ಲಕ್ನೋ: ಅಪರಿಚಿತ ದುಷ್ಕರ್ಮಿಗಳು ಮನೆಯೊಂದಕ್ಕೆ ನುಗ್ಗಿ ನಾಲ್ವರ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ, ಮೂವರು ಸಾವನ್ನಪ್ಪಿದ್ದು, 60ವರ್ಷದ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್ ನ ಲೋನಿ ಎಂಬಲ್ಲಿ ಭಾನುವಾರ ರಾತ್ರಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಲಸಿಕೆ ಪಡೆಯಲು ಬಂದವರು 500 ಮಂದಿ, ಕೊಟ್ಟ ಟೋಕನ್ ಕೇವಲ 200: ರೊಚ್ಚಿಗೆದ್ದ ಜನರು
ಸ್ಥಳೀಯ ಪೊಲೀಸರ ಮಾಹಿತಿ ಪ್ರಕಾರ, ಈ ಘಟನೆ ಲೋನಿಯ ಟೋಲಿ ಕಾಲೋನಿಯಲ್ಲಿ ನಡೆದಿದೆ. ಬಟ್ಟೆ ವ್ಯಾಪಾರಿ ರಿಯಾಜುದ್ದೀನ್ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು, ರಿಯಾಜುದ್ದೀನ್ ಹಾಗೂ ಆತನ ಇಬ್ಬರು ಮಕ್ಕಳನ್ನು ಗುಂಡಿಟ್ಟು ಕೊಂದಿದ್ದು, ಘಟನೆಯಲ್ಲಿ ರಿಯಾಜುದ್ದೀನ್ ಪತ್ನಿ ಗಾಯಗೊಂಡಿರುವುದಾಗಿ ವರದಿ ವಿವರಿಸಿದೆ.
ಗುಂಡಿನ ದಾಳಿಗೆ ಮೂವರು ಸಾವನ್ನಪ್ಪಿದ್ದು, ಪತ್ನಿ ಆರೋಗ್ಯ ಸ್ಥಿತಿ ಚಿಂತಾಜನಕವಾಗಿರುವುದಾಗಿ ವರದಿ ತಿಳಿಸಿದೆ. ಘಟನೆ ಬಗ್ಗೆ ಪೊಲೀಸರ ತಂಡ ತನಿಖೆ ಕೈಗೆತ್ತಿಕೊಂಡಿರುವುದಾಗಿ ಎಎನ್ ಐ ವರದಿ ಮಾಡಿದೆ.
ಘಟನಾ ಸ್ಥಳಕ್ಕೆ ಗಾಜಿಯಾಬಾದ್ ಪೊಲೀಸರ ತಂಡ ತೆರಳಿದ್ದು, ದಾಳಿಕೋರರ ಗುರುತು ಪತ್ತೆಹಚ್ಚಲು ಪ್ರಯತ್ನಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಕೊಲೆಗೆ ಕಾರಣ ಏನೆಂಬುದು ತನಿಖೆ ನಂತರ ತಿಳಿಯಬೇಕಾಗಿದೆ ಎಂದು ವಿವರಿಸಿದ್ದಾರೆ.