ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕಿನಿಂದ ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಶವ ಸಂಸ್ಕಾರ ಮತ್ತು ಶವ ಸಾಗಾಣೆಯಲ್ಲಿ ಖಾಸಗಿ ಆಸ್ಪತ್ರೆಗಳ ಕರಾಳ ಮುಖ ಅನಾವರಣ ಆಗುತ್ತಿದೆ.
2 ದಿನಗಳ ಹಿಂದಷ್ಟೇ ಒಂದೇ ಆ್ಯಂಬುಲೆನ್ಸ್‌ನಲ್ಲಿ ಎರಡು ಶವಗಳನ್ನು ಸಾಗಿಸಿದ್ದು, ವಿರೋಧಕ್ಕೆ ಕಾರಣವಾಗಿತ್ತು. ಇದೀಗ ಖಾಸಗಿ ಆಸ್ಪತ್ರೆಗಳು ಒಂದೇ ಆ್ಯಂಬುಲೆನ್ಸ್‌ನಲ್ಲಿ ಮೂರು ಶವಗಳನ್ನು ಸಾಗಿಸಿದೆ. ಅಲ್ಲದೆ, ಶವಗಳನ್ನು ಸಮರ್ಪಕವಾಗಿ ಮುಚ್ಚದೆ ನಿರ್ಲಕ್ಷ್ಯ ವಹಿಸುತ್ತಿರುವ ಆರೋಪ ಕೇಳಿಬಂದಿದೆ.
ನಗರದ ಕೆಂಗೇರಿ ವಿದ್ಯುತ್ ಚಿತಾಗಾರಕ್ಕೆ ಖಾಸಗಿ ಆಸ್ಪತ್ರೆಯೊಂದರ ಒಂದೇ ಆ್ಯಂಬುಲೆನ್ಸ್‌ನಲ್ಲಿ ಏಕಕಾಲಕ್ಕೆ ಮೂರು ಶವಗಳನ್ನು ಸಾಗಿಸಿದ್ದಾರೆ ಎಂದು ಹೆಸರು ಹೇಳಲು ಇಚ್ಛಿದಸದ ಕೆಂಗೇರಿ ವಿದ್ಯುತ್ ಚಿತಾಗಾರದ ಸಿಬ್ಬಂದಿಯೊಬ್ಬರು ತಿಳಿಸಿದರು. ಸುರಕ್ಷತಾ ಸಾಧನ ಇನ್ನೂ ನೀಡಿಲ್ಲ: ಕೊರೊನಾ ಶವ ಸಂಸ್ಕಾರಕ್ಕೆ ಪಾಲಿಕೆಯಿಂದ ಏಳು ವಿದ್ಯುತ್ ಚಿತಾಗಾರ ಮೀಸಲಿಡಲಾಗಿದೆ. ಆದರೆ, ಇಲ್ಲಿನ ಸಿಬ್ಬಂದಿಗೆ ಸ್ಯಾನಿಟೈಸರ್ ವ್ಯವಸ್ಥೆ ಹಾಗೂ ಪಿಪಿಇ ಕಿಟ್ ನೀಡುತ್ತೇವೆ ಎಂದು ಹೇಳಿದ್ದರು. ಆದರೆ, ಇಲ್ಲಿಯವರೆಗೆ ಯಾವುದೇ ಸುರಕ್ಷತಾ ಸಾಧನ ನೀಡಿಲ್ಲ ಎಂದು ಚಿತಾಗಾರದ ಸಿಬ್ಬಂದಿಯೊಬ್ಬರು ಆರೋಪಿಸಿದ್ದಾರೆ.
ಹೊರೆ ಹೆಚ್ಚಾಗುತ್ತಿದೆ: ನಗರದಲ್ಲಿ ಕೊರೊನಾ ಸೋಂಕಿನಿಂದ ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕೆಲಸದ ಹೊರೆ ಹೆಚ್ಚಾಗಿದೆ. ಒಂದೊಂದು ಚಿತಾಗಾರದಲ್ಲಿ ದಿನಕ್ಕೆ 20ರಿಂದ 25 ಶವಗಳನ್ನು ದಹಿಸಲಾಗುತ್ತಿದೆ. ಬೆಳಗ್ಗೆ 4ಕ್ಕೆ ಮನೆ ಬಿಡುವ ಚಿತಾಗಾರ ಸಿಬ್ಬಂದಿ, ರಾತ್ರಿ 12ರ ನಂತರ ಮನೆ ಸೇರುತ್ತಿದ್ದಾರೆ ಎಂದು ಕೆಂಗೇರಿ ಚಿತಾಗಾರದಲ್ಲಿ ಕಾರ್ಯನಿರ್ವಹಿಸುವ ಕೃಷ್ಣಮೂರ್ತಿ ತಿಳಿಸಿದರು. ನಗರದ ಬಹುತೇಕ ಖಾಸಗಿ ಆಸ್ಪತ್ರೆಗಳೂ ಕೊರೊನಾ ಸೋಂಕಿನಿಂದ ಮೃತಪಟ್ಟವರ ಶವಗಳನ್ನು ಸರಿಯಾಗಿ ಪ್ಯಾಕ್ ಮಾಡುತ್ತಿಲ್ಲ. ಬಿಳಿ ಬಟ್ಟೆಯಲ್ಲೋ, ಪೇಪರ್
ನಲ್ಲೋ ಸುತ್ತಿ ಕಳುಹಿಸುತ್ತಿದ್ದಾರೆ. ಸುರಕ್ಷತಾ ಸಾಧನ ಬಳಸುತ್ತಿಲ್ಲ ಎಂದು ಆರೋಪಿಸಿದರು.
ಶವಾಗಾರಗಳಲ್ಲಿ ಹೆಚ್ಚಿದ ಜನ ಸಂಖ್ಯೆ: ಶವ ಸಂಸ್ಕಾರ ಹೆಚ್ಚು ಜನ ಸೇರುತ್ತಿರುವ ಹಿನ್ನೆಲೆ ನಿಯಮ ಉಲ್ಲಂಘನೆಯಾಗುತ್ತಿದೆ. ಚಿತಾಗಾರಕ್ಕೆ ಬಂದ ಎಲ್ಲ ಶವಗಳ ಸಂಸ್ಕಾರ ಮುಗಿಸಿ ಮನೆ ತಲುಪುವಷ್ಟರಲ್ಲಿ ಮಧ್ಯರಾತ್ರಿ ಆಗುತ್ತದೆ. ಆದರೆ, ನಮಗೆ ಗುರು ತಿನ ಚೀಟಿ ಇಲ್ಲದೆ ಇರುವುದು ಸಮಸ್ಯೆ ಆಗಿದೆ. ಕಳೆದಬಾರಿಯೂ ಇದೇ ಸಮಸ್ಯೆಯಾಗಿತ್ತು ಎಂದು ಸಿಬ್ಬಂದಿ ದೂರಿದರು.