Advertisement

ಕರಾವಳಿ: ಭವಿಷ್ಯದಲ್ಲಿ 5 ತೀವ್ರತೆಯ ಭೂಕಂಪ ಸಾಧ್ಯತೆ

07:56 AM Jun 29, 2022 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆ ಸಂಧಿಸುವ ಸುಳ್ಯ ತಾಲೂಕಿನ ಗಡಿ ಭಾಗದಲ್ಲಿ ವಾರದ ಅವಧಿಯಲ್ಲಿ ಮೂರು ಬಾರಿ ಸಂಭವಿಸಿದ ಕಡಿಮೆ ತೀವ್ರತೆಯ ಭೂಕಂಪನಗಳು ಕರಾವಳಿಯಲ್ಲಿ ಭೀತಿಗೆ ಕಾರಣವಾಗಿದೆ.

Advertisement

ಭೂಕಂಪ ತಜ್ಞರ ಪ್ರಕಾರ ನಿರಂತರವಾಗಿ ಸೆಸ್ಮಿಕ್‌ (ಭೂಕಂಪನ) ಚಟುವಟಿಕೆ ಗಳು ಹೆಚ್ಚುತ್ತಿರುವುದು ಇದಕ್ಕೆ ಕಾರಣ. ಸುರತ್ಕಲ್‌ ಎನ್‌ಐಟಿಕೆಯಲ್ಲಿ ಈ ಬಗ್ಗೆ ನಡೆಸಿದ ಅಧ್ಯಯನದ ಪ್ರಕಾರ 200 ವರ್ಷಗಳಲ್ಲಿ ಸುಮಾರು 150 ಬಾರಿ 2ರಿಂದ 4 ತೀವ್ರತೆಯ ಕಂಪನ ಉಂಟಾಗಿವೆ.

ಭವಿಷ್ಯದಲ್ಲಿ ಈ ತೀವ್ರತೆ ನಿಧಾನಕ್ಕೆ ಏರುತ್ತ ಹೋಗಿ ರಿಕ್ಟರ್‌ ಮಾಪಕದಲ್ಲಿ 3ರಿಂದ 5ರ ವರೆಗೂ ತಲುಪಬಹುದು. ಆದರೆ 5ರ ಮೇಲೆ ಸಾಧ್ಯತೆ ಕಡಿಮೆ. ಈ ಪ್ರದೇಶದಲ್ಲಿ ಭೂಕಂಪನ ನಿರೋಧಕ ಕಟ್ಟಡಗಳ ನಿರ್ಮಾಣಕ್ಕೆ ನೀಡಿರುವ ಇಂಡಿಯನ್‌ ಸ್ಟಾಂಡರ್ಡ್‌ ಕೋಡ್‌ ಕೂಡ ಬದಲಾವಣೆ ಆಗಬೇಕು. ಈ ಬಗ್ಗೆ ಅಧ್ಯಯನ ಮಾಡಿ 2019ರಲ್ಲಿ ಶಿಫಾರಸು ಮಾಡಲಾಗಿದೆ ಎನ್ನುತ್ತಾರೆ ಭೂಕಂಪನ ಎಂಜಿನಿಯರ್‌ ಶ್ರೇಯಸ್ವಿ ಚಂದ್ರಶೇಖರ್‌. ಸದ್ಯ ಮಂಗಳೂರು ನಗರ ಝೋನ್‌-3ರಲ್ಲಿ ಬರುವ ಕಾರಣ ಐಎಸ್‌18930:2016 ಕಟ್ಟಡ ಮಾನದಂಡವನ್ನು ರೂಪಿಸಲಾಗಿದೆ. ಝೋನ್‌ 3 ಅಂದರೆ ಮಧ್ಯಮ ತೀವ್ರತೆಯ ಭೂಕಂಪನ ಪ್ರದೇಶ.

ಅಧ್ಯಯನದ ಪ್ರಕಾರ ಭೂಗರ್ಭದಲ್ಲಿರುವ ಯುರೇಶಿಯನ್‌ ಪ್ಲೇಟ್‌ ಮತ್ತು ಇಂಡಿಯನ್‌ ಟೆಕ್ಟೋನಿಕ್‌ ಪ್ಲೇಟ್‌ಗಳ ತಿಕ್ಕಾಟದಿಂದ ಇದು ನಡೆಯುತ್ತಿದೆ. ಭೂಗರ್ಭದಲ್ಲಿರುವ ಸ್ತರಭಂಗ (ಫಾಲ್ಟ್)ಗಳ ಕುಸಿತದಿಂ ದಲೂ ಕಂಪನ ಉಂಟಾಗುತ್ತದೆ.

ಜೂ. 25ರಂದು ಸುಳ್ಯ ಭಾಗದಲ್ಲಿ ಕಂಪನದ ತೀವ್ರತೆ 2.75ರಷ್ಟಿದ್ದರೆ ಜೂ. 28ರದ್ದು ಸುಮಾರು 3.0ರಷ್ಟಿತ್ತು. ಭಾರತದಲ್ಲಿ ಭೂಕಂಪನದ ನಕ್ಷೆಯ ಪ್ರಕಾರ ಕರಾವಳಿ ಭಾಗವನ್ನು ಸೆಸ್ಮಿಕ್‌ ಝೋನ್‌-3ರಲ್ಲಿ ಗುರುತಿಸಲಾಗಿದೆ.
ಇದರ ಪ್ರಕಾರ ರಿಕ್ಟರ್‌ ಮಾಪನದಲ್ಲಿ 2ರಿಂದ 4ರ ತೀವ್ರತೆಯ ಕಂಪನಉಂಟಾಗಬಹುದು. ಬಹುತೇಕ ಸಂದರ್ಭ ಇದು ಗಮನಕ್ಕೆ ಬರದಿರುವ ಸಾಧ್ಯತೆ ಹೆಚ್ಚು. ಜನನಿಬಿಡ ಪ್ರದೇಶಗಳಲ್ಲಿ ಉಂಟಾದಾಗ ಅನುಭವಕ್ಕೆ ಬರುವುದು ಜಾಸ್ತಿ.ಕರಾವಳಿ ಮತ್ತು ಪಶ್ಚಿಮ ಘಟ್ಟದ ಲ್ಲಿರುವ ಸ್ತರಭಂಗಗಳಿಂದಾಗಿ ಸಣ್ಣ, ಮಧ್ಯಮ ಕಂಪನ ಉಂಟಾಗುತ್ತವೆ. ಬಹುತೇಕ ಕಂಪನಗಳಿಗೆ ಸಮುದ್ರ ತಳ ವಿಸ್ತರಣೆ ಕೂಡ ಕಾರಣ ಎನ್ನುತ್ತಾರೆ ಶ್ರೇಯಸ್ವಿ.

Advertisement

ಮುಖ್ಯಾಂಶಗಳು
01 ಘಟ್ಟ ಪ್ರದೇಶಗಳಲ್ಲಿ ಅರಣ್ಯ ನಾಶ, ಮೈನಿಂಗ್‌ನಂತಹ ಚಟುವಟಿಕೆ ಗಳಿಂದಾಗಿ ಸ್ತರಭಂಗ ಉಂಟಾಗುವ ಸಾಧ್ಯತೆ ಹೆಚ್ಚು. ಹಿಂದೆ ನೈಸರ್ಗಿಕವಾಗಿ ಭೂಕಂಪ ನಡೆದರೆ ಈಗ ಮನುಷ್ಯನಿಂದಾಗಿಯೂ ಹೆಚ್ಚುವ ಸಾಧ್ಯತೆ ಗಳಿವೆ ಎನ್ನುವುದು ತಜ್ಞರ ಒಕ್ಕೊರಲಿನ ಅಭಿಮತ.
02 ಮಂಗಳೂರು ಮತ್ತು ಸುತ್ತಲಿನ ಪ್ರದೇಶಗಳು ಝೋನ್‌ 3ರಲ್ಲಿ ಇರುವುದರಿಂದ ಭಾರತೀಯ ಹವಾಮಾನ ಇಲಾಖೆ ಕೆಲವು ವರ್ಷಗಳ ಹಿಂದೆ ನವಮಂಗಳೂರು ಬಂದರಿನಲ್ಲಿ ಸೆಸ್ಮಿಕ್‌ ಅಬ್ಸರ್ವೇಟರಿ ಸ್ಥಾಪಿಸಿದೆ.
03 ಮೂಲ್ಕಿ-ಪುಲಿಕಾಟ್‌ ಲೇಕ್‌ ರಿಡ್ಜ್ ಎನ್ನುವುದು ಭೂಗರ್ಭಶಾಸ್ತ್ರಜ್ಞರು ಭೂಕಂಪದಲ್ಲಿ ಬಳಸುವ ಪದಗುತ್ಛ. ಇದರ ಅನ್ವಯ ಪಶ್ಚಿಮದ ಮೂಲ್ಕಿಯಿಂದ ಪೂರ್ವದ ಆಂಧ್ರದಲ್ಲಿ ಬರುವ ಪುಲಿಕಾಟ್‌ ಸರೋವರದ ನೇರ ರೇಖೆ ಎತ್ತರದಲ್ಲಿದೆ. ಇದು ಕೂಡ ಸಣ್ಣ ಪ್ರಮಾಣದ ಭೂಕಂಪನಕ್ಕೆ ಕಾರಣವಾಗುತ್ತದೆ.
04 ತೀವ್ರತೆ 5ರ ಭೂಕಂಪ ನಡೆದರೆ ಅಷ್ಟೊಂದು ಗಟ್ಟಿಯಲ್ಲದ ಕಟ್ಟಡಗಳು ಕುಸಿಯಬಹುದು, ದೃಢ ಕಟ್ಟಡ ಬೀಳದಿದ್ದರೂ ಬಿರುಕು ಬರಬಹುದು. ಹಾಗಾಗಿ ಭೂಕಂಪ ನಿರೋಧಕ ಕಟ್ಟಡಗಳು ಭವಿಷ್ಯದಲ್ಲಿ ಅನಿ ವಾರ್ಯ ಆಗಬಹುದು.

ಮತ್ತೆ ನಡುಗಿದ ಭೂಮಿ
ಮಡಿಕೇರಿ/ಸುಳ್ಯ: ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಗಡಿ ಭಾಗದ ಹಲವೆಡೆ ಮಂಗಳವಾರ ಬೆಳಗ್ಗೆ ಮತ್ತು ಸಂಜೆ ಮತ್ತೆ ಭೂಮಿ ಕಂಪಿಸಿದೆ. ಮೊದಲನೆಯ ಕಂಪನ ಮುಂಜಾನೆ 7.45ರ ಸುಮಾರಿಗೆ ಸಂಭವಿಸಿದ್ದರೆ ಸಂಜೆ 4.32ರ ವೇಳೆಗೆ ಮತ್ತೆ ಕಂಪನ ಉಂಟಾಗಿದೆ. ಕಂಪನದಿಂದಾಗಿ ಮನೆಗಳಲ್ಲಿ ಪಾತ್ರೆಗಳು, ಛಾವಣಿಯ ಶೀಟ್‌, ಪೀಠೊಪಕರಣಗಳು ಅಲುಗಾಡಿದ ಅನುಭವ ವಾಗಿದೆ. ಕೆಲವು ಮನೆಗಳ ಗೋಡೆಗಳಲ್ಲಿ ಬಿರುಕುಗಳು ಮೂಡಿವೆ. ಕೆಲವು ಗ್ರಾಮಗಳಲ್ಲಿ ಭೂಮಿಯೊಳಗಿಂದ ಶಬ್ದ ಕೇಳಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ದೇಶದಲ್ಲಿ ನಾಲ್ಕು ಸೆಸ್ಮಿಕ್‌ ವಲಯಗಳು
ದೇಶದ ಹಿಂದಿನ ಭೂಕಂಪಗಳು, ವಿವಿಧ ವೈಜ್ಞಾನಿಕ ಅಂಶಗಳನ್ನು ಆಧರಿಸಿ ಬ್ಯೂರೋ ಆಫ್‌ ಇಂಡಿಯನ್‌ ಸ್ಟಾಂಡರ್ಡ್ಸ್‌ನವರು ನಾಲ್ಕು ಸೆಸ್ಮಿಕ್‌ ಝೋನ್‌ ಆಗಿ ವಿಂಗಡಿಸಿದ್ದಾರೆ.
ಝೋನ್‌ 2. ಕಡಿಮೆ ತೀವ್ರತೆಯ ಕಂಪನ, ಇಲ್ಲಿ ಯಾವುದೇ ಅಪಾಯ ಇಲ್ಲ.
ಝೋನ್‌ 3: ಮಧ್ಯಮ ತೀವ್ರತೆ 4-6ರ ಕಂಪನ. ಮಂಗಳೂರು ಪ್ರದೇಶ ಇದೇ ವಲಯದಲ್ಲಿ ಬರುತ್ತದೆ. ನಾಶ ನಷ್ಟ ಕಡಿಮೆ, ಕಟ್ಟಡ ಬಿರುಕು ಬಿಡಬಹುದು.
ಝೋನ್‌ 4: ಗಂಭೀರ ತೀವ್ರತೆಯ ವಲಯ. ರಿಕ್ಟರ್‌ನಲ್ಲಿ 7-8ರ ತೀವ್ರತೆ, ನಾಶ ನಷ್ಟ ಇರುತ್ತದೆ, ಕಟ್ಟಡ ಕುಸಿಯಬಹುದು.
ಝೋನ್‌ 5: 8ಕ್ಕಿಂತ ಹೆಚ್ಚಿನ ತೀವ್ರತೆಯ ವಲಯ. ಬಹಳ ಹೆಚ್ಚು ನಾಶ ನಷ್ಟ, ಜೀವ ಹಾನಿಯಾಗುವಷ್ಟು ಗಂಭೀರ, ಹಿಮಾಲಯದ ಭಾಗಗಳು, ಅಂಡಮಾನ್‌, ರಣ್‌ ಆಫ್‌ ಕಚ್‌ ಪ್ರದೇಶದಲ್ಲಿ ಜಾಸ್ತಿ.

ಕೊಡಗು, ಸುಳ್ಯ, ಕಾಸರಗೋಡು ಭಾಗಗಳನ್ನು ಒಳಗೊಂಡ ಪ್ರದೇಶಗಳಲ್ಲಿ ನಿರಂತರವಾಗಿ ಸಣ್ಣ ಪ್ರಮಾಣದ ಭೂಕಂಪನ ವರದಿಯಾಗುತ್ತಲೇ ಇವೆ. ಇದಕ್ಕೆ ಟೆಕ್ಟೋನಿಕ್‌ ಪ್ಲೇಟ್‌ಗಳ ಚಲನೆ ನೈಸರ್ಗಿಕ ಕಾರಣವಾದರೆ ಭೂಮಿಯ ಮೇಲೆ ಸದಾ ಹೆಚ್ಚುತ್ತಿರುವ ಒತ್ತಡ, ಮಾನವನ ಚಟುವಟಿಕೆಗಳು ಪರೋಕ್ಷವಾಗಿ ಪರಿಣಾಮ ಬೀರುತ್ತವೆ.
-ಡಾ| ಗಂಗಾಧರ ಭಟ್‌. ಮಂಗಳೂರು ವಿ.ವಿ. ಸಾಗರ ಭೂವಿಜ್ಞಾನ ವಿಭಾಗದ ನಿವೃತ್ತ ಪ್ರೊಫೆಸರ್‌


-ವೇಣುವಿನೋದ್‌ ಕೆ.ಎಸ್‌.

 

Advertisement

Udayavani is now on Telegram. Click here to join our channel and stay updated with the latest news.

Next