Advertisement
ಅವಿಭಜಿತ ಬಳ್ಳಾರಿ ಜಿಲ್ಲೆಯ ಕೊಟ್ಟೂರು, ಕಂಪ್ಲಿ, ಕುರುಗೋಡು’ಗಳಲ್ಲಿ 2018 ಜನವರಿ ತಿಂಗಳಲ್ಲಿ ತಾಲೂಕು ಕಚೇರಿಗಳನ್ನು ತೆರೆದು ಕಾರ್ಯಾರಂಭ ಮಾಡುವ ಮೂಲಕ ಅಧಿಕೃತವಾಗಿ ನೂತನ ತಾಲೂಕುಗಳಾಗಿ ಮೇಲ್ದರ್ಜೆಗೆ ಏರಿದವು. ಆದರೆ, ಆರಂಭದಲ್ಲಿ ತಹಶೀಲ್ದಾರ್ ಕಚೇರಿಯನ್ನು ತೆರೆದು ಕಂದಾಯ ಇಲಾಖೆ, ಕೆಲ ದಿನಗಳ ಬಳಿಕ ತಾಪಂ ಕಚೇರಿಯನ್ನು ತೆರೆದಿದ್ದನ್ನು ಬಿಟ್ಟರೆ, ಬಹುತೇಕ ಇಲಾಖೆಗಳು ಅಧಿಕೃತವಾಗಿ ಆರಂಭವಾಗಿಲ್ಲ. ಕೇವಲ ಕಂದಾಯ ಇಲಾಖೆಯ ವ್ಯವಹಾರಗಳು ಮಾತ್ರ ನಡೆಯುತ್ತಿದ್ದು, ಇನ್ನಿತರೆ ತಾಲೂಕು ಆರೋಗ್ಯ ಅಧಿ ಕಾರಿ, 100 ಹಾಸಿಗೆಯುಳ್ಳ ಸಾರ್ವಜನಿಕ ಆಸ್ಪತ್ರೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಲೋಕೋಪಯೋಗಿ, ಕೃಷಿ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಗ್ರಾಮೀಣ ಕುಡಿವ ನೀರು ಸೇರಿ ವಿವಿಧ ಇಲಾಖೆಗಳ ಕಾರ್ಯ ಚಟುವಟಿಕೆಗಾಗಿ ಸಾರ್ವಜನಿಕರು ಇಂದಿಗೂ ಇನ್ನೂ ಮೂಲ ತಾಲೂಕುಗಳಿಗೆ ಅಲೆದಾಡುವ ಪರಿಸ್ಥಿತಿ ಮುಂದುವರೆದಿದೆ.
Related Articles
Advertisement
ಆಡಳಿತಾತ್ಮಕ ದೃಷ್ಟಿಯಿಂದ ರಚನೆಯಾಗಿರುವ ನೂತನ ಕಂಪ್ಲಿ, ಕೊಟ್ಟೂರು, ಕುರುಗೋಡು ತಾಲೂಕುಗಳಲ್ಲಿ ಮಿನಿ ವಿಧಾನಸೌಧ ನಿರ್ಮಿಸಲು ರಾಜ್ಯ ಸರ್ಕಾರ ತಲಾ 10 ಲಕ್ಷ ರೂ. ಜಿಲ್ಲಾ ಖನಿಜ ನಿಧಿ (ಡಿಎಂಎಫ್)ಯಿಂದ ತಲಾ 5 ಲಕ್ಷ ಸೇರಿ ಒಟ್ಟು 15 ಲಕ್ಷ ರೂ. ಅನುದಾನ ಘೋಷಣೆ ಮಾಡಿದೆ. ಕುರುಗೋಡು ಪಟ್ಟಣದಲ್ಲಿ ಬಳ್ಳಾರಿ ರಸ್ತೆಯಲ್ಲಿ, ಕಂಪ್ಲಿ ಪಟ್ಟಣದಲ್ಲಿ ಹೊಸಪೇಟೆ ರಸ್ತೆಯಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸ್ಥಳವನ್ನು ಗುರುತಿಸಲಾಗಿದ್ದು, ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಕೊಟ್ಟೂರು ತಾಲೂಕಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಈವರೆಗೂ ಯಾವುದೇ ಪ್ರಕ್ರಿಯೆಗಳು ಕಾರ್ಯರೂಪಕ್ಕೆ ಬಂದಿಲ್ಲ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ಆಸ್ಥೆವಹಿಸದೆ ಉದಾಸೀನ ತೋರುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಆಡಳಿತಾತ್ಮಕ ದೃಷ್ಟಿಯಿಂದ ರಚನೆಯಾಗಿರುವ ನೂತನ ಕೊಟ್ಟೂರು, ಕುರುಗೋಡು, ಕಂಪ್ಲಿ ತಾಲೂಕುಗಳು ಕೇವಲ ತಾಲೂಕು ಎಂಬ ಹಣೆಪಟ್ಟಿಗಷ್ಟೇ ಸೀಮಿತವಾಗಿವೆ. ಅರ್ಧ ದಶಕ ಕಳೆದರೂ, ಇನ್ನುಳಿದ ಕಚೇರಿಗಳನ್ನು ತೆರೆದು, ಸಿಬ್ಬಂದಿ ನಿಯೋಜಿಸುವಲ್ಲಿ ರಾಜ್ಯ ಸರ್ಕಾರ, ಜಿಲ್ಲಾಡಳಿತ ಹೆಣಗಾಡುತ್ತಿದ್ದು, ಸೂಕ್ತ ವೈದ್ಯಕೀಯ ಸೌಲಭ್ಯ ಸೇರಿ ಇನ್ನಿತರೆ ಮೂಲಸೌಲಭ್ಯಗಳು ಇಲ್ಲದೆ, ಅನ್ಯಕಾರ್ಯ ನಿಮಿತ್ತ ನಿತ್ಯ ಮೂಲ ತಾಲೂಕು ಕೇಂದ್ರಕ್ಕೆ ಪರದಾಟದಿಂದ ಸಾರ್ವಜನಿಕರು ಮುಕ್ತಗೊಳ್ಳದಂತಾಗಿದೆ.
ವಿಭಜನೆಯಾದರೂ ಕಂಪ್ಲಿ ನಿರ್ವಹಣೆ
ಅವಿಭಜಿತ ಬಳ್ಳಾರಿ ಜಿಲ್ಲೆಯಿದ್ದಾಗ ಘೋಷಣೆಯಾಗಿದ್ದ ಕೊಟ್ಟೂರು, ಕುರುಗೋಡು, ಕಂಪ್ಲಿ ನೂತನ ತಾಲೂಕುಗಳು, ಪ್ರತ್ಯೇಕ ವಿಜಯನಗರ ಜಿಲ್ಲೆಯಾದ ಬಳಿಕ ಕೊಟ್ಟೂರು ವಿಜಯನಗರ ಜಿಲ್ಲೆಯಲ್ಲಿ, ಕಂಪ್ಲಿ, ಕುರುಗೋಡು ತಾಲೂಕುಗಳು ಬಳ್ಳಾರಿ ಜಿಲ್ಲೆ ವ್ಯಾಪ್ತಿಗೆ ಸೇರಿವೆ. ಜಿಲ್ಲೆ ವಿಭಜನೆಗೂ ಮುನ್ನ ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆ ತಾಲೂಕಿನಲ್ಲಿದ್ದ ಕಂಪ್ಲಿಯು ನೂತನ ತಾಲೂಕಾಗಿ ರಚನೆಯಾದ ಬಳಿಕ ಭೌಗೋಳಿಕವಾಗಿ ಬಳ್ಳಾರಿ ಜಿಲ್ಲೆ ವ್ಯಾಪ್ತಿಗೆ ಸೇರಿದೆ ಹೊರತು, ತಹಶೀಲ್ದಾರ್, ತಾಪಂ ಕಚೇರಿಗಳನ್ನು ಬಿಟ್ಟು, ಉಳಿದೆಲ್ಲ ಇಲಾಖೆಗಳು, ಹೊಸಪೇಟೆ ತಾಲೂಕು ಅಧಿಕಾರಿಗಳೇ ಉಸ್ತುವಾರಿ ವಹಿಸಿಕೊಂಡಿದ್ದು ಇದರಿಂದ ಅನ್ಯ ಕೆಲಸ ಕಾರ್ಯಗಳ ನಿಮಿತ್ತ ಸಾರ್ವಜನಿಕರು ಪ್ರತಿನಿತ್ಯ ಹೊಸಪೇಟೆಗೆ ಅಲೆಯುವುದು ತಪ್ಪುತ್ತಿಲ್ಲ.
ಯಾತ್ರಿ ನಿವಾಸದಲ್ಲಿ ತಾಲೂಕು ಕಚೇರಿ
ನೂತನ ಕೊಟ್ಟೂರು, ಕುರುಗೋಡು, ಕಂಪ್ಲಿ ತಾಲೂಕುಗಳು ರಚನೆಯಾಗಿ ವರ್ಷಗಳುರುಳಿದರೂ ತೆರೆಯಲಾಗಿರುವ ತಹಶೀಲ್ದಾರ್, ತಾಪಂ ಕಚೇರಿಗಳಿಗೂ ಸಹ ಸ್ವಂತ ಕಟ್ಟಡಗಳನ್ನು ನಿರ್ಮಿಸಲಾಗಿಲ್ಲ. ಕೊಟ್ಟೂರು, ಕುರುಗೋಡು ತಾಲೂಕುಗಳಲ್ಲಿ ದೇವಸ್ಥಾನಕ್ಕೆ ಸೇರಿದ್ದ ಯಾತ್ರಿ ನಿವಾಸದ ಕಟ್ಟಡದಲ್ಲಿ ತಹಶೀಲ್ದಾರ್ ಕಚೇರಿಗಳು ನಡೆದರೆ, ತಾಪಂ ಕಚೇರಿಗಳು ಕೊಟ್ಟೂರಿನಲ್ಲಿ ಶಾಲಾ ಕಟ್ಟಡ, ಕುರುಗೋಡಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೇರಿದ್ದ ಸಮುದಾಯ ಭವನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಇನ್ನು ಕಂಪ್ಲಿಯಲ್ಲಿ ತಹಸೀಲ್ದಾರ್ ಕಚೇರಿಯನ್ನು ಎಪಿಎಂಸಿಗೆ ಸೇರಿದ್ದ ಕಟ್ಟಡದಲ್ಲಿ, ತಾಪಂ ಕಚೇರಿಯನ್ನು ನೀರಾವರಿ ಇಲಾಖೆಗೆ ಸೇರಿದ್ದ ಕಟ್ಟಡದಲ್ಲಿ ಬಾಡಿಗೆ ನಡೆಸಲಾಗುತ್ತಿದೆ.
–ವೆಂಕೋಬಿ ಸಂಗನಕಲ್ಲು