ಇಂಡಿಯಾನಾ: ಅಮೆರಿಕದಲ್ಲಿ ಗನ್ ಹಿಂಸಾಚಾರ ಮುಂದುವರಿದಿದ್ದು, ಮಾಲ್ ವೊಂದರಲ್ಲಿ ನಡೆದ ಶೂಟೌಟ್ ನಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಭಾನುವಾರ (ಜುಲೈ 17) ಇಂಡಿಯಾನಾದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಜಮ್ಮು- ಕಾಶ್ಮೀರದಲ್ಲಿ ಆಕಸ್ಮಿಕವಾಗಿ ಗ್ರೆನೇಡ್ ಸ್ಫೋಟ: ಇಬ್ಬರು ಸೇನಾಧಿಕಾರಿಗಳು ಬಲಿ
ಗ್ರೀನ್ ವುಡ್ ಪಾರ್ಕ್ ಮಾಲ್ ನಲ್ಲಿ ಏಕಾಏಕಿ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಗೆ ಮೂವರು ಸಾವನ್ನಪ್ಪಿರುವುದಾಗಿ ಗ್ರೀನ್ ವುಡ್ ಮೇಯರ್ ಮಾರ್ಕ್ ಮೈಯರ್ಸ್ ತಿಳಿಸಿದ್ದಾರೆ.
ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಶಸ್ತ್ರಾಸ್ತ್ರಧಾರಿ ನಾಗರಿಕರ ಗುಂಡಿನ ದಾಳಿಯಲ್ಲಿ ಶೂಟರ್ ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.
ಶೂಟೌಟ್ ಗೆ ಸಂಬಂಧಪಟ್ಟ ಮಾಹಿತಿಯನ್ನು ಸಾರ್ವಜನಿಕರು ಇಲಾಖೆ ಜೊತೆ ಹಂಚಿಕೊಳ್ಳಬೇಕೆಂದು ಗ್ರೀನ್ ವುಡ್ ಪೊಲೀಸರು ಫೇಸ್ ಬುಕ್ ಖಾತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅಮೆರಿಕದಲ್ಲಿ ಇತ್ತೀಚೆಗೆ ಶೂಟೌಟ್ ಸಂಸ್ಕೃತಿ ಹೆಚ್ಚಳವಾಗುತ್ತಿದ್ದು, ಒಂದು ವರ್ಷದಲ್ಲಿ ಶೂಟೌಟ್ ನಲ್ಲಿ 40,000 ಮಂದಿ ಸಾವಿಗೀಡುತ್ತಾರೆ ಎಂದು ವರದಿ ತಿಳಿಸಿದೆ.