ನವದೆಹಲಿ: ಯಾವುದೇ ವಿಧವಾದ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳದೆ ಕಾರ್ಖಾನೆಯ ಗ್ಯಾಸ್ ಟ್ಯಾಂಕ್ ನ ಒಳಗೆ ಇಳಿದ ಪರಿಣಾಮ ಮೂರು ಜನ ಕಾರ್ಮಿಕರು ಸಾವನಪ್ಪಿರುವ ಘಟನೆ ಅಂಬರ್ನಾಥ್ ಪ್ರದೇಶದ ರಾಸಾಯನಿಕ ಕಂಪನಿಯೊಂದರಲ್ಲಿ ನಡೆದಿದೆ.
ಈ ಕುರಿತಾಗಿ ಮಾಹಿತಿ ನೀಡಿರುವ ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ (MIDC) ಕಾರ್ಮಿಕರು ಗ್ಯಾಸ್ ಟ್ಯಾಂಕ್ ನ ಒಳಗೆ ಇಳಿಯುವ ಸಮಯದಲ್ಲಿ ಯಾವುದೇ ವಿಧವಾದ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಈ ಮೂವರು ಕಾರ್ಮಿಕರು ಸಾವನಪ್ಪಿದ್ದಾರೆ ಎಂದು ತಿಳಿಸಿದೆ.
ಗುತ್ತಿಗೆದಾರ ವ್ಯಕ್ತಿಯು ಕಾರ್ಮಿಕರಿಗೆ ಯಾವುದೇ ಸುರಕ್ಷತಾ ಸೌಲಭ್ಯಗಳನ್ನು ನೀಡದೆ ಗ್ಯಾಸ್ ಟ್ಯಾಂಕ್ ಒಳಗೆ ಇಳಿಸಿದ್ದು, ಅಪಾಯಕಾರಿ ಗ್ಯಾಸ್ ಸೇವನೆಯಿಂದಾಗಿ ಇವರು ಸಾವನಪ್ಪಿದ್ದಾರೆ ಎಂದು ಅಗ್ನಿ ಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುಮಾರು 30 ಅಡಿ ಆಳವಿರುವ ಈ ಟ್ಯಾಂಕ್ ಒಳಗೆ ಕಾರ್ಮಿಕರು ಇಳಿದಿದ್ದು, ಕೆಲವು ಘಂಟೆಗಳ ಬಳಿಕ ಕಾವಲುಗಾರನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕಾರ್ಮಿರನ್ನು ನೋಡಿದ್ದಾರೆ. ಆ ಬಳಿಕವೂ ಆತ ತನ್ನ ಮೇಲಿನ ಹಲವು ಅಧಿಕಾರಿಗಳಿಗೆ ವಿಷಯವನ್ನು ತಿಳಿಸಲು ಮುಂದಾಗಿದ್ದು, ಇದರಿಂದ ಇನ್ನೂ ಎರಡು ಗಂಟೆಗಳಷ್ಟು ಸಮಯ ವ್ಯರ್ಥವಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಗ್ನಿಶಾಮಕದಳದ ಅಧಿಕಾರಿಗಳು ತಿಳಿಸಿದ್ದಾರೆ.
ಇದಾದ ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ವ್ಯಕ್ತಿಗಳನ್ನು ಗ್ಯಾಸ್ ಟ್ಯಾಂಕ್ ನಿಂದ ಹೊರಕ್ಕೆ ತೆಗೆದಿದ್ದಾರೆ. ಆದರೆ ಅಷ್ಟರಲ್ಲೇ ಈ ಮೂವರು ಮೃತಪಟ್ಟಿದ್ದರು ಎಂದು ವರದಿ ತಿಳಿಸಿದೆ.
ಈ ವ್ಯಕ್ತಿಗಳ ಕುರಿತಾದ ಹೆಚ್ಚಿನ ಮಾಹಿತಿ ಇನ್ನು ತಿಳಿದು ಬಂದಿಲ್ಲ. ಪೊಲೀಸರು ಈ ಕುರಿತಾಗಿ ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ.