Advertisement

ಉತ್ಸಾಹದಲ್ಲಿ ಭಾರತ; ಒತ್ತಡದಲ್ಲಿ ನ್ಯೂಜಿಲ್ಯಾಂಡ್‌

12:30 AM Jan 26, 2019 | Team Udayavani |

ಮೌಂಟ್‌ ಮೌಂಗನುಯಿ: ನ್ಯೂಜಿಲ್ಯಾಂಡ್‌ ಪ್ರವಾಸವನ್ನು ಅಧಿಕಾರಯುತವಾಗಿಯೇ ಆರಂಭಿಸಿದ ಭಾರತ ತಂಡ, ಶನಿವಾರ ಇಲ್ಲಿನ “ಬೇ ಓವಲ್‌’ನಲ್ಲಿ ವಿಲಿಯಮ್ಸನ್‌ ಪಡೆಯನ್ನು ದ್ವಿತೀಯ ಏಕದಿನ ಪಂದ್ಯದಲ್ಲಿ ಎದುರಿಸಲಿದೆ. ಗೆಲುವಿನ ಓಟವನ್ನು ಮುಂದುವರಿಸಿ ಸರಣಿ ಮುನ್ನಡೆಯನ್ನು 2-0 ಅಂತರಕ್ಕೆ ಹೆಚ್ಚಿಸುವ ಅಪೂರ್ವ ಅವಕಾಶವೊಂದು ಕೊಹ್ಲಿ ಪಡೆಯ ಮುಂದಿದೆ. ನೇಪಿಯರ್‌ ಪ್ರದರ್ಶನವನ್ನೇ ಪುನರಾವರ್ತಿ ಸಿದರೆ ಟೀಮ್‌ ಇಂಡಿಯಾಕ್ಕೆ ಇದು ಅಸಾಧ್ಯ ಸವಾಲೇನೂ ಅಲ್ಲ.

Advertisement

ಆದರೆ ತವರಿನಲ್ಲಿ ಯಾವತ್ತೂ ಬಲಿಷ್ಠವಾಗಿ ಗೋಚರಿಸುವ ನ್ಯೂಜಿಲ್ಯಾಂಡ್‌ ತಂಡ ನೇಪಿಯರ್‌ನಲ್ಲಿ ಶರಣಾದ ರೀತಿ ಕಂಡಾಗ ಅಚ್ಚರಿಯಾಗುತ್ತದೆ. ಇದಕ್ಕೆ ಮುಖ್ಯ ಕಾರಣ, ಸ್ಪಿನ್‌ ದಾಳಿಯನ್ನು ನಿಭಾಯಿಸುವಲ್ಲಿ ಎಡವಿದ್ದು. ಕುಲದೀಪ್‌ ಯಾದವ್‌, ಯಜುವೇಂದ್ರ ಚಾಹಲ್‌ ಸೇರಿ ಕೊಂಡು ಆತಿಥೇಯರನ್ನು ಪರದಾಡುವಂತೆ ಮಾಡಿದರು. ಇವರ ದಾಳಿಯ ಮರ್ಮವನ್ನರಿಯಲು ಕಿವೀಸ್‌ ಬ್ಯಾಟ್ಸ್‌ಮನ್‌ ಗಳು ಸಂಪೂರ್ಣ ವಿಫ‌ಲರಾದರು. ಜತೆಗೆ ಪೇಸ್‌ ಬೌಲರ್‌ ಮೊಹಮ್ಮದ್‌ ಶಮಿ ಅಪಾಯಕಾರಿ ಆರಂಭಿಕರಿಬ್ಬರನ್ನೂ ಬೇಗನೇ ಪೆವಿಲಿಯನ್ನಿಗೆ ರವಾನಿಸಿ ಭಾರತಕ್ಕೆ ಮೇಲುಗೈ ಒದಗಿಸುವಂತೆ ಮಾಡಿದ್ದನ್ನು ಮರೆಯುವಂತಿಲ್ಲ.

ಬ್ಯಾಟಿಂಗ್‌ ಯಶಸ್ಸು ನಿರ್ಣಾಯಕ
ಭಾರತದ ಚೇಸಿಂಗ್‌ ಕೂಡ ಗಮನಾರ್ಹ ಮಟ್ಟದಲ್ಲಿತ್ತು. ರೋಹಿತ್‌ ಶರ್ಮ ಬೇಗನೇ ನಿರ್ಗಮಿಸಿದರೂ ಧವನ್‌ ಕ್ರೀಸ್‌ ಆಕ್ರಮಿಸಿಕೊಂಡು ಅಜೇಯ 75 ರನ್‌ ಹೊಡೆದರು. ಕೊಹ್ಲಿ ಕೂಡ ಕಪ್ತಾನನ ಆಟವಾಡಿ ಭಾರತಕ್ಕೆ 8 ವಿಕೆಟ್‌ಗಳ ಭರ್ಜರಿ ಜಯ ಒಲಿಯುವಂತೆ ಮಾಡಿದರು. ಆಸ್ಟ್ರೇಲಿಯದ ಸರಣಿಶ್ರೇಷ್ಠ ಆಟಗಾರ ಧೋನಿ, ಮಧ್ಯಮ ಕ್ರಮಾಂಕದ ಕೇದಾರ್‌ ಜಾಧವ್‌ ಅವರ ಬ್ಯಾಟಿಂಗ್‌ ಬಾಕಿ ಉಳಿದಿದೆ. ಇವರ ಸಹಿತ ಅಂಬಾಟಿ ರಾಯುಡು, ದಿನೇಶ್‌ ಕಾರ್ತಿಕ್‌ ಕೂಡ ಕಿವೀಸ್‌ ನೆಲದಲ್ಲಿ ಕ್ಲಿಕ್‌ ಆದರೆ ಭಾರತದ “ವಿಶ್ವಕಪ್‌ ಬ್ಯಾಟಿಂಗ್‌’ ಲೈನ್‌ಅಪ್‌ ಬಹುತೇಕ ಅಂತಿಮಗೊಳ್ಳಲಿದೆ. ಈ ಯಾದಿಗೆ ಶುಭಮನ್‌ ಗಿಲ್‌ ಅವರನ್ನೂ ಸೇರಿಸಬಹುದು. ನ್ಯೂಜಿಲ್ಯಾಂಡ್‌ ಮತ್ತು ಇಂಗ್ಲೆಂಡ್‌ ಟ್ರ್ಯಾಕ್‌ಗಳಲ್ಲಿ ಬಹಳಷ್ಟು ಸಾಮ್ಯತೆ ಇರುವುದರಿಂದ ಈ ಸರಣಿಯಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಯಶಸ್ಸು ಸಾಧಿಸುವುದು ಮುಖ್ಯ.

ತಂಡ ಸೇರಿಕೊಳ್ಳುವ ಪಾಂಡ್ಯ
ನಿಷೇಧದಿಂದ ಬಿಡುಗಡೆಗೊಂಡ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರಿಗೆ ಭಾರತ ತಂಡದ ಬಾಗಿಲು ತೆರೆದಿದ್ದು, ಅವರು ಈಗಾಗಲೇ ನ್ಯೂಜಿಲ್ಯಾಂಡಿನತ್ತ ಪಯಣ ಬೆಳೆಸಿದ್ದಾರೆ. ತಂಡದ ಯಾದಿಯಲ್ಲೂ ಪಾಂಡ್ಯ ಹೆಸರು ಗೋಚರಿಸಿದೆ. ಆದರೆ ಅವರು ಶನಿವಾರದ ಪಂದ್ಯದ ಆಯ್ಕೆಗೆ ಲಭಿಸುವ ಸಾಧ್ಯತೆ ಇಲ್ಲ. ಪಾಂಡ್ಯ ಪ್ರವೇಶವಾದರೆ ವಿಜಯ್‌ ಶಂಕರ್‌ಗೆ ಸ್ಥಾನ ನಷ್ಟವಾಗಲಿದೆ.

“ಬೇ ಓವಲ್‌’ನಲ್ಲಿ ಭಾರತ ಈವರೆಗೆ ಆಡಿಲ್ಲ. ಇಲ್ಲಿ 6 ಪಂದ್ಯವಾಡಿರುವ ನ್ಯೂಜಿಲ್ಯಾಂಡ್‌ ಮೂರನ್ನು ಗೆದ್ದು, ಉಳಿದ ಮೂರರಲ್ಲಿ ಸೋತಿದೆ. ಇಲ್ಲಿನದು ನಿಧಾನ ಗತಿಯ ಟ್ರ್ಯಾಕ್‌ ಎಂದು ಹೇಳಲಾಗುತ್ತಿದೆ. ಹೀಗಾಗಿ ವಿಜಯ್‌ ಶಂಕರ್‌ ಬದಲು ರವೀಂದ್ರ ಜಡೇಜ ಅವಕಾಶ ಪಡೆಯಲೂಬಹುದು. 

Advertisement

ಸ್ಪಿನ್‌ ಭೀತಿಯಲ್ಲಿ ಕಿವೀಸ್‌
ಕಳೆದ ಸಲ ಭಾರತವನ್ನು 4-0 ಅಂತರದಿಂದ ಮಣಿಸಿ ಮೆರೆದಾಡಿದ್ದ ನ್ಯೂಜಿಲ್ಯಾಂಡ್‌ ಈ ಬಾರಿ ತೀವ್ರ ಒತ್ತಡಕ್ಕೆ ಸಿಲುಕಿದೆ. ಇದಕ್ಕೆ ಕಾರಣ ಬ್ಯಾಟಿಂಗ್‌ ವೈಫ‌ಲ್ಯ. ಹಾಗೆ ನೋಡಹೋದರೆ ಕಿವೀಸ್‌ ಬ್ಯಾಟಿಂಗ್‌ ಸರದಿ ಅತ್ಯಂತ ಘಾತಕ. ಇದು ಏಕದಿನಕ್ಕೆ ಹೇಳಿ ಮಾಡಿಸಿದಂತಿದೆ. ಗಪ್ಟಿಲ್‌, ಲ್ಯಾಥಂ, ವಿಲಿಯಮ್ಸನ್‌, ಮುನ್ರೊ, ಸ್ಯಾಂಟ್ನರ್‌, ಟಯ್ಲರ್‌, ನಿಕೋಲ್ಸ್‌ ಅವರೆಲ್ಲ ಮುನ್ನುಗ್ಗಿ ಬಾರಿಸಬಲ್ಲ ಛಾತಿ ಉಳ್ಳವರೇ. ಇವರಲ್ಲಿ ಇಬ್ಬರು ಕ್ರೀಸ್‌ ಆಕ್ರಮಿಸಿಕೊಂಡರೂ ಭಾರತಕ್ಕೆ ಅಪಾಯ ತಪ್ಪಿದ್ದಲ್ಲ. ಆದರೆ ಇವರಲ್ಲಿ ಬಹುತೇಕ ಮಂದಿ ಸ್ಪಿನ್‌ ನಿಭಾವಣೆಯಲ್ಲಿ ಹಿಂದುಳಿದಿದ್ದಾರೆಂಬುದೇ ಭಾರತದ ಪಾಲಿನ ಸಮಾಧಾನದ ಸಂಗತಿ. ನ್ಯೂಜಿಲ್ಯಾಂಡಿನ ಬೌಲಿಂಗ್‌ ಭಾರೀ ಘಾತಕವೇನೂ ಅಲ್ಲ. ಬೌಲ್ಟ್, ಸೌಥಿ ಅವರನ್ನು ಎಚ್ಚರಿಕೆಯಿಂದ ನಿಭಾಯಿಸಿದರೆ ಸವಾಲಿನ ಮೊತ್ತಕ್ಕೇನೂ ಕೊರತೆ ಎದುರಾಗದು.

ಟೀಮ್‌ ಇಂಡಿಯಾಕ್ಕೆ ವಿಶಿಷ್ಟ  ಸ್ವಾಗತ
ನ್ಯೂಜಿಲ್ಯಾಂಡ್‌ ವಿರುದ್ಧ 2ನೇ ಏಕದಿನ ಪಂದ್ಯಕ್ಕಾಗಿ ಇಲ್ಲಿನ “ಬೇ ಓವಲ್‌’ಗೆ ಆಗಮಿಸಿದ ಭಾರತ ತಂಡಕ್ಕೆ ವಿಶೇಷ ಸ್ವಾಗತ ದೊರಕಿದೆ. ಇಲ್ಲಿನ “ಮಾವೋರಿ’ ಬುಡಕಟ್ಟು ಜನಾಂಗ ವಿರಾಟ್‌ ಕೊಹ್ಲಿ ಪಡೆಯನ್ನು ಸಾಂಪ್ರದಾಯಿಕ ರೀತಿಯಲ್ಲಿ ಬರಮಾಡಿಕೊಂಡಿದೆ. ಇದನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಪ್ರಕಟಿಸಿದೆ. 

ಭಾರತ ತಂಡದ ಕೋಚ್‌ ರವಿಶಾಸ್ತ್ರಿ ಕೂಡ ಈ ವಿಷಯವನ್ನು ಟ್ವೀಟ್‌ ಮಾಡಿ, “ಮಾವೋರಿ ಪೌಹಿರಿ ಮೂಲಕ ಭವ್ಯ ಸ್ವಾಗತ ಹಾಗೂ ಆಶೀರ್ವಾದ ದೊರಕಿದೆ’ ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next