ಬೆಂಗಳೂರು : 2014 ರಲ್ಲಿ ಕನ್ನಡ ಚಿತ್ರರಂಗ ಹಾಗೂ ಕನ್ನಡ ಸಾಹಿತ್ಯ ಲೋಕವನ್ನು ಜಂಟಿ ಆಗಿಸಿದ ಅವಿರತ ಪ್ರತಿಷ್ಠಾನದ ‘ಕೇಳಿ ಕಥೆಯ’ ಕಾರ್ಯಕ್ರಮದ ಎರಡನೇ ಭಾಗ ಹಾಗೂ ಅಂತರ್ಜಾಲ ತಾಣದ ಉದ್ಘಾಟನೆ ಡಿಸೆಂಬರ್ 8 (2020)ರಂದು ಪಿವಿಆರ್ ಸಿನಿಮಾ, ಓರಿಯಾನ್ ಮಾಲ್ ನಲ್ಲಿ ನಡೆಯಲಿದೆ.
2014 ರಲ್ಲಿ ಅವಿರತ ಪ್ರತಿಷ್ಠಾನ ಕನ್ನಡ ಸಾಹಿತ್ಯ ಲೋಕದ ಕೆಲ ಕಥೆಗಳನ್ನು ಚಿತ್ರ ನಟರ ಧ್ವನಿಯಲ್ಲಿ, ಆಡಿಯೋ ರೂಪದಲ್ಲಿ ಹೊರ ತಂದಿತು. ಮೊದಲ ಹಂತದಲ್ಲಿ ಹೊರ ತಂದ 6 ಕಥೆಗಳ ಆಡಿಯೋ ಸಿ.ಡಿಗಳು, ನಿರೀಕ್ಷೆಗೂ ಮೀರಿ ದೇಶದ ಗಡಿದಾಟಿ ಕೇಳುಗರ ಮನಮುಟ್ಟಿತು. ಇದರಿಂದ ಬಂದ ಸಂಪೂರ್ಣ ಲಾಭವನ್ನು ಅವಿರತ ಪ್ರತಿಷ್ಠಾನ ಗಡಿಭಾಗದ ಪ್ರತಿಭಾವಂತ ಗ್ರಾಮೀಣ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಉಪಯೋಗಿಲಾಯಿತು. ಅವಿರತ ಪ್ರತಿಷ್ಠಾನದ ಈ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆಯೂ ವ್ಯಕ್ತವಾಗಿತ್ತು.
ಇದೀಗ ಅವಿರತ ಪ್ರತಿಷ್ಠಾನ ‘ಕೇಳಿ ಕಥೆಯ ಭಾಗ -2’ ಕಾರ್ಯಕ್ರಮವನ್ನು ನಡೆಸಲು ಮುಂದಾಗಿದ್ದು, ಇದರೊಂದಿಗೆ ಅಂತರ್ಜಾಲ ತಾಣಕ್ಕೂ ಚಾಲನೆ ನೀಡಲಿದೆ.ಈ ಬಾರಿಯೂ ಕನ್ನಡದ ಪ್ರಮುಖ ಕಥೆಗಳಿಗೆ ಪ್ರತಿಭಾವಂತ ನಟ -ನಟಿಯರು ಧ್ವನಿಯ ಮೂಲಕ ಭಾವ ತುಂಬಿದ್ದಾರೆ. ಕುವೆಂಪು, ವಿವೇಕ್ ಶಾನಭಾಗ್ ಸೇರಿದಂತೆ ಖ್ಯಾತಿನಾಮರ ಕಥೆಗಳನ್ನು ಓದಿದ್ದಾರೆ.
ಕುವೆಂಪು ಅವರ ‘ಯಾರೂ ಅರಿಯದ ವೀರ’ ಕಥೆಗೆ ವಶಿಷ್ಠ ಸಿಂಹ ಧ್ವನಿ ಆಗಿದ್ದಾರೆ. ದೇವನೂರ ಮಹಾದೇವ ಅವರ ‘ಡಾಂಬರು ಬಂದದು’ ಕಥಾ ಭಾಗಕ್ಕೆ ನಟ ಧನಂಜಯ ಧ್ವನಿ ಆಗಿದ್ದಾರೆ. ವೈದೇಹಿ ಅವರ ‘ಒಗಟು’ ಕಥೆಯನ್ನು ನಟಿ ಶ್ರುತಿ ಹರಿಹರನ್ ಓದಿದ್ದಾರೆ. ವಿವೇಕ್ ಶಾನಭಾಗ್ ಅವರ ‘ನಿರ್ವಾಣ’ ಕಥೆಯನ್ನು ನಟ ಅಚ್ಯುತ್ ಕುಮಾರ್ ಓದಿದ್ದಾರೆ. ಯಶವಂತ್ ಚಿತ್ತಲರ ‘ಕಥೆಯಾದಳು ಹುಡುಗಿ’ಯನ್ನು ರಾಜ್ ಬಿ ಶೆಟ್ಟಿ ಓದಿದ್ದಾರೆ. ಬೋಳುವಾರು ಮಹಮ್ಮದ್ ಅವರ ‘ಗಾಂಧಿ ಮತ್ತು ಕಾಗೆಗಳು’ ಕಥಾ ಭಾಗವನ್ನು ಗಿರಿಜಾ ಲೋಕೇಶ್ ಓದಿದ್ದಾರೆ. ಕೆ.ವಿ ತಿರುಮಲೇಶ್ ಅವರ ‘ಬೆಳ್ಳಿ ದೆವ್ವ’ ಕಥೆಯನ್ನು ಗಿರಿಜಾ ಲೋಕೇಶ್ ಓದಿದ್ದಾರೆ.
ಕಾರ್ಯಕ್ರಮದಲ್ಲಿ ಖ್ಯಾತ ಕಥೆಗಾರರಾಗಿರುವ ವಸುಧೇಂದ್ರ, ಗಾಯಕಿ ಪಲ್ಲವಿ,ನಟ ಕಿಶೋರ್,ನಟ ಧನಂಜಯ, ಬಿ.ಸುರೇಶ್, ವಶಿಷ್ಠ ಸಿಂಹ ಹಾಗೂ ಇತರ ಪ್ರಮುಖ ಗಣ್ಯರು ಪಾಲ್ಗೊಳ್ಳಲಿದ್ದಾರೆ.