ಉತ್ತರಾಖಂಡ್: ಭಾರೀ ಮೇಘಸ್ಫೋಟದಿಂದ ಸಂಭವಿಸಿದ ಪ್ರವಾಹಕ್ಕೆ ಮನೆಯೊಂದು ಕುಸಿದು ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿದ್ದು, ನಾಲ್ವರು ನಾಪತ್ತೆಯಾಗಿರುವ ಘಟನೆ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಮಾಂಡೋ ಗ್ರಾಮದಲ್ಲಿ ಸೋಮವಾರ ನಸುಕಿನ ವೇಳೆ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಶೋಪಿಯಾನ್: ಭದ್ರತಾ ಪಡೆಯ ಎನ್ ಕೌಂಟರ್ ನಲ್ಲಿ ಲಷ್ಕರ್ ಕಮಾಂಡರ್ ಸೇರಿ ಇಬ್ಬರ ಹತ್ಯೆ
ಉತ್ತರಕಾಶಿಯ ಮಾಂಡೋ ಗ್ರಾಮದಲ್ಲಿ ಸಂಭವಿಸಿದ ಮೇಘಸ್ಫೋಟದ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ನಾಲ್ವರು ನಾಪತ್ತೆಯಾಗಿರುವ ಘಟನೆ ನಡೆದಿದೆ ಎಂದು ಎಸ್ ಡಿಆರ್ ಎಫ್ ಇನ್ಸ್ ಪೆಕ್ಟರ್ ಜಗದಾಂಬಾ ಪ್ರಸಾದ್ ತಿಳಿಸಿದ್ದಾರೆ.
ಎಎನ್ ಐ ವರದಿ ಪ್ರಕಾರ, ಮೃತರನ್ನು ಮಾಧುರಿ (42ವರ್ಷ), ರೀತು (38ವರ್ಷ) ಹಾಗೂ ಆರು ವರ್ಷದ ಮಗು ಐಶು ಎಂದು ಗುರುತಿಸಲಾಗಿದೆ ಎಂದು ತಿಳಿಸಿದೆ. ಮೇಘಸ್ಫೋಟದಿಂದ ಭಾರೀ ಮಳೆಯಾಗಿದ್ದು, ಮಾಂಡೋ ಗ್ರಾಮದಲ್ಲಿನ ನೂರಾರು ಮನೆಗಳು ಜಲಾವೃತಗೊಂಡಿದ್ದು, ಕೆಲವು ಮನೆಗಳು ಕುಸಿದು ಬಿದ್ದಿರುವುದಾಗಿ ವರದಿ ವಿವರಿಸಿದೆ.
ಹಿಮಾಚಲ ಪ್ರದೇಶ, ಉತ್ತರಾಖಂಡ್, ಪಶ್ಚಿಮ ಉತ್ತರಪ್ರದೇಶ, ವಾಯುವ್ಯ ಮಧ್ಯಪ್ರದೇಶ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಕಳೆದ ವಾರ ಮುನ್ನೆಚ್ಚರಿಕೆ ನೀಡಿತ್ತು.