Advertisement

ಹದಗೆಟ್ಟ ಕರಿಯಕಲ್ಲು -ಸೂರಾಲು ಸಂಪರ್ಕ ರಸ್ತೆ

12:49 AM Jul 02, 2019 | Sriram |

ಕಾರ್ಕಳ: ಮಿಯ್ಯಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಸೂರಾಲು ರಸ್ತೆ ತೀರಾ ಹದಗೆಟ್ಟು ಸಂಚಾರಕ್ಕೆ ದುಸ್ತರವಾಗಿದೆ. ಕರಿಯಕಲ್ಲುವಿನಿಂದ ಸೂರಾಲು ಸಂಪರ್ಕಿಸುವ ಸುಮಾರು 3 ಕಿ.ಮೀ. ಜಿ.ಪಂ. ರಸ್ತೆ ಹೊಂಡಗುಂಡಿಗಳಿಂದ ತುಂಬಿದೆ.

Advertisement

ಸೂರಾಲು ಗುಂಡಾಜೆ ಶಾಲೆ, ಅಂಗನವಾಡಿ ಕೇಂದ್ರ ಸಂಪರ್ಕಿಸಲು ಇದೇ ಮಾರ್ಗವನ್ನು ಅಲವಂಬಿಸಬೇಕಿದೆ. ಮಿಯ್ನಾರು ಹಾಗೂ ಸಾಣೂರು ಗ್ರಾಮದ ಸುಮಾರು 250 ಮನೆಗಳು ಈ ಭಾಗದಲ್ಲಿದ್ದು, ರಸ್ತೆ ಹದಗೆಟ್ಟ ಕಾರಣ ಸಂಚಾರಕ್ಕೆ ತ್ರಾಸಪಡುವಂತಾಗಿದೆ. ಗೇರುಬೀಜ ಕಾರ್ಖಾನೆ, ವಾಟರ್‌ ಪಾರ್ಕ್‌ ಇದೇ ಪರಿಸರದಲ್ಲಿರುವ ಕಾರಣ ನಿತ್ಯ ನೂರಾರು ಮಂದಿ ಕಾರ್ಮಿಕರು, ಪ್ರವಾಸಿಗರು ಈ ರಸ್ತೆಯ ಮೂಲಕವೇ ಸಾಗುತ್ತಾರೆ.

ಮನವಿಗೆ ಸ್ಪಂದನೆಯಿಲ್ಲ
ರಸ್ತೆ ಅಭಿವೃದ್ಧಿಪಡಿಸುವಂತೆ ಸ್ಥಳೀಯರು ಗ್ರಾಮ ಪಂಚಾಯತ್‌, ಶಾಸಕರು, ಸಚಿವರಿಗೆ ಮನವಿ ನೀಡಿದ್ದಾರೆ. ಆದರೂ ರಸ್ತೆ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಗೊಂಡಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

ರಸ್ತೆ ಮೇಲ್ದರ್ಜೆಗೆ ?
ಕರಿಯಕಲ್ಲು -ಸೂರಾಲು ರಸ್ತೆಯನ್ನು ಲೋಕೋಪಯೋಗಿ ರಸ್ತೆಯನ್ನಾಗಿ ಮೇಲ್ದೆರ್ಜೆಗೇರಿಸುವ ನಿಟ್ಟಿನಲ್ಲಿ ಒಂದೂವರೆ ವರ್ಷಗಳ ಹಿಂದೆ ಪಿಡಬ್ಲ್ಯುಡಿ ಕೇಂದ್ರ ಕಚೇರಿಗೆ ಪ್ರಸ್ತಾವನೆ ಕಳಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್‌ ಸೋಮಶೇಖರ್‌ ಹೇಳಿದ್ದಾರೆ.

ಸೂರಾಲುವಿನಿಂದ ಇದೇ ರಸ್ತೆಯಲ್ಲಿ ಮುಂದೆ ಸಾಗಿದಲ್ಲಿ ಇರ್ವತ್ತೂರು ಸಂಪರ್ಕಿಸುತ್ತದೆ. ಕೇವಲ 5 ಕಿ.ಮೀ. ಸಾಗಿದರೆ ಇರ್ವತ್ತೂರು ತಲುಪುವುದಾದರೂ ಈಗಿರುವ ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲ. ಈ ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕು ಎನ್ನುವ ಬೇಡಿಕೆಯೂ ಸಾರ್ವಜನಿಕರದ್ದು.

Advertisement

ಸೂರಾಲು ರಸ್ತೆಗೆ 2 ಕೋಟಿ ರೂ.
ಕಾರ್ಕಳದ 48 ರಸ್ತೆಗಳಿಗೆ ಕೇಂದ್ರ ರಸ್ತೆ ನಿಧಿ (ಸಿಆರ್‌ಎಫ್)ನಿಂದ 108 ಕೋಟಿ ರೂ. ಎರಡನೇ ಹಂತದಲ್ಲಿ ಬಿಡುಗಡೆಗೊಂಡಿದೆ. ಇದರಲ್ಲಿ 2 ಕೋಟಿ ರೂ. ಸೂರಾಲು ರಸ್ತೆಗೆ ಒದಗಿಸಲಾಗಿದೆ. ಕಳೆದ ಒಂದೂವರೆ ವರ್ಷಗಳಿಂದ ರಾಜ್ಯ ಸರಕಾರ ಟೆಂಡರ್‌ ಪ್ರಕ್ರಿಯೆ ನಡೆಸದ ಕಾರಣ ಕೇಂದ್ರದಿಂದ ಅನುದಾನ ಬಿಡುಗಡೆಗೊಂಡಿದ್ದರೂ ಕಾಮಗಾರಿ ಪ್ರಾರಂಭಿಸುವಲ್ಲಿ ವಿಳಂಬವಾಗುತ್ತಿದೆ.
-ಸುನಿಲ್ ಕುಮಾರ್‌, ಶಾಸಕರು, ಕಾರ್ಕಳ

ಮನವಿ ಮಾಡಿದ್ದೆವು
ಕ್ಷೇತ್ರದ ಶಾಸಕರು ಮಿಯ್ಯಾರು ಗ್ರಾ.ಪಂ. ಪಂಚಾಯತ್‌ಗೆ ಭೇಟಿ ನೀಡಿದ ಸಂದರ್ಭ ರಸ್ತೆ ಡಾಮರೀಕರಣಕ್ಕಾಗಿ ಅನುದಾನ ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದೆವು. ಸಿಆರ್‌ಎಎಫ್ ಯೋಜನೆಯಡಿ ಅನುದಾನ ಬಿಡುಗಡೆಗೊಳಿಸುವ ಭರವಸೆ ನೀಡಿದ್ದರು. –ತಾರಾನಾಥ ಕೋಟ್ಯಾನ್‌, ಸದಸ್ಯರು, ಗ್ರಾ.ಪಂ. ಮಿಯ್ಯಾರು

ಶಾಸಕರ ಭರವಸೆ
ಜಿಲ್ಲಾ ಪಂಚಾಯತ್‌ ಕರಿಯಕಲ್ಲು-ಸೂರಾಲು ರಸ್ತೆ ದುರಸ್ತಿಗಾಗಿ 5 ಲಕ್ಷ ಅನುದಾನ ಮೀಸಲಿಡಲಾಗಿದೆ. ಎರಡು ವರ್ಷಗಳ ಹಿಂದೆಯೂ ತಾತ್ಕಾಲಿಕವಾಗಿ ರಸ್ತೆ ದುರಸ್ತಿಪಡಿಸಲಾಗಿದ್ದರೂ ಘನ ವಾಹನಗಳ ಸಂಚಾರದಿಂದಾಗಿ ಹದಗೆಟ್ಟು ಹೋಗಿದೆ. ರಸ್ತೆ ಮರುಡಾಮರೀಕರಣಕ್ಕಾಗಿ ಶಾಸಕರು ಅನುದಾನ ಒದಗಿಸಿಕೊಡುವ ಭರವಸೆ ನೀಡಿದ್ದಾರೆ.
-ದಿವ್ಯಾಶ್ರೀ ಗಿರೀಶ್‌ ಅಮೀನ್‌, ಜಿ.ಪಂ. ಸದಸ್ಯರು-ಮಿಯ್ಯಾರು ಕ್ಷೇತ್ರ

-ರಾಮಚಂದ್ರ ಬರೆಪ್ಪಾಡಿ
Advertisement

Udayavani is now on Telegram. Click here to join our channel and stay updated with the latest news.

Next