ಕರಾಚಿ: ನ್ಯೂಜಿಲ್ಯಾಂಡ್ ಆರಂಭಕಾರ ಡೇವನ್ ಕಾನ್ವೇ ಅವರ 4ನೇ ಶತಕದ ಬಳಿಕ ಕರಾಚಿ ಟೆಸ್ಟ್ ಪಂದ್ಯದ ಮೊದಲ ದಿನ ಪಾಕಿಸ್ಥಾನ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದೆ. ನ್ಯೂಜಿಲ್ಯಾಂಡ್ 6 ವಿಕೆಟಿಗೆ 309 ರನ್ ಗಳಿಸಿದೆ. ಇದರಲ್ಲಿ ಕಾನ್ವೇ ಕೊಡುಗೆ 122 ರನ್.
ಒಂದು ಹಂತದಲ್ಲಿ ನ್ಯೂಜಿಲ್ಯಾಂಡ್ ಒಂದೇ ವಿಕೆಟಿಗೆ 234 ರನ್ ಗಳಿಸಿ ದಾಪುಗಾಲಿಡುತ್ತಿತ್ತು. ಅನಂತರ ಆಫ್ ಸ್ಪಿನ್ನರ್ ಆಘಾ ಸಲ್ಮಾನ್ ಆಕರ್ಷಕ ಸ್ಪೆಲ್ ಮೂಲಕ ಪಾಕಿಸ್ಥಾನಕ್ಕೆ ಮೇಲುಗೈ ಒದಗಿಸಿದರು. ನಸೀಮ್ ಶಾ ಮತ್ತು ಅಬ್ರಾರ್ ಅಹ್ಮದ್ ಕೂಡ ಕೈ ಜೋಡಿಸಿದರು. 45 ರನ್ ಅಂತರದಲ್ಲಿ ನ್ಯೂಜಿಲ್ಯಾಂಡ್‌ನ 5 ವಿಕೆಟ್ ಉರುಳಿತು.
ಡೇವನ್ ಕಾನ್ವೇ 191 ಎಸೆತಗಳಿಗೆ ಜವಾಬಿತ್ತು 122 ರನ್ ಬಾರಿಸಿದರು. ಇದರಲ್ಲಿ 16 ಬೌಂಡರಿ, ಒಂದು ಸಿಕ್ಸರ್ ಸೇರಿತ್ತು. ಕಾನ್ವೇ 2 ಶತಕಗಳ ಜತೆಯಾಟದಲ್ಲಿ ಭಾಗಿಯಾದರು. ಟಾಮ್ ಲ್ಯಾಥಂ ಅವರೊಂದಿಗೆ ಮೊದಲ ವಿಕೆಟಿಗೆ 35.1 ಓವರ್‌ಗಳಿಂದ 134 ರನ್ ಪೇರಿಸಿದರು. ಇದರಲ್ಲಿ ಲ್ಯಾಥಂ ಪಾಲು 71 ರನ್ (100 ಎಸೆತ, 9 ಬೌಂಡರಿ). ಬಳಿಕ ನಾಯಕ ಕೇನ್ ವಿಲಿಯಮ್ಸನ್ (36) ಜತೆಗೂಡಿ ದ್ವಿತೀಯ ವಿಕೆಟಿಗೆ 103 ರನ್ ಗಳಿಸಿದರು.
ಮುಂದಿನದು ಪಾಕ್ ಬೌಲರ್‌ಗಳ ಆಟ. ಹೆನ್ರಿ ನಿಕೋಲ್ಸ್ (26), ಡ್ಯಾರಿಲ್ ಮಿಚೆಲ್ (3), ಮೈಕಲ್ ಬ್ರೇಸ್‌ವೆಲ್ (0) ಅವರನ್ನು ಬೇಗನೇ ಪೆವಿಲಿಯನ್ನಿಗೆ ಅಟ್ಟಿದರು. ಆಘಾ ಸಲ್ಮಾನ್ 3 ವಿಕೆಟ್, ನಸೀಮ್ ಶಾ 2 ವಿಕೆಟ್ ಕೆಡವಿದರು. ಕೀಪರ್ ಟಾಮ್ ಬ್ಲಿಂಡೆಲ್ 30 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇದು 2002ರ ಬಳಿಕ ನ್ಯೂಜಿಲ್ಯಾಂಡ್ ತಂಡದ ಮೊದಲ ಪಾಕ್ ಪ್ರವಾಸವಾಗಿದೆ. ಕರಾಚಿಯಲ್ಲೇ ನಡೆದ 2 ಪಂದ್ಯಗಳ ಕಿರು ಸರಣಿಯ ಮೊದಲ ಮುಖಾಮುಖೀ ಡ್ರಾಗೊಂಡಿತ್ತು.
ಸಂಕ್ಷಿಪ್ತ ಸ್ಕೋರ್:
ನ್ಯೂಜಿಲ್ಯಾಂಡ್-6 ವಿಕೆಟಿಗೆ 309 (ಕಾನ್ವೇ 122, ಲ್ಯಾಥಂ 71, ವಿಲಿಯಮ್ಸನ್ 36, ನಿಕೋಲ್ಸ್ 26, ಬ್ಲಿಂಡೆಲ್ ಬ್ಯಾಟಿಂಗ್ 30, ಆಘಾ ಸಲ್ಮಾನ್ 55ಕ್ಕೆ 3, ನಸೀಮ್ ಶಾ 44ಕ್ಕೆ 2, ಅಬ್ರಾರ್ ಅಹ್ಮದ್ 101ಕ್ಕೆ 1).