ಬಾಗಲಕೋಟೆ: ಉತ್ತರ ಕರ್ನಾಟಕದ ಪ್ರಸಿದ್ಧ ಬನಶಂಕರಿ ಜಾತ್ರೆಗೆ ಬರುವ ವ್ಯಾಪಾರಸ್ಥರಿಗೆ ಈ ಬಾರಿ ಮೂರು ಕಡ್ಡಾಯ ಷರತ್ತು ವಿಧಿಸಲಾಗಿದೆ. ಷರತ್ತುಗಳಿಗೆ ಒಪ್ಪಿಕೊಳ್ಳು ವವರಿಗೆ ಮಾತ್ರ ಜಾತ್ರೆಯಲ್ಲಿ ವ್ಯಾಪಾರ ಮಾಡಲು ಮಳಿಗೆ ನೀಡಲಾಗಿದೆ.
ಒಂದು ತಿಂಗಳ ಕಾಲ ನಡೆಯುತ್ತಿರುವ ಈ ಜಾತ್ರೆಯಲ್ಲಿ ವ್ಯಾಪಾರ-ವಹಿವಾಟು ನಡೆಸ ಲೆಂದೇ ಕರ್ನಾಟಕ, ಮಹಾರಾಷ್ಟ್ರ ಸಹಿತ ವಿವಿಧೆಡೆಯಿಂದ ಬರುವ ವ್ಯಾಪಾರಸ್ಥರಿಗೆ ಕೆಲ ಕಡ್ಡಾಯ ಷರತ್ತು ಹಾಕಲಾಗಿದ್ದು, ಷರತ್ತುಗಳ ಪಾಲನೆ ಕುರಿತು ತಪಾಸಣೆಗೆ ಅಧಿಕಾರಿಗಳು ನಿರಂತರ ಸಂಚಾರ ನಡೆಸಲಿದ್ದಾರೆ.
ಮೂರು ಷರತ್ತುಗಳೇನು?: ಬನಶಂಕರಿ ಜಾತ್ರೆಯಲ್ಲಿ ವಿವಿಧ ಅಂಗಡಿ ಹಾಕುವ ವ್ಯಾಪಾರಸ್ಥರು ತಮ್ಮ ತಮ್ಮ ಅಂಗಡಿಗಳಲ್ಲಿ ವಿದ್ಯುತ್ ಉಳಿತಾಯಕ್ಕಾಗಿ ಕಡ್ಡಾಯವಾಗಿ ಎಲ್‌ಇಡಿ ಬಲ್ಬ ಬಳಸಬೇಕು. ಸ್ವತೆಗಾಗಿ ಎರಡು ಪ್ರತ್ಯೇಕ ಕಸದ ಡಬ್ಬಿ ಇಟ್ಟುಕೊಂಡಿರಬೇಕು. ಪ್ರಮುಖವಾಗಿ ಪಾಸ್ಟಿಕ್ ಬಳಸಬಾರದು. ಈ ಮೂರೂ ಷರತ್ತುಗಳನ್ನು ಒಪ್ಪಿಕೊಂಡು, ಒಪ್ಪಿಗೆ ಪತ್ರ ನೀಡುವ ವ್ಯಾಪಾರಸ್ಥರಿಗೆ ಮಾತ್ರ ಚೋಳಚಗುಡ್ಡ ಗ್ರಾಪಂನಿಂದ ಜಾತ್ರೆಯಲ್ಲಿ ಅಂಗಡಿ ಹಾಕಿಕೊಳ್ಳಲು ಎನ್‌ಒಸಿ (ನಿರಪೇಕ್ಷ ಪತ್ರ) ನೀಡಲಾಗುತ್ತಿದೆ.
ಗ್ರಾಮ ಪಂಚಾಯತ್‌ನಿಂದ 313 ಅಂಗಡಿ: ಬನಶಂಕರಿ ದೇವಸ್ಥಾನ ಚೋಳಚಗುಡ್ಡ ಗ್ರಾಮ ಪಂಚಾಯತ್ ವ್ಯಾಪ್ತಿ ಯಲ್ಲಿದೆ. ಗ್ರಾಪಂನಿಂದ ಬನಶಂಕರಿ ರಸ್ತೆಯ ಎಡ ಬದಿಗೆ 157 ಹಾಗೂ ಬಲ ಬದಿಗೆ 156 ಸೇರಿ ಒಟ್ಟು 313 ಅಂಗಡಿಗಳಿವೆ. ಅದರಲ್ಲಿ 10 ಅಡಿ ಸುತ್ತಳತೆಯ ಅಂಗಡಿಗೆ 2 ಸಾವಿರ, 20 ಅಡಿ ಸುತ್ತಳತೆ ಜಾಗೆಯ ದೊಡ್ಡ ಅಂಗಡಿಗಳಿಗೆ 4 ಸಾವಿರ ಭೂ ಬಾಡಿಗೆ ನಿಗದಿ ಮಾಡಲಾಗಿದೆ. ಈ ಅಂಗಡಿಗಳಿಗೆ ಪರವಾನಗಿ ಪಡೆಯುವ ವೇಳೆ ಮೂರು ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ನಿರ್ದೇಶನ ನೀಡಲಾಗುತ್ತಿದೆ. ಬನಶಂಕರಿದೇವಿ ದೇವಸ್ಥಾನ ಟ್ರಸ್ಟ್ ಕಮೀಟಿ ಅಧೀನದಲ್ಲೂ ಕೆಲ ಅಂಗಡಿಗಳಿದ್ದು, ಟ್ರಸ್ಟ್ ನಿಂದ ಭೂ ಬಾಡಿಗೆ ಆಧಾರದ ಮೇಲೆ ನೀಡುವ ಅಂಗಡಿಗಳಿಗೂ ಈ ಷರತ್ತು ಅನ್ವಯವಾಗುತ್ತದೆ. ಅಂಗಡಿಗೊಂದು ನಂಬರ್: ಬನಶಂಕರಿದೇವಿ ಜಾತ್ರೆಗಾಗಿಯೇ ರಾಜ್ಯದ ಹಲವು ಕಡೆಗಳಿಂದ ನಾಟಕ ಕಂಪನಿಗಳು, ವಿವಿಧ ಅಂಗಡಿಗಳು ಬರುತ್ತಿದ್ದು, ಅವುಗಳಿಗೆ ಅನುಕ್ರಮ ಸಂಖ್ಯೆ ನೀಡಲಾಗಿದೆ. ಆ ಅಂಗಡಿಕಾರರು, ತಮ್ಮ ಹೆಸರು ಹೇಳುವ ಬದಲು, ತಮಗೆ ಈ ಹಿಂದೆ ನೀಡಿರುವ ಅನುಕ್ರಮ ಸಂಖ್ಯೆ ಹೇಳಿದರೆ ಸಾಕು, ಅವರ ಪೂರ್ಣ ವಿವರ ಗ್ರಾಮ ಪಂಚಾಯತ್‌ನಲ್ಲಿ ದೊರೆಯುತ್ತವೆ. ಇದೇ ಮೊದಲ ಬಾರಿಗೆ ಜಾತ್ರೆಯಲ್ಲಿ ಅಂಗಡಿ ಹಾಕಲು ಬರುವ ವ್ಯಾಪಾರಸ್ಥರಿಗೆ ಅಷ್ಟು ಸುಲಭವಾಗಿ ಅಂಗಡಿಗಾಗಿ ಜಾಗೆ ಸಿಗಲ್ಲ. ಪ್ರತಿವರ್ಷ ಬರುವ ಅಂಗಡಿಗಾರರಲ್ಲಿ ಯಾರಾದರೂ ಬಿಟ್ಟಿದ್ದರೆ, ಹೊಸದಾಗಿ ಜಾಗೆ ಇದ್ದರೆ ಮಾತ್ರ ಅವರಿಗೆ ಅವಕಾಶ ಕಲ್ಪಿಸಲಾಗುತ್ತದೆ.
ಒಂದು ತಿಂಗಳು ವ್ಯಾಪಾರ-ವಹಿವಾಟು: ಬನಶಂಕರಿ ಜಾತ್ರೆಯಲ್ಲಿ ಒಂದು ತಿಂಗಳ ಕಾಲ ನಿರಂತರ ವ್ಯಾಪಾರ-ವಹಿವಾಟು ನಡೆಯ ಲಿದ್ದು, ಕೆಲವರು 1 ಲಕ್ಷದೊಳಗೆ ಆದಾಯ ಮಾಡಿಕೊಂಡರೆ, ಕೆಲವರು 2 ಲಕ್ಷಕ್ಕೂ ಅಧಿಕ ಆದಾಯ ಮಾಡಿಕೊಳ್ಳುತ್ತಾರೆ. ವ್ಯಾಪಾರಸ್ಥರು ಜಾತ್ರೆಗಾಗಿಯೇ ತಿಂಗಳಾನುಗಟ್ಟನೆ ವ್ಯಾಪಾರಕ್ಕಾಗಿ ಸಿದ್ಧತೆಯಲ್ಲಿ ತೊಡಗಿರುತ್ತಾರೆ. ರೈತರಿಗೆ ಬೇಕಾಗುವ ಕೃಷಿ ಸಂಬಂಧಿತ ಸಾಮಗ್ರಿ, ಬಾಂಡೆ ಸಾಮಾನು, ಮಕ್ಕಳ ಆಟಿಗೆ ವಸ್ತುಗಳು, ಫನ್‌ಫೇರ್, ಕಲ್ಲಿನಿಂದ ಕೆತ್ತಿದ ಗೃಹ ಸೌಂದರ್ಯ ವಸ್ತುಗಳು, ಬಟ್ಟೆ, ಮಿಠಾಯಿ, ಬಳೆ, ಕರದಂಡು, ಹೋಟೆಲ್, ಹೊಸ ಮನೆ ನಿರ್ಮಾಣಕ್ಕೆ ಬೇಕಾಗುವ ಕಿಟಕಿ, ಬಾಗಿಲು ಹೀಗೆ ಹಲವು ರೀತಿಯ ವಸ್ತುಗಳ ಮಾರಾಟದ ಅಂಗಡಿಗಳು ಬರುತ್ತವೆ. ಇಲ್ಲಿಗೆ ಬರುವ ಯಾವ ವ್ಯಾಪಾರಸ್ಥರೂ ತಮಗೆ ಹಾನಿಯಾಗಿದೆ ಎಂದು ಮರಳಿಲ್ಲ ಎಂದು ವ್ಯಾಪಾರಸ್ಥರು ಹೇಳುತ್ತಾರೆ.
-ಶ್ರೀಶೈಲ ಕೆ. ಬಿರಾದಾರ