ನವದೆಹಲಿ:ಮುಂಬೈ ದಾಳಿ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನ ಉಗ್ರಗಾಮಿ ಚಟುವಟಿಕೆಗೆ ಹಣಕಾಸು ನೆರವು ನೀಡಿದ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ದೆಹಲಿ ಮೂಲದ ಉದ್ಯಮಿಯೊಬ್ಬರ ಹೆಸರನ್ನು ದಾಖಲಿಸದೇ ಇರಲು 2 ಕೋಟಿ ರೂಪಾಯಿ ಲಂಚ ಕೇಳಿದ್ದ ಆರೋಪದಡಿ ರಾಷ್ಟ್ರೀಯ ತನಿಖಾ ದಳ(ಎನ್ಐಎ)ದ ಮೂವರು ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ ಎಂದು ವರದಿ ತಿಳಿಸಿದೆ.
ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಲು ಕಳುಹಿಸುತ್ತಿದ್ದ ಹಣಕಾಸು ನೆರವಿನ ಬಗ್ಗೆ ಎನ್ ಐಎ ತನಿಖೆ ನಡೆಸುತ್ತಿದ್ದು, ಈ ಮೂವರು ಅಧಿಕಾರಿಗಳ ವಿರುದ್ಧ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ಶ್ರೇಣಿಯ ಅಧಿಕಾರಿಯನ್ನು ತನಿಖೆಗೆ ನೇಮಕ ಮಾಡಲಾಗಿತ್ತು.
ಮೇಲ್ನೋಟಕ್ಕೆ ಆರೋಪ ಸಾಬೀತಾಗಿದ್ದು, ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು ಎಂಬ ನಿಟ್ಟಿನಲ್ಲಿ ಎನ್ ಐಎ ಮೂವರು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ಎನ್ ಐಎ ವಕ್ತಾರ ಐಎಎನ್ ಎಸ್ ಗೆ ತಿಳಿಸಿದ್ದಾರೆ. ಉತ್ತರ ನವದೆಹಲಿಯಲ್ಲಿರುವ ಉದ್ಯಮಿಯ ಮನೆಯ ಶೋಧ ಕಾರ್ಯಾಚರಣೆ ನಡೆಸಿದ ವೇಳೆ ಪ್ರಕರಣದಲ್ಲಿ ಹೆಸರನ್ನು ಮುಚ್ಚಿಡಲು 2 ಕೋಟಿ ರೂಪಾಯಿ ಲಂಚ ಕೇಳಿರುವುದಾಗಿ ವರದಿ ವಿವರಿಸಿದೆ.