Advertisement

Jhansi: ಕೋರ್ಟ್‌ ಗೆ ಕರೆದೊಯ್ಯುತ್ತಿರುವಾಗಲೇ 3 ಆರೋಪಿಗಳು ಪೊಲೀಸ್‌ ಕಸ್ಟಡಿಯಿಂದ ಪರಾರಿ!

03:13 PM Sep 21, 2023 | Team Udayavani |

ಜಾನ್ಸಿ(ಉತ್ತರಪ್ರದೇಶ): ಉತ್ತರಪ್ರದೇಶದ ಜಾನ್ಸಿ ರೈಲ್ವೆ ಕೋರ್ಟ್‌ ಗೆ ಆರೋಪಿಗಳನ್ನು ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಮೂವರು ಪೊಲೀಸ್‌ ಕಸ್ಟಡಿಯಿಂದ ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ಇದನ್ನೂ ಓದಿ:Actress: 17ಕ್ಕೆ ಹೀರೋಯಿನ್‌,19ಕ್ಕೆ ಸೂಪರ್ ಸ್ಟಾರ್‌, 24ರ ವಯಸ್ಸಿಗೆ ನಟನೆ ತೊರೆದ ನಟಿ

ವಿಡಿಯೋದಲ್ಲೇನಿದೆ?

ಕೋರ್ಟ್‌ ಹೊರಭಾಗದಲ್ಲಿ ಪೊಲೀಸ್‌ ವ್ಯಾನ್‌ ನಿಲ್ಲಿಸಲಾಗಿತ್ತು. ಆದರೆ ಯಾವುದೇ ಭದ್ರತಾ ಸಿಬಂದಿ ಇಲ್ಲದಿರುವುದನ್ನು ಗಮನಿಸಿದ ಮೂವರು ಆರೋಪಿಗಳು ವ್ಯಾನ್‌ ನ ಬಾಗಿಲು ತೆರೆದು ಪರಾರಿಯಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೂವರು ಆರೋಪಿಗಳು ವ್ಯಾನ್‌ ನ ಬಾಗಿಲು ತೆರೆದು ರಸ್ತೆಯಲ್ಲಿ ಓಡುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಘಟನೆ ನಡೆದ ಸಂದರ್ಭದಲ್ಲಿ ವ್ಯಾನ್‌ ನೊಳಗೆ ಒಟ್ಟು ಏಳು ಆರೋಪಿಗಳಿದ್ದರು. ಇದರಲ್ಲಿ ಮೂವರು ಆರೋಪಿಗಳು ಪರಾರಿಯಾಗಿರುವುದಾಗಿ ವರದಿ ತಿಳಿಸಿದೆ.

Advertisement

ಏಳು ಜನ ಆರೋಪಿಗಳು, 11 ಪೊಲೀಸ್‌ ಅಧಿಕಾರಿಗಳು:

ಈ ಘಟನೆ ಮಂಗಳವಾರ (ಸೆ.19) ಮಧ್ಯಾಹ್ನ ನಡೆದಿತ್ತು. 11 ಜನ ಪೊಲೀಸ್‌ ಅಧಿಕಾರಿಗಳು ಒಟ್ಟು ಏಳು ಆರೋಪಿಗಳನ್ನು ಜಾನ್ಸಿ ರೈಲ್ವೆ ಕೋರ್ಟ್‌ ಗೆ ಹಾಜರುಪಡಿಸಲು ಪೊಲೀಸ್‌ ವ್ಯಾನ್‌ ನಲ್ಲಿ ಕರೆದೊಯ್ಯುತ್ತಿದ್ದರು. ಪರಾರಿಯಾಗಿರುವ ಮೂವರು ಆರೋಪಿಗಳ ವಿರುದ್ಧ ರೈಲ್ವೆ ನಿಲ್ದಾಣದಲ್ಲಿ ಮೊಬೈಲ್‌ ಕಳವುಗೈದ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಬ್ರಿಜೇಂದ್ರ (27ವರ್ಷ), ಶೈಲೇಂದ್ರ (20ವರ್ಷ) ಹಾಗೂ ಜ್ಞಾನಪ್ರಸಾದ್‌ (23 ವರ್ಷ) ಎಂದು ಗುರುತಿಸಲಾಗಿದೆ.

ಪರಾರಿಯಾಗಿರುವ ಮೂವರು ಆರೋಪಿಗಳು ನಾಪತ್ತೆಯಾಗಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಮೂವರು ಸಬ್‌ ಇನ್ಸ್‌ ಪೆಕ್ಟರ್‌ ಸೇರಿದಂತೆ 11 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ಪ್ರಕರಣದ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸಲಾಗಿದೆ. ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಎರಡು ಪೊಲೀಸ್‌ ತಂಡವನ್ನು ರಚಿಸಲಾಗಿದೆ. ರೈಲ್ವೆ ಕೋರ್ಟ್‌ ಸುತ್ತಮುತ್ತಲಿನ ಸಿಸಿಟಿವಿ ಫೂಟೇಜ್‌ ಪರಿಶೀಲಿಸಲಾಗುತ್ತಿದೆ. ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಲಾಗುವುದು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next