ ಗ್ರಾಮೀಣ ಕ್ಷೇತ್ರಕ್ಕೆ ಎರಡನೇ ಬಾರಿಗೆ ಉಪಚುನಾವಣೆ ನಡೆಯಲು ಕಾರಣರಾದರು. ಬಳಿಕ, 2014ರಲ್ಲಿ 2ನೇ ಬಾರಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಎನ್. ವೈ.ಗೋಪಾಲಕೃಷ್ಣ ಜಯಗಳಿಸುವ ಮೂಲಕ ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಿದರು.
ಮತ್ತೆ ವಿಧಾನಸಭೆ ಪ್ರವೇಶ: ರಾಜ್ಯ ವಿಧಾನಸಭೆಗೆ 2018ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು
ಕ್ಷೇತ್ರದಿಂದ ಬಿಜೆಪಿಯಿಂದ ಕಣಕ್ಕಿಳಿದಿದ್ದ ಶ್ರೀರಾಮುಲು, ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನ.3ರಂದು ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಹೀಗೆ, ಕಳೆದ 10 ವರ್ಷಗಳಲ್ಲಿ ಶ್ರೀರಾಮುಲು ರಾಜೀನಾಮೆಯಿಂದಾಗಿ ಗಣಿನಾಡು ಬಳ್ಳಾರಿ
ಜಿಲ್ಲೆ (2 ವಿಧಾನಸಭೆ, 1 ಲೋಕಸಭೆ) ಮೂರನೇ ಬಾರಿಗೆ ಉಪಚುನಾವಣೆ ಎದುರಿಸಲು ಸಜ್ಜಾಗುತ್ತಿದೆ. ಇದಕ್ಕೂ ಮುಂಚೆ, 1999ರ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿಯಿಂದ ಸ್ಪರ್ಧಿಸಿದ್ದ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಗೆದ್ದ ಬಳಿಕ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ
ಉಪಚುನಾವಣೆ ನಡೆದಿತ್ತು.
ವೆಂಕೋಬಿ ಸಂಗನಕಲ್ಲು