ಮಣಿಪಾಲ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಚಂಡ ಜಯದೊಂದಿಗೆ 135 ಸ್ಥಾನ ಗಳಿಸುವ ಮೂಲಕ ಅಧಿಕಾರದ ಗದ್ದುಗೆ ಏರಿದೆ. ಫಲಿತಾಂಶ ಪ್ರಕಟವಾಗಿ ನಾಲ್ಕು ದಿನಗಳ ನಂತರ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಹಾಗೂ ಡಿಕೆ ಶಿವಕುಮಾರ್ ಅವರೊಬ್ಬರನ್ನು ಮಾತ್ರ ಉಪ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುವ ಮೂಲಕ ಬಿಕ್ಕಟ್ಟಿಗೆ ತೆರೆ ಎಳೆದಿದೆ.
ಇದನ್ನೂ ಓದಿ:Chennai: ರಸ್ತೆಯಲ್ಲಿ ಕೆಟ್ಟುನಿಂತ 535 ಕೋಟಿ ರೂ. ನಗದು ಸಾಗಿಸುತ್ತಿದ್ದ ಆರ್‌ಬಿಐಯ ಟ್ರಕ್
2013ರಿಂದ 2018ರವರೆಗೆ ಸಿದ್ದರಾಮಯ್ಯನವರು ಪೂರ್ಣ ಪ್ರಮಾಣದಲ್ಲಿ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಎರಡನೇ ಬಾರಿಗೆ ಸಿಎಂ ಪಟ್ಟ ಅಲಂಕರಿಸಿದ್ದಾರೆ.
ಸಿದ್ದರಾಮಯ್ಯ ಬಾಲ್ಯ…ಹಿನ್ನಲೆ:
ಮೈಸೂರಿನ ವರುಣಾ ಹೋಬಳಿಯ ಸಿದ್ದರಾಮನಹುಂಡಿಯಲ್ಲಿ 1948ರ ಆಗಸ್ಟ್ 12ರಂದು ಸಿದ್ದರಾಮಯ್ಯ ಜನಿಸಿದ್ದರು. ಇವರ ತಂದೆ ಸಿದ್ದರಾಮೇಗೌಡ, ತಾಯಿ ಬೋರಮ್ಮ. ಇವರದ್ದು ಅವಿಭಕ್ತ ಕುಟುಂಬ. ಸಿದ್ದರಾಮಯ್ಯನವರು ಚಿಕ್ಕಂದಿನಲ್ಲೇ ಜಾನಪದ ನೃತ್ಯ, ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ ನೃತ್ಯಗಳಲ್ಲಿ ಆಸಕ್ತಿ ಹೊಂದಿದ್ದರು. 10ನೇ ವರ್ಷದವರೆಗೆ ಶಾಲೆಗೆ ಹೋಗದ ಸಿದ್ದರಾಮಯ್ಯನವರು ನಂತರ ನೇರವಾಗಿ 5ನೇ ತರಗತಿಗೆ ಪ್ರವೇಶ ಪಡೆದು, ವಿದ್ಯಾಭ್ಯಾಸ ಮುಂದುವರಿಸಿದ್ದರು.
ತಮ್ಮ ಹುಟ್ಟೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ಶಿಕ್ಷಣ ಪಡೆದಿದ್ದ ಸಿದ್ದರಾಮಯ್ಯನವರು, ಮೈಸೂರಿನ ಯುವರಾಜ ಕಾಲೇಜಿನಲ್ಲಿ ಬಿಎಸ್ಸಿ ನಂತರ ಮೈಸೂರು ವಿವಿಯಿಂದ ಕಾನೂನು ಪದವಿ ಪಡೆದಿದ್ದರು. ಚಿಕ್ಕಬೋರಯ್ಯ ಎಂಬ ವಕೀಲರ ಬಳಿ ಜ್ಯೂನಿಯರ್ ಆಗಿದ್ದು, ಬಳಿಕ 1978ರವರೆಗೆ ಸ್ವಂತ ವಕೀಲಿ ವೃತ್ತಿ ಆರಂಭಿಸಿದ್ದರು.
ರಾಜಕೀಯ ಜೀವನ:
1983ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಲೋಕದಳದಿಂದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಜಯಗಳಿಸಿದ್ದರು. ನಂತರ ಲೋಕದಳದಿಂದ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾಗ, ನೂತನವಾಗಿ ರಚಿಸಿದ್ದ ಕನ್ನಡ ಕಾವಲು ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.
1985ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲುವು ಪಡೆದಿದ್ದು, ಆ ವೇಳೆ ಪಶುಸಂಗೋಪನಾ ಸಚಿವರನ್ನಾಗಿ ನೇಮಕವಾಗಿದ್ದು, ಸಂಪುಟ ಪುನಾರಚನೆಯ ನಂತರ ರೇಷ್ಮೆ ಮತ್ತು ಸಾರಿಗೆ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.
1989ರಲ್ಲಿ ಕಾಂಗ್ರೆಸ್ ಅಲೆಯಿಂದ ಸಿದ್ದರಾಮಯ್ಯ ಚುನಾವಣೆಯಲ್ಲಿ ಪರಾಜಗೊಂಡಿದ್ದರು. ಜನತಾ ಪಕ್ಷ ಇಬ್ಭಾಗವಾದ ಸಂದರ್ಭದಲ್ಲಿ ಸಿದ್ದರಾಮಯ್ಯ ಜನತಾದಳ ಸೇರಿಕೊಂಡಿದ್ದರು. 1992ರಲ್ಲಿ ದೇವೇಗೌಡರು ಸಮಾಜವಾದಿ ಪಕ್ಷದಿಂದ ಜನತಾದಳ ಸೇರಿದಾಗ, ಜನತಾದಳದ ಕಾರ್ಯದರ್ಶಿಯಾಗಿದ್ದರು.
1994ರ ಚುನಾವಣೆಯಲ್ಲಿ ಗೆದ್ದು ಹಣಕಾಸು ಸಚಿವರಾದರು. 1999ರ ಚುನಾವಣೆ ವೇಳೆಯಲ್ಲಿ ಜನತಾದಳ 2 ಇಬ್ಭಾಗವಾದಾಗ, ದೇವೇಗೌಡರೊಂದಿಗೆ ಸೇರಿ ಜಾತ್ಯತೀ ಜನತಾದಳ ಪಕ್ಷದ ಅಧ್ಯಕ್ಷರಾದರು. 1999ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಪರಾಜಯಗೊಂಡಿದ್ದರು.
2004ರಲ್ಲಿ ಜಾತ್ಯತೀತ ಜನತಾದಳದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿತರಾಗಿದ್ದರು. 2004ರಲ್ಲಿ ಅತಂತ್ರ ವಿಧಾನಸಭೆ ರಚನೆಯಾದಾಗ ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚನೆಯಾದಾಗ ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡ 2008ರಲ್ಲಿ ನಡೆದ ವಿಧಾನಸಭೆಯ ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆಲುವು ಪಡೆದಿದ್ದರು. 2013ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷ ಜಯಭೇರಿ ಬಾರಿಸಿದ್ದು, ಸಿದ್ದರಾಮಯ್ಯನವರು ರಾಜ್ಯದ 22ನೇ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.