ಮಂಗಳೂರು: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಕಂಕನಾಡಿಯಲ್ಲಿ ಏಜೆನ್ಸಿ ನಡೆಸುತ್ತಿದ್ದ ಆಲ್ವಿನ್ ಡಿ’ಮೆಲ್ಲೋ ಎಂಬಾತ 3.5 ಲಕ್ಷ ರೂ. ಪಡೆದು ವಂಚಿಸಿರುವ ಕುರಿತಂತೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಯೊಬ್ಬರು ತನ್ನ ತಂಗಿಗೆ ಕೆಲಸದ ಸಲುವಾಗಿ ಕಳೆದ ಡಿಸೆಂಬರ್ ತಿಂಗಳಲ್ಲಿ ಭೇಟಿಯಾಗಿದ್ದು, ಕೆನಡದಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಡಿ. 28ರಂದು 3.50 ಲಕ್ಷ ರೂ. ಪಡೆದಿದ್ದಾನೆ. ಅನಂತರ ಬೇರೆ ಬೇರೆ ಕಾರಣಕ್ಕೆ ಕೆಲಸ ಕೊಡಿಸದೆ, ಹಣವನ್ನೂ ಹಿಂದಿರುಗಿಸದೆ ವಂಚಿಸಿದ್ದಾನೆ. ಫೋನ್ ಕರೆಯನ್ನೂ ಸ್ವೀಕರಿಸದೇ ಇದ್ದುದರಿಂದ ಮಾ. 2ರಂದು ಆತನ ಕಚೇರಿಗೆ ತೆರಳಿ ವಿಚಾರಿಸಿದಾಗ, ಬೇರೆಯವರನ್ನು ಕೂಡ ಇದೇ ರೀತಿ ವಂಚಿಸಿರುವುದು ತಿಳಿದು ಬಂದಿದೆ. ಮಾ. 3ರಂದು ಮತ್ತೆ ಕಚೇರಿಗೆ ಕರೆ ಮಾಡಿದಾಗ ಮಾ. 3ರಂದು ಚೆಕ್ ಮೂಲಕ ಹಿಂತಿರುಗಿಸುವುದಾಗಿ ತಿಳಿಸಿದ್ದು, ಈ ಬಗ್ಗೆ ಇ -ಮೇಲ್ ಕಳುಹಿಸಿದ್ದ. ಆದರೂ ಹಣ ಕೊಡದೆ ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.