Advertisement

ಸರಣಿ ಸಮಬಲದ ಒತ್ತಡದಲ್ಲಿ ಭಾರತ

10:00 AM Feb 09, 2020 | Sriram |

ಆಕ್ಲೆಂಡ್‌: ಟೀಮ್‌ ಇಂಡಿಯಾ ಮೊದಲ ಸಲ ನ್ಯೂಜಿಲ್ಯಾಂಡ್‌ ಪ್ರವಾಸದಲ್ಲಿ ಒತ್ತಡಕ್ಕೆ ಸಿಲುಕಿದೆ. ಟಿ20 ಸರಣಿಯನ್ನು 5-0 ಕ್ಲೀನ್‌ಸ್ವೀಪ್‌ ಆಗಿ ವಶಪಡಿಸಿಕೊಂಡ ಕೊಹ್ಲಿ ಪಡೆ, ಏಕದಿನದಲ್ಲಿ ಸೋಲಿನ ಆರಂಭ ಕಂಡಿದೆ. 3 ಪಂದ್ಯಗಳ ಸರಣಿಯನ್ನು ಸಮಬಲಕ್ಕೆ ತರಬೇಕಾದರೆ ಶನಿವಾರದ ಆಕ್ಲೆಂಡ್‌ ಸಮರದಲ್ಲಿ ಗೆದ್ದು ಬರಲೇಬೇಕಿದೆ.

Advertisement

ಆಕ್ಲೆಂಡ್‌ನ‌ಲ್ಲಿ ನಡೆದದ್ದು ಬೃಹತ್‌ ಮೊತ್ತದ ಸಮರ. ಭಾರತ ಬ್ಯಾಟಿಂಗ್‌ನಲ್ಲಿ ಮೆರೆದರೂ ಕಳಪೆ ಬೌಲಿಂಗ್‌ ಹಾಗೂ ಅಷ್ಟೇ ಕಳಪೆ ಫೀಲ್ಡಿಂಗ್‌ನಿಂದ ಪಂದ್ಯವನ್ನು ಕೈಚೆಲ್ಲಿತು. 347 ರನ್‌ ಪೇರಿಸಿದರೂ ಪಂದ್ಯವನ್ನು ಉಳಿಸಿಕೊಳ್ಳಲಾಗಲಿಲ್ಲ. ಒಟ್ಟು 29 ರನ್ನನ್ನು ಎಕ್ಸ್‌ಟ್ರಾ ರೂಪದಲ್ಲಿ ನೀಡಿತು. ಇದರಲ್ಲಿ 24 ವೈಡ್‌ ಎಸೆತಗಳಾಗಿದ್ದವು. ಅಂದರೆ, ನ್ಯೂಜಿಲ್ಯಾಂಡಿಗೆ 4 ಹೆಚ್ಚುವರಿ ಓವರ್‌ ಬ್ಯಾಟಿಂಗಿಗೆ ಲಭಿಸಿದಂತಾಗಿತ್ತು. ಹೀಗಾಗಿ “ಸೆಡ್ಡನ್‌ ಪಾರ್ಕ್‌’ನ ಬ್ಯಾಟಿಂಗ್‌ ಟ್ರ್ಯಾಕ್‌ನಲ್ಲಿ ಚೇಸಿಂಗ್‌ ಕಠಿನವೆನಿಸಲಿಲ್ಲ.

ಈಡನ್‌ ಪಾರ್ಕ್‌ ಸವಾಲು
ಇನ್ನಿರುವುದು “ಈಡನ್‌ ಪಾರ್ಕ್‌’ ಸವಾಲು. ಇದು ಕೂಡ ಬ್ಯಾಟಿಂಗಿಗೆ ನೆರವು ನೀಡುವ ಟ್ರ್ಯಾಕ್‌. ಇಲ್ಲಿ ಭಾರತದ ದಾಖಲೆ ಕೂಡ ಉತ್ತಮ ಮಟ್ಟದಲ್ಲಿದೆ. ಆದರೆ ಆಕ್ಲೆಂಡ್‌ನ‌ಲ್ಲಿ 2017ರ ಬಳಿಕ ಏಕದಿನ ಅಂತಾರಾಷ್ಟ್ರೀಯ ಪಂದ್ಯ ನಡೆದಿಲ್ಲ. ಅಂದು ನ್ಯೂಜಿಲ್ಯಾಂಡ್‌-ದಕ್ಷಿಣ ಆಫ್ರಿಕಾ ಮುಖಾಮುಖೀಯಾಗಿದ್ದವು. ಇದರಲ್ಲಿ ಕಿವೀಸ್‌ 6 ವಿಕೆಟ್‌ಗಳ ಸೋಲುಂಡಿತ್ತು.

ಬ್ಯಾಟಿಂಗ್‌ ಟ್ರ್ಯಾಕ್‌ನಲ್ಲಿ ಯಾವ ತಂಡಕ್ಕೂ ಚೇಸಿಂಗ್‌ ದೊಡ್ಡ ಸವಾಲಾಗದು. ಬ್ಯಾಟಿಂಗ್‌ನಲ್ಲಿ ಎಷ್ಟೇ ದಾಖಲೆ ಬರೆಯಬಹುದು. ಹೀಗಾಗಿ ಇಲ್ಲಿ ಬೌಲಿಂಗ್‌ ಮತ್ತು ಫೀಲ್ಡಿಂಗ್‌ನಲ್ಲಿ ಜಾಣ್ಮೆ ಪ್ರದರ್ಶಿಸಬೇಕಿದೆ. ಮಿಡ್ಲ್ ಓವರ್‌ಗಳಲ್ಲಿ ವಿಕೆಟ್‌ ಕೀಳದೆ ಹೋದರೆ ಗೆಲುವು ಹತ್ತಿರ ಕೂಡ ಸುಳಿಯದು. ವೆಸ್ಟ್‌ ಇಂಡೀಸ್‌ ಎದುರು ಚೆನ್ನೈಯಲ್ಲಿ, ಆಸ್ಟ್ರೇಲಿಯ ವಿರುದ್ಧ ಮುಂಬಯಿಯಲ್ಲಿ, ಮೊನ್ನೆ ಹ್ಯಾಮಿಲ್ಟನ್‌ನಲ್ಲಿ ಭಾರತ ಈ ಕಾರಣದಿಂದಾಗಿಯೇ ಸೋಲು ಕಾಣಬೇಕಾಯಿತು.

ಆದರೆ ಬಲಿಷ್ಠ ಆಸ್ಟ್ರೇಲಿಯ ವಿರುದ್ಧ ವಾಂಖೇಡೆಯಲ್ಲಿ ಎಡವಿದ ಬಳಿಕ ಭಾರತ ಎದ್ದು ನಿಂತು ಸರಣಿ ವಶಪಡಿಸಿಕೊಂಡ ತಾಜಾ ನಿದರ್ಶನ ಎದುರಿಗಿದೆ. ಆಕ್ಲೆಂಡ್‌ನ‌ಲ್ಲಿ ಕಣಕ್ಕಿಳಿಯುವಾಗ ಕೊಹ್ಲಿ ಪಡೆಗೆ ಇದು ಸ್ಫೂರ್ತಿ ಆಗಬೇಕಿದೆ.

Advertisement

ಜಾಧವ್‌ ಬದಲು ಪಾಂಡೆ?
ಭಾರತದ ಬ್ಯಾಟಿಂಗ್‌ ಲೈನ್‌ಅಪ್‌ ಆಕರ್ಷಕ ವಾಗಿದೆ. ಅಗರ್ವಾಲ್‌-ಪೃಥ್ವಿ ಶಾ ಪದಾರ್ಪಣ ಪಂದ್ಯದಲ್ಲಿ ಭರವಸೆಯನ್ನಂತೂ ಮೂಡಿಸಿದ್ದಾರೆ. ಇಬ್ಬರೂ ಇನ್ನಿಂಗ್ಸ್‌ ವಿಸ್ತರಿಸುವುದು ಮುಖ್ಯ. ಕೊಹ್ಲಿ, ಅಯ್ಯರ್‌, ರಾಹುಲ್‌ ಭರ್ಜರಿಯಾಗಿ ಮುನ್ನುಗ್ಗಿದ್ದರು. ಆದರೆ ಕೇದಾರ್‌ ಜಾಧವ್‌ ಮುಂದುವರಿಯುವ ಬಗ್ಗೆ ಅನುಮಾನವಿದೆ. ಸ್ಪಿನ್‌ ಬೌಲಿಂಗ್‌ ಕೂಡ ಮಾಡಬಲ್ಲ ಅವರನ್ನು ತಂಡದ ಸಮತೋಲನದ ದೃಷ್ಟಿಯಿಂದ ಆಡುವ ಬಳಗಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ಜಾಧವ್‌ಗೆ ಒಂದೂ ಓವರ್‌ ನೀಡದೆ ಮೂಲೆಗುಂಪು ಮಾಡಲಾಯಿತು. ಹೀಗಾಗಿ ಜಾಧವ್‌ ಬದಲು ಮನೀಷ್‌ ಪಾಂಡೆ ಆಡಲಿಳಿದರೆ ಅಚ್ಚರಿಯೇನಿಲ್ಲ. ಅಥವಾ ಶಿವಂ ದುಬೆಗೆ ಅವಕಾಶ ಲಭಿಸಲೂ ಬಹುದು.

ಬೌಲಿಂಗ್‌ ವಿಭಾಗದಲ್ಲಿ ಶಾದೂìಲ್‌ ಠಾಕೂರ್‌ ಬದಲು ಸೈನಿ ಆಡುವ ಸಾಧ್ಯತೆ ಇದೆ.

ಜಾಮೀಸನ್‌ ಪದಾರ್ಪಣೆ
ನ್ಯೂಜಿಲ್ಯಾಂಡ್‌ ನಾಯಕ ಕೇನ್‌ ವಿಲಿಯಮ್ಸನ್‌ ಈ ಪಂದ್ಯಕ್ಕೂ ಲಭ್ಯರಾಗುತ್ತಿಲ್ಲ. ಆದರೆ ವಿಕೆಟ್‌ ಕೀಪರ್‌ ಟಾಮ್‌ ಲ್ಯಾಥಂ ತನಗೆ ಅದೃಷ್ಟ ಇದೆ ಎಂಬುದನ್ನು ನಿರೂಪಿಸಿದ್ದಾರೆ. ಹ್ಯಾಮಿಲ್ಟನ್‌ ಚೇಸಿಂಗ್‌ ವೇಳೆ ಅವರ ಹಾಗೂ ರಾಸ್‌ ಟೇಲರ್‌ ನಡುವಿನ 138 ರನ್‌ ಜತೆಯಾಟ ನಿರ್ಣಾಯಕವಾಗಿತ್ತು. ಟೇಲರ್‌ 109 ರನ್‌ ಬಾರಿಸಿದರೆ, ಲ್ಯಾಥಂ 69 ರನ್‌ ಸಿಡಿಸಿದರು. ಆರಂಭಿಕರಾದ ಗಪ್ಟಿಲ್‌-ನಿಕೋಲ್ಸ್‌ ಗಟ್ಟಿಮುಟ್ಟಾದ ಅಡಿಪಾಯ ನಿರ್ಮಿಸಿದ್ದರು.

ನ್ಯೂಜಿಲ್ಯಾಂಡಿನ ಬೌಲಿಂಗ್‌ ಮಾತ್ರ ಧೂಳೀಪಟವಾಗಿತ್ತು. ಶನಿವಾರ ಆಕ್ಲೆಂಡ್‌ನ‌ವರೇ ಆದ ಲಂಬೂ ವೇಗಿ ಕೈಲ್‌ ಜಾಮೀಸನ್‌ ಊರ ಅಭಿಮಾನಿಗಳ ಸಮ್ಮುಖದಲ್ಲಿ ಏಕದಿನಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಇವರಿಗಾಗಿ ಐಶ್‌ ಸೋಧಿ ಹೊರಗುಳಿಯಲಿದ್ದಾರೆ ಎಂದು ಕಿವೀಸ್‌ ತಿಳಿಸಿದೆ. ಅನಾರೋಗ್ಯದಿಂದಾಗಿ ಸ್ಕಾಟ್‌ ಕ್ಯುಗೆಲಿನ್‌ ಈ ಪಂದ್ಯದಲ್ಲಿ ಆಡುತ್ತಿಲ್ಲ.

ಸಂಭಾವ್ಯ ತಂಡಗಳು
ಭಾರತ: ಮಾಯಾಂಕ್‌ ಅಗರ್ವಾಲ್‌, ಪೃಥ್ವಿ ಶಾ, ವಿರಾಟ್‌ ಕೊಹ್ಲಿ (ನಾಯಕ), ಶ್ರೇಯಸ್‌ ಅಯ್ಯರ್‌, ಕೆ.ಎಲ್‌. ರಾಹುಲ್‌, ಮನೀಷ್‌ ಪಾಂಡೆ, ರವೀಂದ್ರ ಜಡೇಜ, ನವದೀಪ್‌ ಸೈನಿ/ಶಾದೂìಲ್‌ ಠಾಕೂರ್‌, ಯಜುವೇಂದ್ರ ಚಹಲ್‌, ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬುಮ್ರಾ.

ನ್ಯೂಜಿಲ್ಯಾಂಡ್‌: ಮಾರ್ಟಿನ್‌ ಗಪ್ಟಿಲ್‌, ಹೆನ್ರಿ ನಿಕೋಲ್ಸ್‌, ಟಾಮ್‌ ಬ್ಲಿಂಡೆಲ್‌, ರಾಸ್‌ ಟೇಲರ್‌, ಟಾಮ್‌ ಲ್ಯಾಥಂ (ನಾಯಕ), ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌, ಜಿಮ್ಮಿ ನೀಶಮ್‌, ಮಿಚೆಲ್‌ ಸ್ಯಾಂಟ್ನರ್‌, ಕೈಲ್‌ ಜಾಮೀಸನ್‌, ಹಾಮಿಶ್‌ ಬೆನೆಟ್‌, ಟಿಮ್‌ ಸೌಥಿ.

ಆರಂಭ: ಬೆಳಗ್ಗೆ 7.30

ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next