ಹೊಸದಿಲ್ಲಿ: ಡಿ.ಕೆ. ಸುರೇಶ್ ಸೇರಿ ಕಾಂಗ್ರೆಸ್ ನ ಮೂವರು ಸಂಸದರನ್ನು ಗುರುವಾರ ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ.ದೀಪಕ್ ಬೈಜ್, ನಕುಲ್ ನಾಥ್ ಅವರನ್ನೂ ಅಮಾನತು ಮಾಡಲಾಗಿದ್ದು, ಅಮಾನತುಗೊಂಡಿರುವ ಪ್ರತಿಪಕ್ಷಗಳ ಒಟ್ಟು ಸದಸ್ಯರ ಸಂಖ್ಯೆ 146ಕ್ಕೆ ಏರಿಕೆಯಾಗಿದೆ.
ಡಿಸೆಂಬರ್ 13 ರಂದು ಸಂಸತ್ತಿನ ಭದ್ರತಾ ಉಲ್ಲಂಘನೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಒತ್ತಾಯಿಸಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಲಾಪಕ್ಕೆ ಅಡ್ಡಿಪಡಿಸಿ ಮತ್ತು ಘೋಷಣೆಗಳನ್ನು ಕೂಗಿದ ಕಾರಣಕ್ಕೆ ವಿಪಕ್ಷಗಳ ಸಂಸದರನ್ನು ಡಿಸೆಂಬರ್ 14 ರಿಂದ ಅಮಾನತುಗೊಳಿಸಲಾಗುತ್ತಿದೆ.
ಗುರುವಾರ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಸದನದಲ್ಲಿ ಪ್ರತಿಭಟನೆ ನಡೆಸದಂತೆ ಮೂವರು ಕಾಂಗ್ರೆಸ್ ಸಂಸದರಿಗೆ ಎಚ್ಚರಿಕೆ ನೀಡಿದ್ದರು. ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷಗಳ ಸಂಸದರು ಘೋಷಣೆಗಳನ್ನು ಕೂಗುತ್ತಿರುವುದು ಕೇಳಿಸಿತು. ಪ್ರಶ್ನೋತ್ತರ ಅವಧಿ ಮುಗಿದ ಕೂಡಲೇ ಸ್ಪೀಕರ್ ಪ್ರತಿಭಟನಾನಿರತ ಸದಸ್ಯರಿಗೆ ಎಚ್ಚರಿಕೆ ನೀಡಿ, ಮೂವರು ಕಾಂಗ್ರೆಸ್ ಸಂಸದರನ್ನು ಅಮಾನತುಗೊಳಿಸಿದರು.
ಡಿಸೆಂಬರ್ 4 ರಂದು ಆರಂಭವಾದ ಅಧಿವೇಶನದಲ್ಲಿ ಡಿಸೆಂಬರ್ 14 ರಂದು 14 ಸಂಸದರನ್ನು, ಸೋಮವಾರ 78, ಮತ್ತು ಮಂಗಳವಾರ 49 ಸಂಸದರನ್ನು ಅಮಾನತುಗೊಳಿಸಲಾಗಿದೆ
ವಿಪಕ್ಷಸಂಸದರ ಪ್ರತಿಭಟನೆ
ಗುರುವಾರ, ಇಂಡಿಯಾ ಮೈತ್ರಿಕೂಟದ ಸಂಸದರು ಗುರುವಾರ ಸಂಸತ್ತಿನಿಂದ ದೆಹಲಿಯ ವಿಜಯ್ ಚೌಕ್‌ಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ಹೊರ ಹಾಕಿದರು.ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸದನದೊಳಗೆ ಭದ್ರತಾ ಉಲ್ಲಂಘನೆಯ ವಿಷಯದ ಬಗ್ಗೆ ಮಾತನಾಡದೆ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನ ವಿಶೇಷ ಹಕ್ಕು ಉಲ್ಲಂಘಿಸಿದ್ದಾರೆ ಎಂದು ಕಿಡಿ ಕಾರಿದರು.