ಕುಣಿಗಲ್: ಕೆರೆ ಅಭಿವೃದ್ಧಿ ಕಾಮಗಾರಿ ನಡೆಸದೆ 1.70 ಲಕ್ಷ ರೂ. ಬಿಲ್ ಡ್ರಾ ಮಾಡಿಕೊಂಡಿರುವ ಪಿಡಿಒ ಹಾಗೂ ಅಧ್ಯಕ್ಷನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಾಲೂಕಿನ ಕೆ.ಹೊನ್ನಮಾಚನ ಹಳ್ಳಿ ವ್ಯಾಪ್ತಿಯ ಪುಟ್ಟನಪಾಳ್ಯ ಗ್ರಾಮಸ್ಥರು ಆಗ್ರಹಿಸಿದರು.
2019-20ನೆ ಸಾಲಿನಲ್ಲಿ ನರೇಗಾ ಯೋಜನೆಯಡಿ 3.20 ಲಕ್ಷ ರೂ. ವೆಚ್ಚದಲ್ಲಿ ಪುಟ್ಟನಪಾಳ್ಯ ಕೆರೆ ಅಭಿವೃದ್ಧಿ ಕೈಗೊಂಡು ಕಾಮಗಾರಿ ಮಾಡದೆ ಈಗಾಗಲೇ ಪಿಡಿಒ ಕೃಷ್ಣ ಮೂರ್ತಿ, ಗ್ರಾಪಂ ಅಧ್ಯಕ್ಷ ಉಮೇಶ್ ಹಾಗೂ ಎಂಜಿನಿಯರ್ ದೇವೇಗೌಡ 2.30ಲಕ್ಷ ರೂ. ವಂಚಿಸಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮಕೈಗೊಂಡು ಕಾಮಗಾರಿ ಅನುಷ್ಠಾನಗೊಳಿಸ ಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೆಲವರ ಹೆಸರಿಗೆ ಹಣ: ಗ್ರಾಮದ ಮುಖಂಡ ನಾಗರಾಜ್ ಮಾತನಾಡಿ, 2019-20ನೇ ಸಾಲಿನನರೇಗಾ ಯೋಜನೆಯಡಿ ಪುಟ್ಟನಪಾಳ್ಯ ಗ್ರಾಮದ ಕೆರೆ ಅಭಿವೃದ್ಧಿ ಯೋಜನೆಯಡಿ 3.20 ಲಕ್ಷ ರೂ. ಕಾಮಗಾರಿಗೆ ಕ್ರಿಯಾಯೋಜನೆ ರೂಪಿಸಿ ಈ ಪೈಕಿ 2.70 ಲಕ್ಷ ರೂ. ಕೂಲಿ ಹಣ ಹಾಗೂ 50 ಸಾವಿರ ರೂ. ಸಾಮಗ್ರಿ ಹಣ ಎಂದು ನಮೂದಿಸಿ ಕಾಮಗಾರಿಗೆ ಅನುಮೋದನೆ ಪಡೆದಿದ್ದು, ಕೆರೆಯಲ್ಲಿ ಒಂದು ಮಣ್ಣು ತೆಗೆಯದೆ ಗ್ರಾಪಂ ಅಧ್ಯಕ್ಷ, ಪಿಡಿಒ, ನರೇಗಾ ಎಂಜಿನಿಯರ್ ಶಾಮೀಲಾಗಿ 1.70 ಲಕ್ಷರೂ. 8ನೇ ತಿಂಗಳಲ್ಲಿ ಕೂಲಿ ಮಾಡಲಾಗಿದೆ ಎಂದು ಕೆಲವರ ಹೆಸರಿಗೆ ಹಣ ವರ್ಗಾವಣೆ ಮಾಡಿ ಕೊಂಡಿದ್ದಾರೆ ಎಂದು ದೂರಿದ್ದಾರೆ.
ಉಡಾಫೆ ಉತ್ತರ: ಅಕ್ರಮದ ಕುರಿತು ಪಿಡಿಒ ಕೃಷ್ಣಮೂರ್ತಿ ಅವರನ್ನು ಕೇಳಿದರೆ “ಅಚಾತುರ್ಯದಿಂದ ಕೂಲಿ ಹಣ ಹಾಕಲಾಗಿದೆ. ವಾಪಸ್ ತೆಗೆ ಸೋಣ’ ಎನ್ನುತ್ತಾರೆ. ನರೇಗಾ ಎಂಜಿನಿಯರ್ ದಾಸೇಗೌಡರನ್ನು ಕೇಳಿದರೆ “ಏನೋ ಅಗಿದೆ ಬಿಡ್ರಿ ಕೆಲಸ ಮಾಡಿಸೋಣ’ ಎಂಬ ಹಾರಿಕೆ ಉತ್ತರ ನೀಡುತ್ತಾರೆ. ಇದನ್ನು ಖಂಡಿಸಿ ಇಒ, ಎಸಿಬಿಗೆ ದೂರು ನೀಡಿದ್ದರಿಂದ ಗುತ್ತಿಗೆ ಪಡೆದವರು ಜೆಸಿಬಿ ಬಳಸಿ ಕೆಲಸ ಮಾಡಲು ಬಂದಿದ್ದು, ತಡೆದಿದ್ದಕ್ಕೆ ಗ್ರಾಮಸ್ಥರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ ಎಂದು ಹೇಳಿದರು.
ಮೊದಲೇ ತಾಲೂಕಿನಲ್ಲಿ ನರೇಗಾ ಅಕ್ರಮ ಸಾಕಷ್ಟಿದ್ದು, ಈಗಾಗಲೇ ರಾಜ್ಯಮಟ್ಟದ ತಂಡ ತನಿಖೆ ನಡೆಸುತ್ತಿದ್ದರೂ ಕೆಲ ಪ್ರಭಾವಿಗಳು ಹಾಗೂ ಭ್ರಷ್ಟ ಅಧಿಕಾರಿಗಳು ನಿಯಮ ಗಾಳಿಗೆ ತೂರಿ ಯಾವುದೇ ಕಾಮಗಾರಿ ಮಾಡದೆ ಹಣ ಲೂಟಿ ಮಾಡುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಮೇಲಧಿಕಾರಿಗಳು ಗಮನ ಹರಿಸಿ ಕಾಮಗಾರಿ ಮಾಡದೆ ಹಣ ಪಾವತಿ ಮಾಡಿದ ಎಲ್ಲರ ಮೇಲೂ ಪ್ರಕರಣ ದಾಖಲಿಸ ಬೇಕೆಂದು ಒತ್ತಾಯಿಸಿದ್ದಾರೆ, ಗ್ರಾಮಸ್ಥರಾದ ಹರೀಶ್, ಪಿಎಸ್ ನಾಗರಾಜ್ ಇತರರು ಇದ್ದರು.