ಭೋಪಾಲ್: ಮಕ್ಕಳನ್ನು ಹಿಡಿಯುವ ಕಳ್ಳರು ಎಂದು ತಪ್ಪಾಗಿ ಭಾವಿಸಿ ಮೂವರು ಕಾಂಗ್ರೆಸ್ ಮುಖಂಡರ ಮೇಲೆ ಹಲ್ಲೆ ನಡೆಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ನವಾಲ್ ಸಿನ್ ಗ್ರಾಮದಲ್ಲಿ ಗ್ಯಾಂಗ್ ವೊಂದು ಮಕ್ಕಳನ್ನು ಕಿಡ್ನಾಪ್ ಮಾಡಿಕೊಂಡು ಹೋಗಿದ್ದಾರೆಂಬ ವದಂತಿ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಗುಂಪೊಂದು ಗುರುವಾರ ರಾತ್ರಿ ರಸ್ತೆಯ ಮೇಲೆ ಮರವನ್ನು ಕಡಿದು ಹಾಕಿ ಸಂಚಾರ ಬಂದ್ ಮಾಡಿದ್ದರು.
ಈ ಸಂದರ್ಭದಲ್ಲಿ ಕಾರಿನಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಧರ್ಮೇಂದ್ರ ಶುಕ್ಲಾ, ಧರ್ಮು ಸಿಂಗ್ ಲಾಂಜಿವರ್ ಮತ್ತು ಲಲಿತ್ ಬಾರಸ್ಕರ್ ತೆರಳುತ್ತಿದ್ದರು. ರಸ್ತೆ ಮಧ್ಯೆ ಮರ ಕಡಿದು ಹಾಕಿದ್ದನ್ನು ಗಮನಿಸಿ, ಯಾರೋ ಹೆದ್ದಾರಿ ದರೋಡೆಕೋರರು ಸಂಚು ನಡೆಸುತ್ತಿದ್ದಾರೆಂದು ಭಾವಿಸಿ ಕಾರನ್ನು ನಿಲ್ಲಿಸದೇ(ಕಿರಿದಾದ ಸ್ಥಳದಲ್ಲಿಯೇ) ಮುಂದೆ ಹೋಗಿದ್ದರು.
ಇವರು ಮಕ್ಕಳ ಕಳ್ಳರು ಎಂದು ಶಂಕಿಸಿದ ಗ್ರಾಮಸ್ಥರು ಕಾರನ್ನು ಹಿಂಬಾಲಿಸಿಕೊಂಡು ಹೋಗಿ ತಡೆದು, ಕಾರನ್ನು ಜಖಂಗೊಳಿಸಿ, ಕಾರಿನಲ್ಲಿದ್ದ ಮೂವರು ಕಾಂಗ್ರೆಸ್ ಮುಖಂಡರನ್ನು ಹೊರಗೆಳೆದು ಹಲ್ಲೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಬಗ್ಗೆ ಬೆತುಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.
ಕಳೆದ ಕೆಲವು ವಾರಗಳಿಂದ ಮಧ್ಯಪ್ರದೇಶದಾದ್ಯಂತ ಮಕ್ಕಳ ಅಪಹರಣ ನಡೆದಿರುವ ಪ್ರಕರಣ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಶಂಕೆಯಿಂದಾಗಿ ಗುಂಪು ಥಳಿತ ಪ್ರಕರಣ ನಡೆಯುತ್ತಿರುವುದಾಗಿ ವರದಿ ವಿವರಿಸಿದೆ.