Advertisement

ಮಳೆಗೆ 3 ಬಲಿ; ಮುಳುಗಿದ ಶೃಂಗೇರಿಯ ಕಪ್ಪೆ ಶಂಕರ

06:45 AM Jun 10, 2018 | Team Udayavani |

ಬೆಂಗಳೂರು: ಕೊಡಗು, ಮಲೆನಾಡು, ಕರಾವಳಿ ಸೇರಿದಂತೆ ರಾಜ್ಯದಲ್ಲಿ ಮುಂಗಾರು ಅಬ್ಬರಿಸುತ್ತಿದ್ದು,
ಸಿಡಿಲಬ್ಬರದ ಮಳೆಗೆ ಮೂವರು ಬಲಿಯಾಗಿದ್ದಾರೆ. ಚಿಕ್ಕಮಗಳೂರಿನ ಕಗ್ಗನಾಳದಲ್ಲಿ ಮನೆ ಮೇಲೆ ಮರ
ಬಿದ್ದು ಮೂವರು ಗಾಯಗೊಂಡಿದ್ದಾರೆ. ನೇತ್ರಾವತಿ, ಕುಮಾರಧಾರಾ, ಅಘನಾಶಿನಿ, ತುಂಗಾ, ಭದ್ರಾ ಸೇರಿದಂತೆ ರಾಜ್ಯದ ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ಏರುತ್ತಿದೆ.

Advertisement

ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಹಳೆಯ ಕಾರುಗಳ ಸರದಾರನೆಂದೇ ಖ್ಯಾತಿ ಪಡೆದಿದ್ದ ಸಿದ್ದಾಪುರದ ರೈತ, ಪಿ.ಸಿ.ಅಹಮ್ಮದ್‌ ಕುಟ್ಟಿ ಹಾಜಿ (68) ಅವರು ಮರದ ಕೊಂಬೆ ಬಿದ್ದು ಮೃತಪಟ್ಟಿದ್ದಾರೆ. ಅವರ ತೋಟದಲ್ಲಿ ಮರವೊಂದು ಬಿದ್ದಿದ್ದು, ಅದನ್ನು ವೀಕ್ಷಿಸಲೆಂದು ಶನಿವಾರ ಬೆಳಗ್ಗೆ ತೋಟಕ್ಕೆ ತೆರಳಿದ್ದರು. ಈ ಸಂದರ್ಭ ಮರದ ಕೊಂಬೆ ಅವರ ಮೆಲೆ ಬಿದ್ದು, ಸ್ಥಳದಲ್ಲಿಯೇ ಅಸುನೀಗಿದರು.

ಮಳೆಗೆ ಮರಬಿದ್ದು ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಕಳಲೆ ಗ್ರಾಮದಲ್ಲಿ ಪುಟ್ಟಯ್ಯ (60) ಎಂಬುವರು ಮೃತಪಟ್ಟಿದ್ದಾರೆ. ಶನಿವಾರ ಬೆಳಗ್ಗೆ ಸ್ನೇಹಿತನ ಮನೆಗೆ ಹೊರಟಿದ್ದಾಗ ದಾರಿಯಲ್ಲಿ ಮರ ಬಿದ್ದು ಅಸುನೀಗಿದರು.

ಕರಾವಳಿಯಲ್ಲಿಯೂ ಧಾರಾಕಾರ ಮಳೆಯಾಗುತ್ತಿದ್ದು, ಬೆಳ್ತಂಗಡಿ ತಾಲೂಕಿನ ಶಿರ್ಲಾಲಿನಲ್ಲಿ ಬಟ್ಟೆ ಒಗೆಯಲು ನದಿಗೆ ತೆರಳಿದ್ದ ಆನೆಕೊಡಂಗೆ ನಿವಾಸಿ ರೇವತಿ (60) ಎಂಬುವರು ನೆರೆ ನೀರಲ್ಲಿ ಕೊಚ್ಚಿಹೋಗಿದ್ದಾರೆ. ಫ‌ಲ್ಗುಣಿ ನದಿಯ ಬೈರವಗುಂಡಿ ಬಳಿ ತೆರಳಿದ್ದ ಅವರು, ನೀರಿಗೆ ಇಳಿದಿದ್ದರು. ಮಳೆಯಿಂದಾಗಿ ನದಿಯಲ್ಲಿ ನೀರಿನ ಸೆಳೆತ ಜಾಸ್ತಿಯಿದ್ದು, ನೀರಿನ ರಭಸಕ್ಕೆ ಕೊಚ್ಚಿಹೋಗಿ ಸ್ಪಲ್ಪ ದೂರದಲ್ಲೇ ಇರುವ ಪೊದೆಯಲ್ಲಿ ಸಿಲುಕಿ ಕೊಂಡಿದ್ದರು.

ಇದನ್ನು ಗಮನಿಸಿದ ದಾರಿಹೋಕರು ಆಸ್ಪತ್ರೆಗೆ ದಾಖಲಿಸಿದರಾದರೂ, ಅಷ್ಟರಲ್ಲಾಗಲೇ ಕೊನೆಯುಸಿರೆಳೆ
ದಿದ್ದರು. ಇದೇ ವೇಳೆ, ಪ್ರತಿಕೂಲ ಹವಾಮಾನದಿಂದಾಗಿ ಅರಬ್ಬಿ ಸಮುದ್ರದಲ್ಲಿ ಅಪಾಯದಲ್ಲಿ ಸಿಲುಕಿದ್ದ ತಮಿಳುನಾಡು ಮೂಲದ 10 ಮೀನುಗಾರರನ್ನು ಕರಾವಳಿ ತಟ ರಕ್ಷಣಾ ಪಡೆಯವರು ಶನಿವಾರ ರಕ್ಷಿಸಿದ್ದಾರೆ.

Advertisement

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಬ್ಬರ ಶನಿವಾರವೂ ಮುಂದುವರಿದಿದ್ದು, ಮೂಡಿಗೆರೆ ತಾಲೂಕು
ಕಳಸ ಸಮೀಪದ ಕಗ್ಗನಾಳದ ಪಡೀಲ್‌ ಎಂಬಲ್ಲಿ ಮನೆಯೊಂದರ ಮೇಲೆ ಮರ ಉರುಳಿ ಬಿದ್ದು, ಐದು ವರ್ಷದ ಮಗು ಸೇರಿದಂತೆ ಮೂವರಿಗೆ ಗಾಯಗಳಾಗಿವೆ. ಗಾಳಿ-ಮಳೆಗೆ ಪ್ರಸಾದ್‌ ಎಂಬುವರ ಮನೆ ಮೇಲೆ ಮರ ಬಿದ್ದಿದ್ದು, ಮನೆಯಲ್ಲಿದ್ದ ಪ್ರಸಾದ್‌, ಅವರ ಪತ್ನಿ ಪವಿತ್ರಾ ಹಾಗೂ ಮಗು ಪ್ರಜ್ಞಾ ಗಾಯಗೊಂಡಿದ್ದಾರೆ.

ಜಿಲ್ಲೆಯ ಪ್ರಮುಖ ನದಿಗಳಾದ ತುಂಗಾ, ಭದ್ರಾಗಳಲ್ಲಿ ನೀರಿನ ಹರಿವು ಹೆಚ್ಚಿದ್ದು, ಶೃಂಗೇರಿ ಮಠದ ಕಪ್ಪೆ
ಶಂಕರ ನೀರಿನಲ್ಲಿ ಮುಳುಗಿದೆ. ಕೈಮನೆ ಸಮೀಪ ಮರ ಬಿದ್ದು, ಶೃಂಗೇರಿ-ಆಗುಂಬೆ ರಸ್ತೆ ಸಂಚಾರ ಕೆಲಕಾಲ
ಸ್ಥಗಿತಗೊಂಡಿತ್ತು.ಇದೇ ವೇಳೆ, ಬಳ್ಳಾರಿ, ಬಾಗಲಕೋಟೆ, ಹಾಸನ, ಮಂಡ್ಯ, ಶಿರಸಿ, ಸಾಗರ, ಬೆಳಗಾವಿ ಸೇರಿದಂತೆ ರಾಜ್ಯದ ಇತರೆಡೆಯೂ ಮಳೆಯಾದ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next