ಬೆಂಗಳೂರು: ಮೋಜಿನ ಜೀವನಕ್ಕಾಗಿ ಸರ ಕಳವು ಮತ್ತು ಮನೆಗಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿಜಯಸಿಂಹ (41), ಸೈಯದ್ ಮುಸ್‌ದ್ದೀಕ್(25), ಶಾರೂಕ್‌ಖಾನ್(24), ಮಹಮದ್ ಸಲೀಮ್(25) ಬಂಧಿತರು.ಆರೋಪಿಗಳಿಂದ 23 ಲಕ್ಷ ಮೌಲ್ಯದ ಚಿನ್ನಾಭರಣಗಳು ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೀಗ ಹಾಕಿದ ಮನೆಗಳನ್ನು ಗುರುತು ಮಾಡಿಕೊಂಡು ಮನೆಗಳವು ಮಾಡುತ್ತಿದ್ದ ವಿದ್ಯಾಮಾನ್ಯನಗರ ನಿವಾಸಿ ವಿಜಯಸಿಂಹ, ಕಳವು ಮಾಡಿದ ಚಿನ್ನಾಭರಣಗಳನ್ನು ಗಿರವಿ ಅಂಗಡಿಗಳಲ್ಲಿ ಅಡಮಾನ ಇಡುತ್ತಿದ್ದ. ಇದೇ ಹಣದಿಂದ ಮೋಜಿನ ಜೀವನ ನಡೆಸುತ್ತಿದ್ದ. ಈತನ ಮೇಲೆ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು.
ಆರೋಪಿ ಬಂಧನಕ್ಕಾಗಿ ವಿಶೇಷ ತಂಡ ರಚಿಸಲಾಗಿತ್ತು. ಕೃತ್ಯ ನಡೆದ ಸ್ಥಳದಲ್ಲಿ ದೊರೆತ ಬೆರಳು ಮುದ್ರೆಗಳ ಆಧಾರದ ಮೇಲೆ ಆರೋಪಿಯನ್ನು ಮಾಗಡಿ ರಸ್ತೆ ಬ್ಯಾಡರಹಳ್ಳಿ ಸಮೀಪ ಬಂಧಿಸಲಾಗಿದೆ. ಈತನಿಂದ 16.5 ಲಕ್ಷ ಮೌಲ್ಯದ 3 ಕೆ.ಜಿ. ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಈ ಮೂಲಕ ವಿಜಯನಗರ, ಬಸವೇಶ್ವರನಗರ, ವೈಯಾಲಿಕಾವಲ್, ಹನುಮಂತನಗರ, ಚೆನ್ನಮ್ಮನ ಅಚ್ಚುಕಟ್ಟು, ಬಸವನಗುಡಿ, ಕಲಾಸಿಪಾಳ್ಯ ಸೇರಿ 14 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣಗಳು ಪತ್ತೆಯಾಗಿವೆ ಎಂದು ಡಿಸಿಪಿ ಅನುಚೇತ್ ತಿಳಿಸಿದರು.
ಸರಗಳ್ಳರ ಸೆರೆ: ಮತ್ತೂಂದು ಪ್ರಕರಣದಲ್ಲಿ ಸರಗಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ ಮೂವರು ದುಷ್ಕರ್ಮಿಗಳನ್ನು ಬಂಧಿಸಿ 6 ಲಕ್ಷ ರೂ.ಮೌಲ್ಯದ 260 ಗ್ರಾಂ ಚಿನ್ನಾಭರಣ ಮತ್ತು ವಾಹನ ವಶಕ್ಕೆ ಪಡೆಯಲಾಗಿದೆ. ಸೈಯದ್ ಮುಸ್‌ದ್ದೀಕ್ (25), ಶಾರುಖ್ ಖಾನ್ (24), ಮಹಮದ್ ಸಲೀಂ (25) ಬಂಧಿತರು. ಆ.8ರಂದು ಒಂದೇ ಬೈಕಿನಲ್ಲಿ ಬಂದ ಆರೋಪಿಗಳು, ವಿಜಯನಗರ ಕ್ಲಬ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಸರ ಕಿತ್ತುಕೊಳ್ಳಲು ಯತ್ನಿಸಿದ್ದರು.
ಆದರೆ ಮಹಿಳೆ ಸರವನ್ನು ಬಿಗಿಯಾಗಿ ಹಿಡಿದು ಕೂಗಿಕೊಂಡಾಗ ಸ್ಥಳೀಯರು ಆರೋಪಿಗಳನ್ನು ಹಿಡಿದು ಥಳಿಸಿದ್ದರು. ಬಳಿಕ ಆರೋಪಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದರು. ಈ ಸಂಬಂಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ಆರೋಪಿಗಳು ಕಾಟನ್ ಪೇಟೆ, ಎಸ್.ಆರ್.ನಗರ, ಅಶೋಕ್‌ನಗರ, ಬೊಮ್ಮನಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳವು-ಸುಲಿಗೆ ಪ್ರಕರಣದಲ್ಲಿ ಜೈಲು ಸೇರಿದ್ದರು. ಜಾಮೀನಿನ ಮೇಲೆ ಹೊರಬಂದು ಮತ್ತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರು.